ದೇವ್‌ ಆನಂದ್‌, ಸುನೀತ್‌ ದತ್‌, ಅಮಿತಾಭ್‌ ಬಚ್ಚನ್‌, ರಾಜೇಶ್‌ ಖನ್ನಾ, ಜಾಕಿ ಶ್ರಾಫ್‌ ಸೇರಿದಂತೆ ಹಿಂದಿ ಚಿತ್ರರಂಗದ ಹತ್ತಾರು ಪ್ರಮುಖ ನಾಯಕನಟರಿಗೆ ‘ಅಮ್ಮ’ನಾಗಿ ಕಾಣಿಸಿಕೊಂಡವರು ಸುಲೋಚನಾ. ಪದ್ಮಶ್ರೀ ಪುರಸ್ಕೃತ ನಟಿ ಹಿಂದಿ ಮತ್ತು ಮರಾಠಿಯ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅಮ್ಮನ ಪಾತ್ರಕ್ಕೆ ಸಿದ್ಧಮಾದರಿಯ ರೂಪು ಕೊಟ್ಟ ಸುಲೋಚನಾ ಲಟ್ಕರ್‌ (94 ವರ್ಷ) ಅಗಲಿದ್ದಾರೆ. 60, 70ರ ದಶಕಗಳ ಹಿಂದಿ ಮತ್ತು ಮರಾಠಿ ಸಿನಿಮಾಗಳ ಜನಪ್ರಿಯ ‘ಅಮ್ಮ’ ಸುಲೋಚನಾ ಸುಮಾರು ನಾಲ್ಕು ದಶಕಗಳ ಕಾಲ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕೊಲ್ಹಾಪುರ ಮೂಲದ ಅವರು ಆರಂಭದಲ್ಲಿ ಮರಾಠಿ ಸಿನಿಮಾಗಳ ನಾಯಕನಟಿಯಾಗಿ ಕಾಣಿಸಿಕೊಂಡರು. ಮುಂದೆ ಹಿಂದಿ ಸಿನಿಮಾಗಳ ಮೂರು ತಲೆಮಾರಿನ ಹೀರೋಗಳಿಗೆ ‘ಅಮ್ಮ’ನಾಗಿ ನಟಿಸಿದ್ದು ವಿಶೇಷ. ದೇವ್‌ ಆನಂದ್‌, ಸುನೀತ್‌ ದತ್‌, ಅಮಿತಾಭ್‌ ಬಚ್ಚನ್‌, ರಾಜೇಶ್‌ ಖನ್ನಾ, ಜಾಕಿ ಶ್ರಾಫ್‌ ಸೇರಿದಂತೆ ಹತ್ತಾರು ಪ್ರಮುಖ ನಾಯಕನಟರ ಸಿನಿಮಾಗಳಲ್ಲಿ ಸುಲೋಚನಾ ಅಭಿನಯಿಸಿದ್ದಾರೆ. ಭಾರತೀಯ ಮೌಲ್ಯಗಳು ಹೇಳುವ ತಾಯ್ತನದ ಗುಣ – ವಿಶೇಷಣಗಳೊಂದಿಗಿನ ಅವರ ಪಾತ್ರಗಳು ಸಿನಿಪ್ರೇಮಿಗಳ ಮನದಲ್ಲಿ ಅಚ್ಚ ಹಸಿರಾಗಿವೆ.

ಖ್ಯಾತ ಮರಾಠಿ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ ಭಾಳ್‌ಜೀ ಪೆಂಡಾರ್ಕರ್‌ ಅವರ ಜೈಪ್ರಭಾ ಸ್ಟುಡಿಯೋಸ್‌ನಲ್ಲಿ ಸುಲೋಚನಾ ತಮ್ಮ ನಟನಾ ವೃತ್ತಿ ಆರಂಭಿಸಿದ್ದು. ಅವರ ಮೊದಲ ಸಿನಿಮಾ – ‘ಸಸುರ್‌ವಾಸ್‌’ (1946). ‘ವಹಿನಿಚ್ಯ ಬಾಂಗ್‌ದ್ಯಾ’, ‘ಸಂಗ್ತ್ಯೆ ಐಕಾ’ ಯಶಸ್ವೀ ಮರಾಠಿ ಸಿನಿಮಾಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟವು. ‘ಮರಾಠಾ ತಿಟುಕ ಮೇಲ್ವಾಯ’ (1964) ಮರಾಠಿ ಸಿನಿಮಾದಲ್ಲಿನ ಅವರ ಜೀಜಾಬಾಯಿ ಪಾತ್ರ ಬಹುಜನಪ್ರಿಯ. ಆರಂಭದ ಅವರ ಹಿಂದಿ ಸಿನಿಮಾಗಳು ಮರಾಠಿ ರೀಮೇಕ್‌ಗಳು. ತಮ್ಮ ಸಹಜಾಭಿನಯದಿಂದ ಅವರು ಬಹುಬೇಗ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಬಿಮಲ್‌ ರಾಯ್‌ ನಿರ್ದೇಶನದ ‘ಸುಜಾತಾ’ (1960) ಹಿಂದಿ ಚಿತ್ರದಲ್ಲಿ ನಾಯಕನಟಿ ನೂತನ್‌ ತಾಯಿಯ ಪಾತ್ರ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವಾಯ್ತು. ದಿಲ್‌ ದೇಖೆ ದೇಖೋ, ದೋ ಉಸ್ತಾದ್‌, ಆಯೇ ದಿನ್‌ ಬಹಾರ್‌ ಕೆ, ಮಜಬೂರ್‌, ಮುಕದ್ದರ್‌ ಕಾ ಸಿಕಂದರ್‌, ಕಟಿ ಪತಂಗ್‌ ಸಿನಿಮಾಗಳಲ್ಲಿ ಮಮತೆಯ ಅಮ್ಮ, ಸಹೃದಯ ಪತ್ನಿ, ಕಾಳಜಿ ಮಾಡುವ ಸೊಸೆಯ ಪಾತ್ರಗಳ ಮೂಲಕ ಸಿನಿಮಾ ಪ್ರೇಮಿಗಳಿಗೆ ಆಪ್ತರಾದರು. ‘ಸಂಪೂರ್ಣ ರಾಮಾಯಣ’ ಚಿತ್ರದಲ್ಲಿ ಕೈಕೇಯಿಯಾಗಿ, ‘ದಿಲ್‌ ದೌಲತ್‌ ದುನಿಯಾ’ದ ಪಾತ್ರಗಳ ಅವರು ವರ್ಸಟ್ಯಾಲಿಟಿಗೂ ತೆರೆದುಕೊಂಡರು.

ನಟಿ ಗೀತಾ ಬಾಲಿ ಮತ್ತು ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ ಅತ್ಯಾಪ್ತರಾಗಿದ್ದವರು ಸುಲೋಚನಾ. ಯಶಸ್ಸಿನಿಂದ ಎಂದೂ ಬೀಗದ ವ್ಯಕ್ತಿತ್ವ. ತನ್ನ ಕುಟುಂಬ, ಪತಿ, ಮಕ್ಕಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗುವ ನಿಸ್ವಾರ್ಥ ತಾಯಿ ಪಾತ್ರಗಳು 60, 70ರ ದಶಕಗಳ ಹಿಂದಿ ಸಿನಿಮಾಗಳ ಟ್ರೇಡ್‌ ಮಾರ್ಕ್‌ ಆಗಿದ್ದಿದೆ. ನಿರೂಪಾ ರಾಯ್‌ ಮತ್ತು ಸುಲೋಚನಾ ಈ ಪಾತ್ರಗಳಿಗೆ ಜೀವ ತುಂಬಿದರು. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸೇರಿದಂತೆ ಸಿನಿಮಾರಂಗದ ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಸುಲೋಚನಾ ಅವರನ್ನು ಸ್ಮರಿಸುತ್ತಾ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

LEAVE A REPLY

Connect with

Please enter your comment!
Please enter your name here