ಮಾಗಿಲ್ ತಿರುಮೇನಿ ನಿರ್ದೇಶನದ ಬಹುನಿರೀಕ್ಷಿತ ‘ವಿಡಾಮುಯಾರ್ಚಿ’ ತಮಿಳು ಸಿನಿಮಾದಲ್ಲಿನ ನಟ ಅರ್ಜುನ್‌ ಸರ್ಜಾ ಲುಕ್‌ ರಿಲೀಸ್‌ ಆಗಿದೆ. ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಅದ್ಧೂರಿ ಸಿನಿಮಾದ ಹೀರೋ ಅಜಿತ್‌. ಸಿಲ್ಹೌಟ್‌ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ಅರ್ಜುನ್‌ ಸರ್ಜಾ ಅವರ ಪಾತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಅಜಿತ್‌ ಕುಮಾರ್‌ ನಟನೆಯ ‘ವಿಡಾಮುಯಾರ್ಚಿ’ ತಮಿಳು ಸಿನಿಮಾದಲ್ಲಿನ ನಟ ಅರ್ಜುನ್‌ ಸರ್ಜಾ ಲುಕ್‌ ರಿಲೀಸ್‌ ಆಗಿದೆ. ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಬಹುನಿರೀಕ್ಷಿತ ಚಿತ್ರವಿದು. ಇತ್ತೀಚೆಗಷ್ಟೇ ಚಿತ್ರದಲ್ಲಿನ ಅಜಿತ್ ಅವರ ಡೇಂಜರಸ್ ಸ್ಟಂಟ್ ವಿಡಿಯೋ ವೈರಲ್ ಆಗಿತ್ತು. ಈ ವೀಡಿಯೋ ನಂತರ ಸಿನಿಮಾ ಕುರಿತಾಗಿ ಅಜಿತ್‌ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಅರ್ಜುನ್, ‘ವಿಡಮುಯಾರ್ಚಿ’ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಆಕ್ಷನ್ ಕಿಂಗ್ ರಸ್ತೆಯ ಮೇಲೆ ಸ್ಟೈಲಿಶ್ ಆಗಿ ನಿಂತಿರುವ ಸಿಲ್ಹೌಟ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಆದರೆ ಚಿತ್ರದಲ್ಲಿನ ಅರ್ಜುನ್‌ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಪೋಸ್ಟರ್‌ ನಿಗೂಢತೆ ಮತ್ತು ನಿರೀಕ್ಷೆಯ ಭಾವವನ್ನು ಹುಟ್ಟುಹಾಕುತ್ತದೆ. ‘ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ’ ಎಂಬ ಕುತೂಹಲ ಕೆರಳಿಸುವ ಅಡಿಬರಹವು ಚಿತ್ರದ ಸುತ್ತಲಿನ ಕುತೂಹಲವನ್ನು ಹೆಚ್ಚಿಸಿದೆ.

ಈ ಹಿಂದೆ ಬ್ಲಾಕ್‌ ಬಸ್ಟರ್‌ ‘ಮಂಗಾತ’ ತಮಿಳು ಚಿತ್ರದಲ್ಲಿ ಅಜಿತ್‌, ತ್ರಿಷಾ ಮತ್ತು ಅರ್ಜುನ್‌ ಸರ್ಜಾ ಪ್ರೇಕ್ಷರನ್ನು ರಂಜಿಸಿದ್ದರು. ಈಗ ಮತ್ತೊಮ್ಮೆ ಈ ಮೂವರೂ ಜೊತೆಯಾಗಿ ತೆರೆಗೆ ಮರಳುತ್ತಿದ್ದಾರೆ. ಅಲ್ಲದೆ, ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಿರುದ್ಧ ಸಂಗೀತವಿರುವ ಚಿತ್ರಕ್ಕೆ ಓಂ ಪ್ರಕಾಶ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಎನ್ ಬಿ ಶ್ರೀಕಾಂತ್ ಸಂಕಲನ, ಮಿಲನ್ ಕಲಾ ನಿರ್ದೇಶನ, ಸುಂದರ್ ಸಾಹಸ ಸಂಯೋಜನೆ ಚಿತ್ರಕ್ಕೆ ಇರಲಿದೆ. ‘ವಿಡಾಮುಯಾರ್ಚಿ’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಸನ್ ಟಿವಿ ಪಡೆದುಕೊಂಡಿದ್ದರೆ, OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಇದೇ ಅಕ್ಟೋಬರ್ 31ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here