ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಅವರು ‘Love…ಲಿ’ ಸಿನಿಮಾದ ಟ್ರೇಲರ್‌ ಬಿಡುಗಡೆಗೊಳಿಸಿದ್ದಾರೆ. ಚೇತನ್‌ ಕೇಶವ್‌ ನಿರ್ದೇಸನದಲ್ಲಿ ವಸಿಷ್ಠ ಸಿಂಹ ಅಭಿನಯಿಸಿರುವ ಸಿನಿಮಾ ಜೂನ್‌ 14ರಂದು ತೆರೆಕಾಣಲಿದೆ. ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್‌ ಚಿತ್ರದ ನಾಯಕನಟಿ.

ಚೇತನ್‌ ಕೇಶವ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ನಟಿಸಿರುವ ಬಹುನಿರೀಕ್ಷಿತ ‘Love…ಲಿ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಟ, ನಿರ್ದೇಶಕ ರಿಷಭ್‌ ಶೆಟ್ಟಿ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಕೆಲ ನೈಜ ಘಟನೆಗಳ ಪ್ರೇರಣೆಯಿಂದ ಚಿತ್ರಕಥೆ ಮಾಡಿರುವುದಾಗಿ ನಿರ್ದೇಶಕ ಚೇತನ್‌ ಕೇಶವ್‌ ಹೇಳಿದ್ದರು. ಮಾಸ್‌ ಮತ್ತು ಲವ್‌ಸ್ಟೋರಿ ಸಿನಿಮಾ ಎನ್ನುವುದಕ್ಕೆ ಟ್ರೇಲರ್‌ ಸಾಕ್ಷ್ಯ ನುಡಿಯುತ್ತದೆ. ಲವ್‌ ಮತ್ತು ಆಕ್ಷನ್‌ನ ಇಂಟೆನ್ಸ್‌ ಸೀನ್‌ಗಳು ಟ್ರೇಲರ್‌ನಲ್ಲಿ ಕಾಣಿಸುತ್ತವೆ. ಇದೇ ಮೊದಲ ಬಾರಿಗೆ ವಸಿಷ್ಠ ಸಿಂಹ ಅವರು ಸಾಕಷ್ಟು ವೇರಿಯೇಷನ್ಸ್‌ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿ ಸ್ಟೆಫಿ ಪಟೇಲ್‌ ಅವರ ಪಾತ್ರಕ್ಕೂ ಹೆಚ್ಚು ಸ್ಕೋಪ್‌ ಇರುವಂತಿದೆ. ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಹಿತವೆನಿಸುವ ಹಾಗಿದೆ.

ಅಭುವನಸ ಕ್ರಿಯೇಷನ್ಸ್ ಬ್ಯಾನರ್‌ನಡಿ ರವೀಂದ್ರ ಕುಮಾರ್ ಅವರು ನಿರ್ಮಿಸಿರುವ ಚಿತ್ರವಿದು. ಟ್ರೇಲರ್‌ ರಿಲೀಸ್‌ ಮಾಡಿ ಮಾತನಾಡಿದ ರಿಷಭ್‌ ಶೆಟ್ಟಿ, ”ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರ ನೋಡಿ ವಸಿಷ್ಠ ಅವರ ಧ್ವನಿಯನ್ನು ಇಮಿಟೇಟ್‌ ಮಾಡುತ್ತಿದ್ದೆ! ಟ್ರೇಲರ್‌ ತುಂಬಾ ಆಕರ್ಷಕವಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ಭರವಸೆ ಇದೆ‌’ ಎಂದು ಶುಭ ಹಾರೈಸಿದರು. ಟ್ರೇಲರ್‌ ರಿಲೀಸ್‌ ಇವೆಂಟ್‌ನಲ್ಲಿ ನಟರಾದ ವಿನೋದ್ ಪ್ರಭಾಕರ್, ನವೀನ್ ಶಂಕರ್, ಗರುಡ ರಾಮ್, ಶಿವರಾಜ್ ಕೆ ಆರ್ ಪೇಟೆ, ಬೃಂದಾ ಆಚಾರ್ಯ, ಪೃಥ್ವಿ ಅಂಬರ್ ಸೇರಿದಂತೆ ಹಲವು ನಿರ್ಮಾಪಕರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ನಿರ್ದೇಶಕ ಚೇತನ್‌ ಕೇಶವ್‌ ಆರು ವರ್ಷಗಳ ಹಿಂದೆ ಮಾಡಿದ್ದ ಸ್ಕ್ರಿಪ್ಟ್‌ ಇದು. ಕಳೆದ ಮೂರು ವರ್ಷಗಳಿಂದ ಸಿನಿಮಾಗಾಗಿ ಹಗಲಿರುಳೂ ಶ್ರಮಿಸಿದ್ದಾರೆ. ಸಿನಿಮಾ ಬಗ್ಗೆ ಹೇಳುವ ಅವರು, ‘ಟ್ರೇಲರ್ ನೋಡಿದಾಗ ಇದು ಆಕ್ಷನ್ ಚಿತ್ರ ನಾ? ಸೆಂಟಿಮೆಂಟ್ ಚಿತ್ರ ನಾ? ಎಂಬ ಪ್ರಶ್ನೆ ಮೂಡಬಹುದು. ಆದರೆ ಇದನ್ನೆಲ್ಲಾ ಟ್ರೇಲರ್‌ನಲ್ಲಿ ತೋರಿಸಿದ್ದೇವೆ. ಸಿನಿಮಾದಲ್ಲಿ ಬೇರೆನೇ ಇದೆ. ಚಿತ್ರ ನೋಡುವಾಗ ನಿಮಗೆ ಉತ್ತರ ಸಿಗಲಿದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸವಾಗದ ಚಿತ್ರ ಎಂದು ಹೇಳಬಹುದು’ ಎನ್ನುತ್ತಾರೆ. ಅನೂಪ್ ಸೀಳಿನ್ ಸಂಗೀತ, ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ಟ್ರೇಲರ್‌ ರಿಲೀಸ್‌ ಮಾಡಿದ ರಿಷಭ್‌ ಶೆಟ್ಟಿ ಅವರಿಗೆ ಧನ್ಯವಾದ ಹೇಳಿದ ಹೀರೋ ವಸಿಷ್ಠ ಸಿಂಹ, ಚಿತ್ರಮಂದಿರಗಳಲ್ಲೇ ತಮ್ಮ ಸಿನಿಮಾ ನೋಡಿ ಹರಸಬೇಕೆಂದು ಸಿನಿಪ್ರಿಯರನ್ನು ಕೋರಿದರು.

LEAVE A REPLY

Connect with

Please enter your comment!
Please enter your name here