ವೇದಾ ಕೃಷ್ಣಮೂರ್ತಿ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ರಂಗದಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ. ಕಡೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವೇದಾ ಕೃಷ್ಣಮೂರ್ತಿಗೆ ಇಂದು (ಅಕ್ಟೋಬರ್ 16) ಜನ್ಮ ದಿನದ ಸಂಭ್ರಮ. 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕ ದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹೆಜ್ಜೆಯಿಟ್ಟ ವೇದಾ, ಮೊದಲ ಪಂದ್ಯದಲ್ಲೇ ಅರ್ಧ ಶತಕಗಳಿಸಿದ ಸಾಧನೆ ಮಾಡಿದ್ದರು. ಬಲಗೈ ಬ್ಯಾಟುಗಾರ್ತಿ ಆಗಿರುವ ವೇದಾ, ಬಲಗೈನಿಂದ ಬೌಲ್ ಮಾಡುವ ಲೆಗ್ ಸ್ಪಿನ್ನರ್ ಕೂಡ ಹೌದು.
ಮೂರು ವರ್ಷದ ಪುಟಾಣಿಯಾಗಿದ್ದಾಗಲೇ ಬ್ಯಾಟು ಹಿಡಿದ ವೇದಾ, ಕಡೂರಿನ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿ ಬೆಳೆದಿದ್ದರು. ಆ ಬಳಿಕ ರಾಜ್ಯ ಕ್ರಿಕೆಟ್ ಅಕಾಡೆಮಿ ಸೇರಿದ ವೇದಾಳಲ್ಲಿನ ಪ್ರತಿಭೆಯನ್ನು ಗುರುತಿಸಿದ್ದು ಕೋಚ್ ಇರ್ಫಾನ್ ಸೇಟ್. ಕೇವಲ 13 ವರ್ಷದ ಬಾಲಕಿಯಾಗಿದ್ದಾಗಲೇ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ವೇದಾ, ಅಲ್ಲಿಂದಾಚೆಗೆ ಹಿಂದೆ ತಿರುಗಿ ನೋಡಬೇಕಾದ ಸಂದರ್ಭವೇ ಬರಲಿಲ್ಲ.
ಭಾರತ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟುಗಾರ್ತಿಯಾಗಿರುವ ವೇದಾ, ಬಿಡುಬೀಸಿನ ಹೊಡೆತಗಳಿಗೆ ಹೆಸರಾಗಿದ್ದಾರೆ. 2017ರಲ್ಲಿ ಮಹಿಳಾ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಫೈನಲ್ ತಲುಪಿದ್ದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಕೇವಲ 9 ರನ್ ಗಳಿಂದ ಪರಾಭವಗೊಂಡಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದ ವೇದಾ 35 ರನ್ ಗಳಿಸಿದ್ದರು. ವಿದೇಶದಲ್ಲಿನ ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟಿಂಗ್ ವೇಳೆ, ಕ್ರೀಸ್ ನಲ್ಲಿ ಜೋಡಿಯಾಗುವ ಕರ್ನಾಟಕದ ಮತ್ತೊಬ್ಬ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಜೊತೆ ಕನ್ನಡದಲ್ಲೇ ಮಾತಾಡುತ್ತಾ ಹುರಿದುಂಬಿಸುವ ವೇದಾ, ಕನ್ನಡಿಗರ ಕಣ್ಮಣಿಯಾಗಿದ್ದಾರೆ. ಕ್ರಿಕೆಟ್ ನಲ್ಲಿ all-rounder ಆಗಿರುವ ವೇದಾ, ಕರಾಟೆಯನ್ನೂ ಕಲಿತು Black Belt ಸಂಪಾದಿಸಿದ್ದಾರೆ. ತಮ್ಮ ಸಾಧನೆಯಿಂದ ರಾಜ್ಯಕ್ಕೆ ಹೆಸರು ತಂದುಕೊಟ್ಟಿರುವ ಕರ್ನಾಟಕದ ಹೆಮ್ಮೆಯ ಹುಡುಗಿ ವೇದಾ ಕೃಷ್ಣ ಮೂರ್ತಿ ಅವರಿಗೆ ಮಾಧ್ಯಮ ಅನೇಕ ಸಂಸ್ಥೆ ವತಿಯಿಂದ ಹಾರ್ದಿಕ ಶುಭಾಶಯಗಳು. Happy Birthday ವೇದಾ…