ಸುರೇಶ್‌ ತ್ರಿವೇಣಿ ನಿರ್ದೇಶನದಲ್ಲಿ ವಿದ್ಯಾ ಬಾಲನ್‌ ಮತ್ತು ಶೆಫಾಲಿ ಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಜಲ್ಸಾ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಮಾರ್ಚ್‌ 18ರಿಂದ ಅಮೇಜಾನ್‌ ಪ್ರೈಮ್‌ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

ವಿದ್ಯಾ ಬಾಲನ್‌ ಮತ್ತು ಶೆಫಾಲಿ ಷಾ ಅಭಿನಯದ ‘ಜಲ್ಸಾ’ ಕ್ರೈಂ – ಡ್ರಾಮಾ ಸಿನಿಮಾದ ಮೊದಲ ಟ್ರೈಲರ್‌ ಬಿಡುಗಡೆಯಾಗಿದೆ. ಇಬ್ಬರು ಪ್ರತಿಭಾವಂತ ಕಲಾವಿದೆಯರು ಮೊದಲ ಬಾರಿ ಜೊತೆಯಾಗಿ ನಟಿಸುತ್ತಿದ್ದಾರೆ. ವಿದ್ಯಾ ಬಾಲನ್‌ ಅವರಿಗೆ ಇಲ್ಲಿ ಪತ್ರಕರ್ತೆಯ ಪಾತ್ರವಿದೆ. ಪುತ್ರಿಯ ಸಾವಿನಿಂದ ನೋವಿಗೀಡಾಗಿರುವ ತಾಯಿಯಾಗಿ ಶೆಫಾಲಿ ಟ್ರೈಲರ್‌ನಲ್ಲಿ ಕಾಣಿಸುತ್ತಾರೆ. ಆಕೆಗೆ ನ್ಯಾಯ ಕೊಡಿಸಲು ಹೋರಾಡುವ, ನೈತಿಕ ಬೆಂಬಲವಾಗಿ ನಿಲ್ಲುವ ಪತ್ರಕರ್ತೆಯಾಗಿ ವಿದ್ಯಾ ಬಾಲನ್‌ ಇದ್ದಾರೆ. ರೋಹಿಣಿ ಹತ್ತಂಗಡಿ, ಸೂರ್ಯ ಕಸಿಭಾತ್ಲಾ, ಕಶೀಶ್‌ ರಿಜ್ವಾನ್‌, ಶಫೀನ್‌ ಪಟೇಲ್‌, ವಿಧಾತ್ರಿ ಬಂಡಿ, ಘನಶ್ಯಾಮ್‌ ಲಲ್ಸಾ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಹಿಟ್‌ ಅಂಡ್‌ ರನ್‌ ಕೇಸ್‌ನಲ್ಲಿ ಹದಿನೆಂಟು ವರ್ಷದ ಯುವತಿ ಕೊನೆಯುಸಿರೆಳೆಯುತ್ತಾಳೆ. ಈ ಆಕ್ಸಿಡೆಂಟ್‌ ಸುತ್ತ ಹೆಣೆದ ಕತೆಯಿದು. ಭೂಷಣ್‌ ಕುಮಾರ್‌, T – Series, ವಿಕ್ರಮ್‌ ಮಲ್ಹೋತ್ರಾ ಮತ್ತು ಶಿಖಾ ಶರ್ಮಾ ಸಿನಿಮಾದ ನಿರ್ಮಾಪಕರು. ಸಿನಿಮಾ ಕುರಿತು ಮಾತನಾಡುವ ಭೂಷಣ್‌ ಕುಮಾರ್‌, “ಈ ಹಿಂದೆ ‘ಏರ್‌ಲಿಫ್ಟ್‌’, ‘ಶೇರ್ನಿ’, ‘ಚೋರಿ’ ಚಿತ್ರಗಳಲ್ಲಿ ಜೊತೆಯಾಗಿದ್ದ ನಿರ್ಮಾಪಕರು ‘ಜಲ್ಸಾ’ದಲ್ಲಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಹಿಂದಿನ ಯಶಸ್ಸು ನೂತನ ಚಿತ್ರದಲ್ಲೂ ಮುಂದುವರೆಯಲಿದೆ ಎನ್ನುವ ವಿಶ್ವಾಸ ನಮ್ಮದು. ಅಮೇಜಾನ್‌ ಪ್ರೈಮ್‌ ಮೂಲಕ ಜಾಗತಿಕ ವೀಕ್ಷಕರನ್ನು ತಲುಪಲಿದ್ದೇವೆ” ಎಂದಿದ್ದಾರೆ.

Previous articleಮನಸೆಂಬ ಸ್ಟೇಡಿಯಂ, ಅಹಂ, ಶಕ್ತಿ, ತಾಳ್ಮೆ ಸ್ಪರ್ಧಿಗಳು!; ಇದು ‘ತ್ರಿಕೋನ’
Next articleಮತ್ತೆ ‘RRR’ ಪ್ರಮೋಷನ್ ಶುರು; ಮಾರ್ಚ್ 14ಕ್ಕೆ ‘ಜಂಡಾ’ ಸಾಂಗ್‌

LEAVE A REPLY

Connect withPlease enter your comment!
Please enter your name here