ಅಕಾಲಿಕವಾಗಿ ಅಗಲಿದ ನಟ ಪುನೀತ್ ರಾಜಕುಮಾರ್ ತುಂಬಾ ಇಷ್ಟಪಟ್ಟಿದ್ದ ಕತೆಯಂತೆ ‘ಒಂದು ಸರಳ ಪ್ರೇಮಕಥೆ’. ಸಿಂಪಲ್ ಸುನಿ ನಿರ್ದೇಶನದ ಈ ಸಿನಿಮಾಗೆ ಈಗ ವಿನಯ್ ರಾಜಕುಮಾರ್ ಹೀರೋ ಆಗಿದ್ದಾರೆ. ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಚಿತ್ರದ ಇಬ್ಬರು ನಾಯಕಿಯರು.
“ನನಗೆ ಮೊದಲಿನಿಂದಲೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ತುಂಬಾ ಇಷ್ಟ. ಜೊತೆಗೆ ಸುನಿ ಅವರ ನಿರ್ದೇಶನದ ಶೈಲಿ ಕೂಡ ತುಂಬಾ ಅಚ್ಚುಮೆಚ್ಚು. ಸುನಿ ಅವರು ಈ ಕತೆ ಹೇಳಲು ಬಂದಾಗ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡ್ತಿದ್ದೀನಿ ಅನ್ನೋದೇ ತುಂಬಾ ಖುಷಿ ಕೊಟ್ಟಿತ್ತು. ಹಾಗೆ ನೋಡಿದರೆ ಇದು ಚಿಕ್ಕಪ್ಪ (ಪುನೀತ್ ರಾಜಕುಮಾರ್) ತುಂಬಾ ಇಷ್ಟಪಟ್ಟಿದ್ದ ಕತೆ. ಚಿತ್ರದಲ್ಲಿ ಅತಿಶಯ್ ಪಾತ್ರದಲ್ಲಿ ನಟಿಸಿದ್ದೇನೆ. ಸಂಗೀತ ನಿರ್ದೇಶಕನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಅನ್ನೋದು ಅವನ ಕನಸು. ಆತನ ಮನಸ್ಸಲ್ಲಿ ಒಂದು ಹುಡುಗಿಯ ಹುಡುಕಾಟ ಯಾವಾಗಲೂ ಇರುತ್ತೆ” ಎಂದು ತಮ್ಮ ನೂತನ ಸಿನಿಮಾ ಬಗ್ಗೆ ಹೇಳಿಕೊಳ್ಳುತ್ತಾರೆ ವಿನಯ್ ರಾಜಕುಮಾರ್.
ಸಿಂಪಲ್ ಸುನಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ಈಗಾಗಲೇ ಮೊದಲ ಶೆಡ್ಯೂಲ್ ಚಿತ್ರೀಕರಣ ಪೂರ್ಣಗೊಂಡಿದೆ. ತಮ್ಮ ಸಿನಿಮಾ ಕುರಿತು ಮಾತನಾಡುವ ಅವರು, “ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ಗೆ ಇಟ್ಟ ಮೊದಲ ಟೈಟಲ್ ‘ಒಂದು ಸರಳ ಪ್ರೇಮಕಥೆ’. ಯಾವುದಾದರೂ ಸಿನಿಮಾಗೆ ಈ ಟೈಟಲ್ ಇಡೋಣ ಎಂದು ಹತ್ತು ವರ್ಷದಿಂದ ಟೈಟಲ್ ರಿನೀವಲ್ ಮಾಡಿಕೊಂಡು ಬಂದಿದ್ದೆ. ಇದು ಪ್ರಸನ್ನ ಅವರು ರಚಿಸಿರುವ ಕತೆ. ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿದು ಮೈಸೂರಿನಲ್ಲಿ ನಂತರ ಚಿತ್ರಿಸಿದೆವು. ಶೇಕಡಾ 50ರಷ್ಟು ಚಿತ್ರೀಕರಣ ಮುಗಿದಿದೆ” ಎನ್ನುತ್ತಾರೆ.
ಸ್ವಾತಿಷ್ಟ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಚಿತ್ರದ ಇಬ್ಬರು ನಾಯಕಿಯರು. “ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು” ಎನ್ನುವುದು ಮಲ್ಲಿಕಾ ಸಿಂಗ್ ಸಂತಸ. ಸಾಧುಕೋಕಿಲ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಚಿತ್ರದ ಇತರೆ ಪ್ರಮುಖ ಕಲಾವಿದರು. ಕಾರ್ತೀಕ್ ಛಾಯಾಗ್ರಹಣ, ಆದಿ ಸಂಕಲನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.