ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕ ಜೋಡಿ ‘ದೊರೈ – ಭಗವಾನ್‌’ ಖ್ಯಾತಿಯ ಎಸ್‌.ಕೆ.ಭಗವಾನ್‌ (90 ವರ್ಷ) ಅಗಲಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದರು. ಕಾದಂಬರಿ ಆಧರಿಸಿದ ಸಿನಿಮಾಗಳ ಪರಂಪರೆಯನ್ನು ದೃಢಗೊಳಿಸಿದ ನಿರ್ದೇಶಕ ಜೋಡಿಯಿದು. ಭಗವಾನ್‌ ನಿಧನದಿಂದ ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

ಕಸ್ತೂರಿ ನಿವಾಸ, ಪ್ರತಿಧ್ವನಿ, ಎರಡು ಕನಸು, ಹೊಸ ಬೆಳಕು, ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಮುನಯನ ಮಾದರಿ, ಜೀವನ ಚೈತ್ರ… ಕಾದಂಬರಿ ಆಧರಿಸಿದ ಹಾಗೂ ಸದಭಿರುಚಿಯ ಪ್ರಮುಖ ಸಿನಿಮಾಗಳ ನಿರ್ದೇಶಕ ಜೋಡಿ ದೊರೈ – ಭಗವಾನ್‌. ನಾಟಕಗಳಲ್ಲಿ ಪಾತ್ರ ನಿರ್ವಹಿಸುತ್ತಾ ಮುಂದೆ ಸಿನಿಮಾರಂಗ ಪ್ರವೇಶಿಸಿದ ಭಗವಾನ್‌ ಅವರು ದೊರೈರಾಜ್‌ ಜೊತೆಗೂಡಿ ನಿರ್ದೇಶಿಸಿದ ಸಿನಿಮಾಗಳು ಮಹತ್ವದ ಸ್ಥಾನ ಪಡೆದಿವೆ. ವೈವಿಧ್ಯಮಯ ವಸ್ತುವಿನ ಈ ಸಿನಿಮಾಗಳ ಪಟ್ಟಿಯಲ್ಲಿ ಬಾಂಡ್‌ ಸಿನಿಮಾಗಳೂ ಇವೆ. ಸ್ವತಂತ್ರ್ಯ ನಿರ್ದೇಶಕರಾಗುವುದಕ್ಕಿಂತ ಮುನ್ನ ಅವರು ಸಹಾಯಕರಾಗಿ ದುಡಿದ ಹತ್ತಾರು ಸಿನಿಮಾಗಳು ಕನ್ನಡ ಚಿತ್ರರಂಗದ ಮೈಲುಗಲ್ಲಾಗಿವೆ. ಇಳಿ ವಯಸ್ಸಿನಲ್ಲೂ ಅಪಾರ ಉತ್ಸಾಹಿಯಾಗಿದ್ದ ಅವರು ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಪ್ರಾಂಶುಪಾಲರಾಗಿ ಹಲವು ವರ್ಷ ಸಿನಿಮಾ ಪಾಠ ಹೇಳಿದ್ದಾರೆ.

ಭಗವಾನ್‌ ಜನಿಸಿದ್ದು ಮೈಸೂರಿನಲ್ಲಿ (1933, ಜುಲೈ 5). ಅವರ ಪೂರ್ವಜರು ಹಾಸನ ಬಳಿಯ ಅಂಬಿಗಾ ಗ್ರಾಮದವರು. ತಂದೆ ಕೃಷ್ಣಯ್ಯಂಗಾರ್‌ ಮತ್ತು ತಾಯಿ ರಂಗನಾಯಕಮ್ಮ ಅವರ ಕೊನೆಯ ಕುಡಿ ಭಗವಾನ್‌. ಪ್ರಾಥಮಿಕ ಶಿಕ್ಷಣ ಮೈಸೂರಿನಲ್ಲಾಯ್ತು. ಮೈಸೂರು ಬ್ಯಾಂಕ್‌ನಲ್ಲಿ ಅಕೌಂಟೆಂಟ್‌ ಆಗಿದ್ದ ತಂದೆಗೆ ವರ್ಗವಾದ್ದರಿಂದ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿತು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಭಗವಾನ್‌ ವಿಜಯಾ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದರು.

ಕಾಲೇಜು ಓದುತ್ತಿದ್ದಾಗಲೇ ನಾಟಕಗಳಲ್ಲಿ ಆಸಕ್ತರಾಗಿದ್ದ ಭಗವಾನ್‌ ಹಿರಣ್ಣಯ್ಯ ಮಿತ್ರಮಂಡಳಿ, ಕರ್ನಾಟಕ ನಾಟಕ ಮಂಡಳಿಯ ನಾಟಕಗಳಲ್ಲಿ ಅಭಿನಯಿಸಿದರು. ಕ್ರಮೇಣ ಸಿನಿಮಾದತ್ತ ಆಸಕ್ತರಾದ ಅವರು ‘ಭಾಗ್ಯೋದಯ’ (1956) ಚಿತ್ರದ ಬರವಣಿಗೆ ವಿಭಾಗದಲ್ಲಿ ಪ್ರಭಾಕರ ಶಾಸ್ತ್ರಿಯವರಿಗೆ ಸಹಾಯಕರಾಗಿ ಕೆಲಸ ಮಾಡಿದರು. ನಟಿಸಬೇಕೆಂದು ಇಚ್ಛೆ ಪಟ್ಟರೂ ಅವರಿಗೆ ಅವಕಾಶ ಸಿಕ್ಕಿದ್ದು ನಿರ್ದೇಶನ ವಿಭಾಗದಲ್ಲಿ. ಮುಂದೆ ಸಿನಿಮಾ ಅವಕಾಶಗಳಿಗಾಗಿ ಮದರಾಸಿಗೆ ತೆರಳಿದ ಅವರಿಗೆ ದೊರೈರಾಜ್‌ ಅವರ ಪರಿಚಯವಾಯ್ತು.

‘ರಾಜದುರ್ಗದ ರಹಸ್ಯ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಭಗವಾನ್‌, ಭಾರತಿ ಮತ್ತು ಡಾ.ರಾಜಕುಮಾರ್‌ (ಫೋಟೊ ಕೃಪೆ: ಭವಾನಿ ಲಕ್ಷ್ಮೀನಾರಾಯಣ)

ಮೂಲತಃ ಛಾಯಾಗ್ರಾಹಕರಾದ ದೊರೈರಾಜ್‌ ಆಗ ‘ಜಗಜ್ಯೋತಿ ಬಸವೇಶ್ವರ’ ಸಿನಿಮಾಗೆ ಛಾಯಾಗ್ರಹಣ ಮಾಡುತ್ತಿದ್ದರು. ಈ ಸಿನಿಮಾದ ನಿರ್ದೇಶನದ ವಿಭಾಗಕ್ಕೆ ದೊರೈ ಅವರು ಭಗವಾನ್‌ರನ್ನು ಶಿಫಾರಸು ಮಾಡಿದರು. ಮುಂದೆ ಜಿ.ವಿ.ಅಯ್ಯರ್‌, ಸಿಂಗ್‌ ಠಾಕೂರ್‌ ಅವರಿಗೆ ಸಹಾಯಕರಾಗಿ ದುಡಿದರು. 1966ರಲ್ಲಿ ನಿರ್ಮಾಪಕ ಎ.ಸಿ.ನರಸಿಂಹಮೂರ್ತಿ ಅವರೊಂದಿಗೆ ‘ಸಂಧ್ಯಾರಾಗ’ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದರು. ಮುಂದಿನ ದಿನಗಳಲ್ಲಿ ದೊರೈ ಮತ್ತು ಭಗವಾನ್‌ ಸಂಸ್ಥೆಯೊಂದನ್ನು ಕಟ್ಟಿ ಸದಭಿರುಚಿಯ ಸಿನಿಮಾಗಳನ್ನು ಮಾಡಬೇಕೆಂದು ಹೊರಟರು. ಆಗ ಇಬರಿಗೆ ಒತ್ತಾಸೆಯಾಗಿ ನಿಂತದ್ದು ನಟ ಡಾ.ರಾಜಕುಮಾರ್‌ ಮತ್ತು ‘ರಮೇಶ್‌ ಮೂವೀಸ್‌’ನ ಮಾಲೀಕರಾಗಿದ್ದ ಟಿ.ಪಿ.ವೇಣುಗೋಪಾಲ್‌. ಆನಂತರ ದೊರೈ – ಭಗವಾನ್‌ ಸಾಲು, ಸಾಲು ಯಶಸ್ವೀ ಸಿನಿಮಾಗಳನ್ನು ನಿರ್ದೇಶಿಸಿದರು. ‘ಕಸ್ತೂರಿ ನಿವಾಸ’ದಂತಹ ಸಂಕೀರ್ಣ ಕಥಾವಸ್ತುವನ್ನು ತೆರೆಗೆ ತಂದ ಅವರು ಹೊಸಬೆಳಕು, ಚಂದನ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಮುನಿಯನ ಮಾದರಿ ಅಂತಹ ವೈವಿಧ್ಯಮಯ ಚಿತ್ರಗಳನ್ನು ಮಾಡಿ ಗೆದ್ದರು.

‘ಬಾಡದ ಹೂವು’ ಸಾಂಗ್‌ ರೆಕಾರ್ಡಿಂಗ್‌ ಸಂದರ್ಭದಲ್ಲಿ ದೊರೈ, ನಾರಾಯಣ್‌, ಕೆ.ವಿ.ಜಯರಾಂ, ಭಗವಾನ್‌ (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

ನಟನಾಗಬೇಕೆಂದು ಸಿನಿಮಾಗೆ ಬಂದ ಭಗವಾನ್‌ ನಿರ್ದೇಶನದಲ್ಲಿ ಹೆಸರು ಮಾಡಿದರು. ಈ ಮಧ್ಯೆ ಹಲವು ಸಿನಿಮಾಗಳ ಅತಿಥಿ ಪಾತ್ರಗಳಲ್ಲಿ ನಟಿಸುವ ಮೂಲಕ ನಟಿಸಬೇಕೆನ್ನುವ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಂಡರು. ‘ಮಂಗಳ ಸೂತ್ರ’ ಚಿತ್ರದ ಹೀರೋ ಆಗಿ ನಟಿಸಿದ್ದ ಅವರು ‘ಬೆಂಗಳೂರು ಮೈಲ್‌’ ಚಿತ್ರದ ಪ್ರಮುಖ ಖಳನಾಗಿ ಕಾಣಿಸಿಕೊಂಡದ್ದು ವಿಶೇಷ. ಕಾದಂಬರಿ ಆಧರಿಸಿದ ಹಾಗೂ ಬಾಂಡ್‌ ಸಿನಿಮಾಗಳ ಮೂಲಕ ದೊರೈ – ಭಗವಾನ್‌ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ದೊರೈ ಅವರೊಡಗೂಡಿ ಭಗವಾನ್‌ ಎರಡು ತಮಿಳು ಸಿನಿಮಾ ಸೇರಿದಂತೆ 32 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಮಾಂಗಲ್ಯ ಬಂಧನ’, ‘ಆಡುವ ಗೊಂಬೆ’ ಭಗವಾನ್‌ ಒಬ್ಬರೇ ನಿರ್ದೇಶಿಸಿದ ಎರಡು ಸಿನಿಮಾಗಳು. ಕಿರುತೆರೆ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರಗಳ ನಿರ್ದೇಶನದಲ್ಲೂ ಅವರ ಗುರುತುಗಳಿವೆ. ದೊರೈ – ಭಗವಾನ್‌ ನಿರ್ದೇಶನದ ಆರು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿಯ ಗೌರವ ಲಭಿಸಿದೆ. ವರನಟ ಡಾ.ರಾಜಕುಮಾರ್‌ ಜೀವನ – ಸಾಧನೆ ಕುರಿತು ಕೇಂದ್ರ ಚಲನಚಿತ್ರ ಇಲಾಖೆಗೆ ಭಗವಾನ್‌ ನಿರ್ದೇಶಿಸಿರುವ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಸಂದಿದೆ. 1996ರ ಸಾಲಿನ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಭಗವಾನ್‌ ಭಾಜನರಾಗಿದ್ದಾರೆ. ದೊರೈರಾಜ್‌ 2000 ಫೆಬ್ರವರಿ 20ರಂದು ಅಗಲಿದ್ದರು. ಇದೀಗ ಭಗವಾನ್‌ ತಮ್ಮ ಆತ್ಮೀಯ ಒಡನಾಡಿಯನ್ನು ಸೇರಿಕೊಂಡಿದ್ದಾರೆ.

ದೊರೈ – ಭಗವಾನ್‌

LEAVE A REPLY

Connect with

Please enter your comment!
Please enter your name here