ಆಕ್ಷನ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಮಗೆ ಸಿಕ್ಕ ಪ್ರತಿ ಅವಕಾಶದಲ್ಲೂ ಭರ್ಜರಿಯಾಗಿ ಮೆರೆದಿದ್ದಾರೆ. ಚಿತ್ರದ ಮೊದಲಿನಿಂದ ಕೊನೆಯವರೆಗೂ ಪ್ರೇಕ್ಷಕ ಕಣ್ಣು ಅತ್ತಿತ್ತ ಹಾಯಿಸದೇ ತೆರೆಯನ್ನೇ ನೋಡುವಂತೆ ಮಾಡುವಲ್ಲಿ ಸಾಹಸ ನಿರ್ದೇಶಕರಾದ ಸೆ ಯೊಂಗ್, ಪರ್ವೀಜ್ ಶೇಕ್ ಮತ್ತು ಸುನಿಲ್ ರಾಡ್ರಿಗ್ಸ್ ಅವರ ಪಾತ್ರ ಬಹಳ ದೊಡ್ಡದು. ಅತ್ಯಂತ ಅಚ್ಚುಕಟ್ಟಾದ, ಅದ್ಭುತವಾದ, ಮೈನವಿರೇಳಿಸುವ ಸಾಹಸ ಸನ್ನಿವೇಶಗಳನ್ನು ಬಹಳ ರೋಚಕವಾಗಿ ಹೆಣೆಯಲಾಗಿದೆ.

ಆಕ್ಷನ್ ಚಿತ್ರಪ್ರಿಯರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ‘ಫೈಟರ್’ ಚಿತ್ರ ಬಿಡುಗಡೆಯಾಗಿದೆ. ಆಕ್ಷನ್ ಚಿತ್ರಗಳು ಎಂದಾಗ ಒಂದಷ್ಟು ಸಿದ್ಧಸೂತ್ರಗಳ ಮಾದರಿಯನ್ನು ನಿರೀಕ್ಷೆ ಮಾಡಬಹುದು. ಇಲ್ಲಿಯೂ ಆ ಮಾದರಿಯನ್ನೇ ಅನುಸರಿಸಿದ್ದಾರೆ. ಗಣರಾಜ್ಯ ದಿನದ ಹಿನ್ನೆಲೆಯಲ್ಲಿ ರಚಿತವಾಗಿರುವ ಈ ಕಥಾನಕದಲ್ಲಿ ನಿರ್ದೇಶಕರಾದ ಸಿದ್ಧಾರ್ಥ್ ಆನಂದ್ ಅವರು ಒಂದು ದೇಶಪ್ರೇಮಿ ಆಕ್ಷನ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲ ಅಂಶಗಳನ್ನೂ ಸೇರಿಸಿ ಒಂದು ಹೈ ಎನರ್ಜಿ ಚಿತ್ರವನ್ನು ಕೊಟ್ಟಿದ್ದಾರೆ. ಉಗುರುಕಚ್ಚಿ ನೋಡುವಂತೆ ಮಾಡುವ ಸಾಹಸ ದೃಶ್ಯಗಳೇ ಇರಬಹುದು, ಸುಖೋಯ್ ವಿಮಾನಗಳನ್ನು ಬಳಸಿ ಮಾಡಿದ ರೋಚಕ ದೃಶ್ಯಗಳೇ ಇರಬಹುದು.. ಒಟ್ಟಿನಲ್ಲಿ ಆಕ್ಷನ್ ಪ್ರಿಯರಿಗೆ ಹಬ್ಬವೋ ಹಬ್ಬ.

ಮೀನಲ್ ರಾಥೋಡ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಶಂಶೇರ್ ಪಠಾನಿಯಾ ಪಾತ್ರದಲ್ಲಿ ಹೃತಿಕ್ ರೋಷನ್, ತಾಜ್ ಪಾತ್ರದಲ್ಲಿ ಕರಣ್ ಸಿಂಗ್ ಒಬೆರಾಯ್, ಬಷೀರ್ ಪಾತ್ರದಲ್ಲಿ ಆಕಾಶ್ ಒಬೆರಾಯ್ ಮತ್ತು ರಾಕೇಶ್ ಪಾತ್ರದಲ್ಲಿ ಅನಿಲ್ ಕಪೂರ್ ಈ ಚಿತ್ರದ ಮುಖ್ಯಪಡೆ. ರಾಕೇಶ್ ಈ ಪಡೆಯ ಕಮಾಂಡರ್. ರಾಕಿ ಮತ್ತು ಪ್ಯಾಟಿ ನಡುವೆ ಉಂಟಾಗುವ ಘರ್ಷಣೆ ಮತ್ತು ಅದಕ್ಕೆ ಕಾರಣವಾದ, ಹಿಂದೆ ಯಾವಾಗಲೋ ನಡೆದ ಒಂದು ದುರ್ಘಟನೆ ವೀಕ್ಷಕರನ್ನು ಆಕ್ಷನ್ ಜೊತೆಗೆ ಒಂದು ಭಾವುಕ ಮಾದರಿಯ ಕಥಾನಕಕ್ಕೆ ಅಣಿ ಮಾಡುತ್ತದೆ.

ಆಕ್ಷನ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ತಮಗೆ ಸಿಕ್ಕ ಪ್ರತಿ ಅವಕಾಶದಲ್ಲೂ ಭರ್ಜರಿಯಾಗಿ ಮೆರೆದಿದ್ದಾರೆ. ಚಿತ್ರದ ಮೊದಲಿನಿಂದ ಕೊನೆಯವರೆಗೂ ಪ್ರೇಕ್ಷಕ ಕಣ್ಣು ಅತ್ತಿತ್ತ ಹಾಯಿಸದೇ ತೆರೆಯನ್ನೇ ನೋಡುವಂತೆ ಮಾಡುವಲ್ಲಿ ಸಾಹಸ ನಿರ್ದೇಶಕರಾದ ಸೆ ಯೊಂಗ್, ಪರ್ವೀಜ್ ಶೇಕ್ ಮತ್ತು ಸುನಿಲ್ ರಾಡ್ರಿಗ್ಸ್ ಅವರ ಪಾತ್ರ ಬಹಳ ದೊಡ್ಡದು. ಅತ್ಯಂತ ಅಚ್ಚುಕಟ್ಟಾದ, ಅದ್ಭುತವಾದ, ಮೈನವಿರೇಳಿಸುವ ಸಾಹಸ ಸನ್ನಿವೇಶಗಳನ್ನು ಬಹಳ ರೋಚಕವಾಗಿ ಹೆಣೆಯಲಾಗಿದೆ. ಇನ್ನು ಸಚ್ಚಿತ್ ಅವರ ಛಾಯಾಗ್ರಹಣ ಚಿತ್ರವನ್ನು ಮತ್ತೂ ಅದ್ಭುತಗೊಳಿಸಿದೆ. ಪರ್ವತಗಳು, ಕಣಿವೆಗಳು ಮತ್ತು ಸಾಹಸ ದೃಶ್ಯಗಳ ಸೆರೆಹಿಡಿಯುವಿಕೆ ಎಲ್ಲವನ್ನೂ ವಾಹ್ ಎನಿಸುವಂತೆ ಸೆರೆಹಿಡಿಯಲಾಗಿದೆ. ಕೆಲವು ದೃಶ್ಯಗಳಲ್ಲಂತೂ ನೋಡುಗರು ತೆರೆಯ ಒಳಗೇ ಹೋದಂತೆ ಭಾಸವಾಗುತ್ತದೆ. ಇಷ್ಟೆಲ್ಲ ಆದರೂ ಕಥೆ ಬಹಳ ಸಿದ್ಧಮಾದರಿಯಲ್ಲಿ ಸಾಗುವುದರಿಂದ ದೃಶ್ಯದಲ್ಲಿರುವ ರೋಚಕತೆ ನಿರೂಪಣೆಯಲ್ಲಿ ಕಾಣುವುದಿಲ್ಲ. ಇಷ್ಟೇನಾ ಎನಿಸಿಬಿಡುತ್ತದೆ. ಇದರಲ್ಲಿ ಬರುವ ಘಟನೆಗಳೇ ಇರಬಹುದು ಅಥವಾ ಪಾತ್ರಗಳು ಆಡುವ ದೇಶಪ್ರೇಮದ ಮಾತುಗಳೇ ಇರಬಹುದು ಎಲ್ಲಿಯೂ ಹೊಸದು ಎನಿಸುವಂತಹ ಸೃಜನಶೀಲತೆ ಇಲ್ಲದೇ ಗಿಳಿಪಾಠ ಒಪ್ಪಿಸಿದಂತೆ ಭಾಸವಾಗುತ್ತದೆ.

ಈ ರೀತಿ ಸಿದ್ಧಮಾದರಿಯ ಕಥೆ ಇರುವುದರಿಂದಲೋ ಏನೋ ಚಿತ್ರದ ಹಾಡುಗಳು, ಹಿಂದಿನ ಘಟನೆಗಳು ಮತ್ತು ಪ್ರೇಮಕಥಾನಕ ಎಲ್ಲವೂ ಚಿತ್ರಕ್ಕೆ ಪೂರಕವಾಗುವುದರ ಬದಲು ಬೋರ್ ಹೊಡೆಯುವಂತೆ ಮಾಡುತ್ತವೆ. ಬಲವಂತವಾದ ಸ್ತ್ರೀವಾದವನ್ನು ಕೂಡ ಅಲ್ಲಲ್ಲಿ ತುರುಕಲು ಪ್ರಯತ್ನ ಪಟ್ಟಂತೆ ಕಾಣುತ್ತದೆ. ಹೀಗಾಗಿ ಚಿತ್ರದ ವೇಗ ಒಂದೇ ಸಮ ಇಲ್ಲದೇ ಅಲ್ಲಲ್ಲಿ ಬೋರ್ ಹೊಡೆಸಿದರೂ ಚಿತ್ರದ ಕೊನೆಯ ಅರ್ಧ ಘಂಟೆಯ ಸಾಹಸ ಸನ್ನಿವೇಶಗಳು ಇವೆಲ್ಲವನ್ನೂ ಮರೆಸಿ ಚಿತ್ರವನ್ನು ರೋಚಕವನ್ನಾಗಿಸಿವೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯ ಬಹಳ ಉತ್ತಮವಾಗಿ ಮೂಡಿಬಂದಿದೆ. ಅವರಿಬ್ಬರ ತೆರೆಯ ಮೇಲಿನ ಕೆಮಿಸ್ಟ್ರಿ ಕೂಡ ಬಹಳ ಉತ್ತಮವಾಗಿ ಬಂದಿದೆ. ಭಾವುಕ ದೃಶ್ಯಗಳಲ್ಲೂ ಬಹಳ ಸುಂದರ ಅಭಿನಯವನ್ನು ಈ ಜೋಡಿ ನೀಡಿದೆ. ಮಿಕ್ಕೆಲ್ಲ ಪಾತ್ರಗಳು ಅವರವರ ಪಾತ್ರಕ್ಕೆ ತಕ್ಕಂತೆ ಅಚ್ಚುಕಟ್ಟಾದ ಅಭಿನಯವನ್ನು ನೀಡಿದ್ದಾರೆ.

ಭಾರತೀಯ ವಾಯುಪಡೆ ತಮ್ಮ ಬುದ್ಧಿವಂತಿಕೆಯಿಂದ ಪಾಕಿಸ್ತಾನಿ ಸೈನ್ಯವನ್ನು ದಾರಿತಪ್ಪಿಸುವ ಸನ್ನಿವೇಶಗಳು ಚಿತ್ರದ ರೋಚಕತೆಯನ್ನು ಹೆಚ್ಚಿಸಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಚಿತ್ರದಲ್ಲಿ ಕಥೆ ಮತ್ತು ನಿರೂಪಣೆಯ ವಿಚಾರದಲ್ಲಿ ಹೊಸತು ಎನಿಸುವಂತಹ ಯಾವ ಅಂಶಗಳೂ ಇಲ್ಲ. ಆದರೆ ನೀವು ಆಕ್ಷನ್ ಪ್ರಿಯರಾಗಿದ್ದರೆ ನಿಮಗೆ ಭರಪೂರ ಮನರಂಜನೆ ಸಿಗುವುದು ಖಂಡಿತ. ಅದರಲ್ಲೂ ಆಗಸದಲ್ಲಿ ನಡೆಯುವ ಕೆಲವು ಸಾಹಸ ಸನ್ನಿವೇಶಗಳಂತೂ ಮೈನವೀರೇಳಿಸುತ್ತವೆ. ಒಳ್ಳೆಯ ಆಕ್ಷನ್ ಅನುಭವಕ್ಕಾಗಿ ನೋಡಲೇಬೇಕಾದ ಚಿತ್ರ ‘ಫೈಟರ್’. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here