ರಾಘವ್ – ಅರ್ಜುನ್ ಸಂಯೋಜಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಮಣ್ಣಿನಲ್ಲಿ ಬೇರೂರಿರುವ ಭಾವನೆಯನ್ನು ನೀಡುತ್ತವೆ. ವಿಜಯ್ ವರ್ಮಾಗೆ ‘ದಹಾಡ್’ನಲ್ಲಿ ನಟಿಸಿದ ವಿರುದ್ಧವಾದ ಪಾತ್ರ ಇಲ್ಲಿಯದ್ದು. ಅದನ್ನು ಅವರು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಂಟು ಭಾಗಗಳ ವೆಬ್ ಸರಣಿ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಕೆಲವೆಡೆ ಅನಗತ್ಯ ವಿಷಯಗಳನ್ನು ಎಳೆಯಲಾಗಿದೆ, ಅದು ಬೇಡವಾಗಿತ್ತು. ‘ಕಾಲ್‌ಕೂಟ್’ ಸರಣಿ JioCinemaದಲ್ಲಿ ಸ್ಟ್ರೀಮ್ ಆಗುತ್ತಿದೆ.
ಆಗಷ್ಟೇ ವೃತ್ತಿ ಜೀವನಕ್ಕೆ ಕಾಲಿಟ್ಟು, ಅನುಭವದ ಕೊರತೆ ಇರುವ ಯುವ ಪೊಲೀಸ್ ಅಧಿಕಾರಿ. ಈತನಿಖೆಗೆ ಕೆಲಸದ ಒತ್ತಡ ಸಹಿಸಲಾಗದೆ ಬಿಟ್ಟು ಬಿಡುವ ಎಂಬ ಯೋಚನೆ ಬಂದಿರುತ್ತದೆ. ಅದಕ್ಕಾಗಿ ಆತ ರಾಜೀನಾಮೆ ಪತ್ರವನ್ನೂ ಸಿದ್ಧಪಡಿಸಿರುತ್ತಾನೆ. ಆದರೆ ಹಿರಿಯ ಅಧಿಕಾರಿ ಅದನ್ನು ಸ್ವೀಕರಿಸುವುದಿಲ್ಲ. ಕಚೇರಿಯಲ್ಲಿನ ಒತ್ತಡ ಒಂದೆಡೆಯಾದರೆ, ಮದುವೆಯಾಗು ಎಂದು ಮನೆಯಲ್ಲಿ ಅಮ್ಮನ ಒತ್ತಾಯ. ಇವೆರಡರ ನಡುವೆ ಹೆಣಗಾಡುತ್ತಿರುವ ಪೊಲೀಸ್ ಅಧಿಕಾರಿಯೇ ‘ಕಾಲ್‌ಕೂಟ್’ ವೆಬ್ ಸೀರೀಸ್‌ನ ಪ್ರಧಾನ ಪಾತ್ರಧಾರಿ ಅರುಣಭ್ ಕುಮಾರ್ ಮತ್ತು ಸುಮಿತ್ ಸಕ್ಸೇನಾ ಚಿತ್ರಕಥೆ ರಚಿಸಿದ್ದು, ಸುಮಿತ್ ಸಕ್ಸೇನಾ ನಿರ್ದೇಶಿಸಿರುವ ‘ಕಾಲ್‌ಕೂಟ್’, ಎಂಟು ಸಂಚಿಕೆಗಳ ಸರಣಿ. JioCinemaದಲ್ಲಿ ಸ್ಟ್ರೀಮ್ ಆಗುತ್ತಿದೆ.
ಉತ್ತರ ಪ್ರದೇಶದಲ್ಲಿನ ಕಾಲೇಜೊಂದರ ಹೊರಗೆ ನಡೆದ ಭೀಕರ ಆಸಿಡ್ ದಾಳಿಯ ವಿಚಾರಣೆಯಷ್ಟೇ ಅಲ್ಲದೆ, ಪಿತೃಪ್ರಭುತ್ವದ ಪಿಡುಗು, ಪುರುಷ ಅಹಂಕಾರ ಮತ್ತು ಕಾನೂನು ರಕ್ಷಣೆಯ ಬಗ್ಗೆ ಸರಣಿ ಹೇಳುತ್ತದೆ. ‘ಕಾಲ್‌ಕೂಟ್’ ಆರಂಭಿಕ ಸಂಚಿಕೆಯಲ್ಲಿ, ಲಿಂಗಸೂಕ್ಷ್ಮತೆಯ ತರಬೇತಿ ಕಾರ್ಯಕ್ರಮಕ್ಕೆ ಪೊಲೀಸರ ಗುಂಪೊಂದು ಹಾಜರಾಗುವ ದೃಶ್ಯವಿದೆ. ಅವರಲ್ಲಿ ಕೆಲವರು ಅಧಿವೇಶನವನ್ನು ಪರಿಚಯಿಸುತ್ತಿದ್ದಂತೆ ಕೊಂಕು ನುಡಿಯುತ್ತಾರೆ. ಅವರ ಹಿಂಜರಿಕೆಯ ವರ್ತನೆಯು ಆ ಊರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಯಾಕೆ ಏರಿಕೆ ಆಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ನೀಡುತ್ತದೆ.
ಕಾಲೇಜು ಹುಡುಗಿಯ ಮೇಲೆ ಆಸಿಡ್ ದಾಳಿಯಾಗಿದೆ. ಈ ಬಗ್ಗೆ ತನಿಖೆ ನಡೆಯುವ ಮೂಲಕ ಸರಣಿ ವೇಗ ಕಂಡುಕೊಳ್ಳುತ್ತದೆ. ಕೌಟುಂಬಿಕ ಹಿಂಸಾಚಾರ, ಹೋಮೋಫೋಬಿಯಾ, ಅಸುರಕ್ಷಿತ ಗರ್ಭಪಾತಗಳು, ಹೆಣ್ಣು ಶಿಶುಹತ್ಯೆ, ಸೈಬರ್ ಕ್ರೈಮ್, ಭಗ್ನ ಪ್ರೇಮ, ಭ್ರಷ್ಟಾಚಾರ, ಸಿನಿಕತನದ ರಾಜಕಾರಣಿಗಳ ದಬ್ಬಾಳಿಕೆ ಮತ್ತು ಪೊಲೀಸರ ನಿರ್ಲಕ್ಷ್ಯ ಹೀಗೆ ಸಮಾಜದ ಅಂಕುಡೊಂಕುಗಳ ಮೇಲೆ ಕತೆ ಬೆಳಕು ಚೆಲ್ಲುತ್ತದೆ.
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಮುಖ ಶರೀರದ ಒಂದು ಭಾಗ ಸುಟ್ಟು ಹೋಗಿದೆ. ಆಕೆಯಿಂದ ಹೇಳಿಕೆ ಪಡೆದುಕೊಳ್ಳಬೇಕಾದರೆ ಆಕೆಗೆ ಪ್ರಜ್ಞೆ ಮರಳಬೇಕು. ಆರೋಪಿಗಳನ್ನು ಪತ್ತೆ ಹಚ್ಚಲು ಆಕೆಯ ಸಹಾಯ ಬೇಕು. ಅದಕ್ಕಾಗಿ ಪೊಲೀಸರು ಆಸ್ಪತ್ರೆಗೆ ಹೋಗಿ ಬರುತ್ತಾ ಮಾಡಬೇಕು. ಈ ಪ್ರಕರಣದ ತನಿಖೆ ನಡೆಸುತ್ತಿರುವುದು ಸಬ್ ಇನ್‌ಸ್ಪೆಕ್ಟರ್ ರವಿಶಂಕರ್ ತ್ರಿಪಾಠಿ (ವಿಜಯ್ ವರ್ಮಾ). ಬಿಸಿರಕ್ತದ ಯುವಕ, ಆದರೆ ಅನುಭವಗಳ ಕೊರತೆ ಆತನನ್ನು ಪೇಚಿಗೆ ಸಿಲುಕಿಸುತ್ತದೆ. ಉತ್ತರ ಪ್ರದೇಶದ ಮ್ಯಾಕ್‌ಮೋಹನ್ ಗಂಜ್‌ನ ಸರ್ಸಿ ಪೊಲೀಸ್ ಠಾಣೆಯ ಮೂವರು ಪ್ರಮುಖ ಸಿಬ್ಬಂದಿಗಳಲ್ಲಿ ಈತನೂ ಒಬ್ಬ. ‘ಕಾಲ್‌ಕೂಟ್’ನಲ್ಲಿ ತೋರಿಸಿರುವ ಸ್ಥಳ ಕಾಲ್ಪನಿಕವಾಗಿದ್ದರೂ ನಾಯಕನ ಅವಸ್ಥೆ, ತನಿಖೆಯ ಸಂದರ್ಭದಲ್ಲಿ ಅವನು ಎದುರಿಸುವ ಕಥೆಗಳು ವಾಸ್ತವದಲ್ಲಿ ಕಾಣುವಂಥದ್ದೇ.
ಎಸ್ ಐ ತ್ರಿಪಾಠಿ, ದಿವಂಗತರಾಗಿರುವ ಹಿಂದಿ ಪ್ರೊಫೆಸರ್, ಕವಿಯ ಮಗ. ಈತನಿಗೆ ಕಿರಿಕಿರಿ ಆಗುವ ವ್ಯಕ್ತಿ ಎಂದರೆ ಈತನ ಸೀನಿಯರ್, SHO ಜಗದೀಶ್ ಸಹಾಯ್ (ಗೋಪಾಲ್ ದತ್). ಅನುಭವವಿಲ್ಲದ ಪೊಲೀಸ್ ತ್ರಿಪಾಠಿಗೆ ಏನಾದರೊಂದು ಕೆಲಸ ಹೇಳಿ ಮಾಡಿಸುವುದೇ ಇವನ ಕೆಲಸ. ಮನೆಗೆ ಬಂದರೆ ಅಮ್ಮ (ಸೀಮಾ ಬಿಸ್ವಾಸ್), ಮಗನಿಗೆ ವಧು ಹುಡುಕುವುದರಲ್ಲೇ ಬ್ಯುಸಿ. ಒಂದೊಂದು ಹುಡುಗಿಯ ಫೋಟೊ ತಂದು ಮಗನಿಗೆ ತೋರಿಸುವುದೇ ಅಮ್ಮನ ಕೆಲಸ. ಆದರೆ ಮಗ ಇದ್ಯಾವುದರಲ್ಲೂ ಆಸಕ್ತಿ ತೋರಿಸುವುದಿಲ್ಲ. ಹುಡುಗಿಯೊಬ್ಬಳ ಫೋಟೊವನ್ನು ಅಮ್ಮ ತೋರಿಸಿದ್ದರು. ಆತ ಆ ಫೋಟೊ ಮೇಲೆ ಒಮ್ಮೆ ಕಣ್ಣಾಡಿಸಿದ್ದು ಬಿಟ್ಟರೆ ಮದುವೆ ಬಗ್ಗೆ ಹೂಂ ಅಂದಿಲ್ಲ. ಅಂದಹಾಗೆ, ಆ್ಯಸಿಡ್ ದಾಳಿಗೊಳಗಾದ ಹುಡುಗಿ ಅವಳೇ! ಹೆಸರು ಪಾರುಲ್ ಚತುರ್ವೇದಿ (ಶ್ವೇತಾ ತ್ರಿಪಾಠಿ ಶರ್ಮಾ). ಆಕೆಯ ಮೇಲೆ ಆ್ಯಸಿಡ್ ಎರಚಿದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಅದಕ್ಕಾಗಿ ಅವರು ಮೊದಲು ಪಾರುಲ್ ಕುಟುಂಬವನ್ನು ಭೇಟಿ ಮಾಡುತ್ತಾರೆ. ಆಕೆಯ ಅಪ್ಪ, ತಂಗಿ, ಸಹಪಾಠಿ, ಸ್ನೇಹಿತರು ಹೀಗೆ ಒಬ್ಬೊಬ್ಬರನ್ನೇ ಭೇಟಿ ಮಾಡಿ ಅವರಿಂದ ಮಾಹಿತಿ ಕಲೆ ಹಾಕುತ್ತಾರೆ. ಎಸ್‌ಐ ತ್ರಿಪಾಠಿ ಜತೆ ಸಹಾಯಕ ಕಾನ್‌ಸ್ಟೇಬಲ್ ಸತ್ತು ಯಾದವ್ (ಯಶ್‌ಪಾಲ್ ಶರ್ಮಾ) ಜತೆ ಹಲವು ಶಂಕಿತರು ಮತ್ತು ಸಾಕ್ಷಿದಾರರ ಬಳಿ ಹೋಗುತ್ತಾರೆ. ಆದರೆ ಹೆಚ್ಚಿನ ವಿಷಯಗಳು ಅವರಿಗೆ ಸಿಗುವುದೇ ಇಲ್ಲ.
ಪಾರುಲ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದ್ದಂತೆ, ತನಿಖೆಯ ಅವಿಭಾಜ್ಯ ಅಂಗವಾಗುತ್ತಿರುವ ಆಕೆಯ ತಂಗಿಯ ಮೇಲೆಯೂ ಗಮನ ಹರಿಸಲಾಗಿದೆ. ಪಾರುಲ್ ಬ್ಯಾಗ್‌ನಿಂದ ಮದ್ಯದ ಬಾಟಲಿ ಸಿಕ್ಕಿದ್ದೇ, ಆಕೆ ‘ಅಂಥವಳು’ ಎಂಬ ನಿರ್ಧಾರಕ್ಕೆ ಪೊಲೀಸರು ಬಂದುಬಿಡುತ್ತಾರೆ. ಹಾಗಾದರೆ ಎಂಥವಳು? ಆಕೆಯ ಫೋಟೊವನ್ನು ಯಾರೋ ಅಶ್ಲೀಲ ವೆಬ್‌ಸೈಟಿನಲ್ಲಿ ಅಪ್ಲೋಡ್ ಮಾಡಿ ಆಕೆಯ ಫೋನ್ ನಂಬರ್ ಕೊಟ್ಟಿದ್ದಾರೆ. ಆಪ್ ಕೀ ಭೇಟಿ ದಂಧಾ ಕರ್ತೀ ಹೈ ಎಂದು ಪೊಲೀಸರು ಆಕೆಯ ಅಪ್ಪನಲ್ಲಿಯೇ ಹೇಳುತ್ತಾರೆ. ಆಕೆ ಸಂತ್ರಸ್ತೆ ಆಗಿದ್ದರೂ ಅನುಮಾನದ ಸೂಜಿ ಆಕೆಯತ್ತ ತಿರುಗುತ್ತದೆ. ಪಾರುಲ್ ಸ್ವಭಾವವನ್ನು ಒಮ್ಮೆ ಅಲ್ಲ, ಕೆಲವು ಬಾರಿ ಪ್ರಶ್ನಿಸಲಾಗುತ್ತದೆ.
ಹೆಣ್ಣಿನ ಬದುಕಿನ ಕಷ್ಟವನ್ನೂ ಈ ಸರಣಿ ಉಲ್ಲೇಖಿಸುತ್ತದೆ. ಹೆಣ್ಣು ಮಗಳು ತುಂಬಾ ಮುಕ್ತವಾಗಿ ನಗುತ್ತಿದ್ದರೆ ಅದನ್ನು ಲೈಂಗಿಕ ಸ್ವಾತಂತ್ರ್ಯಕ್ಕೆ ತಳುಕು ಹಾಕಲಾಗುತ್ತದೆ. ಹೆಣ್ಣು ಮಗಳು ತಂದೆ, ಗಂಡ, ಮಗನ ರಕ್ಷಣೆಯಲ್ಲಿ ಬದುಕುವುದು, ಇಲ್ಲಿನ ಮಹಿಳಾ ಪಾತ್ರಗಳು ಮನೆಯಿಂದ ಹೊರಹೋಗಲು ಅನುಮತಿಯನ್ನು ತೆಗೆದುಕೊಳ್ಳಬೇಕಾಗಿ ಬರುವುದು ಸಮಾಜದಲ್ಲಿನ ಲಿಂಗ ತಾರತಮ್ಯವನ್ನು ತೋರಿಸುತ್ತದೆ. ಹೆಣ್ಣು ಭ್ರೂಣಹತ್ಯೆ ಮತ್ತು ಅನಗತ್ಯ ಗರ್ಭಧಾರಣೆಯಂತೆಯೇ ಹೋಮೋಫೋಬಿಯಾ ವಿಷಯವೂ ಇಲ್ಲಿದೆ. ಮಾಧ್ಯಮದ ಪಾತ್ರ ಅಥವಾ ಸಾಮಾನ್ಯ ಮನುಷ್ಯನ ಆಲೋಚನಾ ವಿಧಾನದಿಂದ ಪ್ರತಿಯೊಬ್ಬರೂ ಹೇಗೆ ತೀರ್ಪುಗಾರರಾಗಿದ್ದಾರೆ ಎಂಬುದನ್ನು ಕೂಡಾ ಇಲ್ಲಿ ಹೇಳಲಾಗಿದೆ.
ಹಾಗಾದರೆ ಪಾರುಲ್ ಮೇಲೆ ಆಸಿಡ್ ದಾಳಿ ಮಾಡಿದವರು ಯಾರು? ಆಕೆಯ ಫೋನ್ ಪಾಸ್‌ವರ್ಡ್ M ಎಂಬ ಲಾಕ್ ಪ್ಯಾಟರ್ನ್ ಹೊಂದಿತ್ತು. ಅಲ್ಲಿಂದ M ಎಂಬ ಅಕ್ಷರದಿಂದ ಶುರುವಾಗುವ ಹೆಸರಿನ ಮೇಲೆ ಶಂಕೆ ಆರಂಭ. ಮಾನವ್, ಮನು? ಇವರಲ್ಲಿ ಕೃತ್ಯವೆಸಗಿದವರು ಯಾರು? ವಿಜಯ್ ವರ್ಮಾ ಅವರ ನಟನೆಗೆ ಎಕ್ಸ್ ಟ್ರಾ ಮಾರ್ಕ್ಸ್. ಪೊಲೀಸ್ ಆಗಿ ಆತ್ಮವಿಶ್ವಾಸವನ್ನು ಗಳಿಸಲು ಯತ್ನಿಸುವುದು, ಆತ್ಮಗೌರವದೊಂದಿಗೆ ಕೆಲಸ ಮಾಡುವುದು, ಕುಟುಂಬದ ಜಂಜಾಟಗಳೊಂದಿಗೆ ಏಗುವುದು ಎಲ್ಲದರಲ್ಲೂ ಅವರದ್ದು ಫರ್ಫೆಕ್ಟ್ ಅಭಿನಯ. ತಾಯಿಯಾಗಿ ಸೀಮಾ ಬಿಸ್ವಾಸ್, ವರ್ಮಾಗೆ ಸಾಥ್ ನೀಡಿದ್ದಾರೆ.
ಕಥೆಯನ್ನು ಸಂಪೂರ್ಣವಾಗಿ ಪುರುಷ ದೃಷ್ಟಿಕೋನದಿಂದ ಹೇಳಲಾಗಿದೆ, ಬಹುಶಃ ಇದು ಉತ್ತರ ಪ್ರದೇಶದಲ್ಲಿನ ಸಣ್ಣ ನಗರವೊಂದರ ಕತೆಯಾಗಿರುವ ಕಾರಣ ಈ ರೀತಿ ತೋರಿಸಿದ್ದರಬಹುದು. ಇದರ ಅತ್ಯಂತ ಆಸಕ್ತಿದಾಯಕ ಅಂಶವೆಂದರೆ ಸಂಗೀತ. ರಾಘವ್ – ಅರ್ಜುನ್ ಸಂಯೋಜಿಸಿದ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಮಣ್ಣಿನಲ್ಲಿ ಬೇರೂರಿರುವ ಭಾವನೆಯನ್ನು ನೀಡುತ್ತವೆ. ವಿಜಯ್ ವರ್ಮಾಗೆ ‘ದಹಾಡ್’ನಲ್ಲಿ ನಟಿಸಿದ ವಿರುದ್ಧವಾದ ಪಾತ್ರ ಇಲ್ಲಿಯದ್ದು. ಅದನ್ನು ಅವರು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಂಟು ಭಾಗಗಳ ವೆಬ್ ಸರಣಿ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಕೆಲವೆಡೆ ಅನಗತ್ಯ ವಿಷಯಗಳನ್ನು ಎಳೆಯಲಾಗಿದೆ, ಅದು ಬೇಡವಾಗಿತ್ತು. ಇದು ಮಹಿಳಾ ಪರ, ಪಿತೃಪ್ರಭುತ್ವದ ವಿರೋಧಿ ಮತ್ತು ಹೋಮೋಫೋಬಿಯಾ ವಿರೋಧಿ ಎಂಬ ತನ್ನ ನಿಲುವನ್ನು ಗಂಭೀರವಾಗಿ ಪರಿಗಣಿಸುವ ಸರಣಿಯಾಗಿದ್ದು, ತಾಳ್ಮೆಯಿಂದ ನೋಡಬೇಕಷ್ಟೇ.