ಮೇಲಿಂದ ಮೇಲೆ ಕಳಪೆ ಕಂಟೆಂಟೇ ಕಣ್ಣಿಗೆ ಬೀಳುತ್ತಿದ್ದಾಗ ಮಧ್ಯದಲ್ಲೊಂದು ಉತ್ತಮ ಪ್ರಯತ್ನ ಕಂಡರೂ ಅದನ್ನು ನಂಬುವುದು ಹೇಗೆ? ಚಿತ್ರಗಳ ನಿರ್ದೇಶಕರೂ, ಅಭಿಮಾನಿಗಳೂ ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಬಡಕೊಂಡರೂ ಇದೊಂದು ಸಿನಿಮಾ ಓಟಿಟಿಲಿ ಬಂದರೆ ನೋಡಿಬಿಡೋಣ ಸಾಕು, ಯಾಕ್ ಸುಮ್ನೆ ಥಿಯೇಟರ್‌ಗೆ ಹೋಗಿ ರಿಸ್ಕ್ ತಗೋಳೋದು ಎಂದೇ ಅನ್ನಿಸುತ್ತದೆ.
ಕನ್ನಡ ಸಿನಿಮಾಗಳನ್ನು ನೋಡಲು ಜನರು ಥಿಯೇಟರ್‌ಗೆ ಬರುತ್ತಿಲ್ಲ ಎಂಬುದರ ಬಗ್ಗೆ ಅಲ್ಲಲ್ಲಿ ಆಗಾಗ ನಮ್ಮ ಮಂದಿ ಬರೆಯುತ್ತಲೇ ಇದ್ದಾರೆ. ಮಲ್ಟಿಪ್ಲೆಕ್‌ಗಳಲ್ಲಿನ ಹೆಚ್ಚು ದರಗಳು, ಅನ್ಯಭಾಷಾ ಚಿತ್ರಗಳಿಗೆ ಸಿಗುತ್ತಿರುವ ಹೆಚ್ಚಿನ ಪ್ರದರ್ಶನಗಳು, ನಮ್ಮದೇ ಸಿನಿಮಾಗಳಿಗೆ ಸರಿಯಾಗಿ ಸಿಗದ ಪ್ರಚಾರ – ಹೀಗೆ ಈ ಸಮಸ್ಯೆಗೆ ಇರಬಹುದಾದ ಕಾರಣಗಳನ್ನು ಕೂಡ ಹುಡುಕುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಲೇ ಇದ್ದಾರೆ. ಕನ್ನಡ ಚಲನಚಿತ್ರಗಳನ್ನು ನಂಬಿ ದುಡ್ಡು ಹಾಕಿದವರು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಲೇ ಇದ್ದಾರೆ. ಅಮೇಝಾನ್, ನೆಟ್‌ಫ್ಲಿಕ್ಸ್ ಮೊದಲಾದ ಓಟಿಟಿ ದೈತ್ಯರು ಕನ್ನಡದ ದೊಡ್ಡ ಚಿತ್ರಗಳನ್ನು ಬಿಟ್ಟರೆ ಸಣ್ಣಪುಟ್ಟ ಪ್ರಯತ್ನಗಳ ಕಡೆಗೆ ಗಮನವನ್ನೂ ಹರಿಸುತ್ತಿಲ್ಲ.
ಜನರು ಸಿನಿಮಾ ಮಂದಿರಗಳಿಗೆ ಬರುತ್ತಿಲ್ಲ ಎಂಬುದನ್ನು ಹೇಳುವ ಮೊದಲು ನಾವು ನಮ್ಮಲ್ಲಿ ಆಗುತ್ತಿರುವ ಸಿನಿಮಾಗಳ ಗುಣಮಟ್ಟ ಮತ್ತು ಕಳಪೆ ಕಥೆಗಳ ಬಗ್ಗೆ ಗಮನ ಹರಿಸಬೇಕೇನೋ. ಈ ವರ್ಷ ನಮ್ಮಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಬೆರಳೆಣಿಕೆಯ ಸಿನಿಮಾಗಳು ಮಾತ್ರವೇ ಉತ್ತಮವಾಗಿದ್ದವು. ನಾನೀಗ ಅವುಗಳನ್ನು ಹೆಸರಿಸುವ ಗೋಜಿಗೇನೂ ಹೋಗುವುದಿಲ್ಲ. ರಿಲೀಸ್ ಆಗಿರುವ ಚಿತ್ರಗಳ ಬಗ್ಗೆ ಅವುಗಳಲ್ಲಿ ನಟನೆ ಮಾಡಿದವರು/ ತಂತ್ರಜ್ಞರು- ಎಷ್ಟು ಮಂದಿ ತಮ್ಮ ಚಿತ್ರಗಳನ್ನು ಮೇಲಿಂದ ಮೇಲೆ ಪ್ರೊಮೋಟ್ ಮಾಡಿದ್ದಾರೆ ಎನ್ನುವುದನ್ನೂ ಗಮನಿಸಿ. ಕಾಟಾಚಾರಕ್ಕೆ ಎಂಬ ಹಾಗೆ ಒಂದೋ, ಎರಡೋ ಪೋಸ್ಟರ್ ಶೇರ್ ಮಾಡಿಕೊಂಡವರೇ ಹೆಚ್ಚು. ಸಿನಿಮಾ ಮಾಡಿದ ತಂಡಕ್ಕೇ ತಮ್ಮ ಪ್ರಾಡಕ್ಟ್ ಬಗ್ಗೆ ಆಸ್ಥೆ ಇಲ್ಲದಾಗ- ಉಳಿದೋರು ಯಾಕಾದರೂ ಹೋಗಿ ಆ ಸಿನಿಮಾ ನೋಡುತ್ತಾರೆ?
ಇನ್ನು ಅರ್ಧಕ್ಕರ್ಧ ಸಿನಿಮಾಗಳ ಪೋಸ್ಟರುಗಳೂ, ಅವುಗಳ ಫಾಂಟುಗಳು – ಡಿಸೈನುಗಳೂ ದೇವರಿಗೇ ಪ್ರೀತಿ. ಇನ್ನವುಗಳ ಹೆಸರುಗಳ ಬಗ್ಗೆ ಮಾತಾಡುವುದೇ ಬೇಡ. ಇವತ್ತಿನ ಈ ಕಾಲದಲ್ಲೂ ನುಡಿ ಎಂಟು E ಫಾಂಟಲ್ಲಿ ಸಿನಿಮಾದ ಟೈಟಲ್ ಬರೆಸೋ ಪ್ರತಿಭಾವಂತರು ನಮ್ಮ ನಡುವೆಯೇ ಇದ್ದಾರೆ. ಇನ್ನು ಟ್ರೇಲರ್‌ಗಳೋ- ಸುಮ್ಮನೇ ನಾಲ್ಕೆಂಟು ವಿಶ್ಯುಯೆಲ್‌ಗಳನ್ನು ಕತ್ತರಿಸಿ, ಚೂರೇ ಚೂರು ಆಸಕ್ತಿ ಬರದಂತೆ ಎಚ್ಚರ ವಹಿಸಲಾಗುತ್ತದೆ. ಬಹುಪಾಲು ಸಿನಿಮಾಗಳದ್ದು ಇದೇ ಕತೆ. ಒಂದೇ ಒಂದು ಡೈಲಾಗೂ ಇಲ್ಲದವು – ಸುಮ್ಮನೇ ಒಂದು ಹಾಡು, ಒಂದು ಫೈಟು, ಒಂದು ಕಾಮಿಡಿ ಸೀನ್ ಹಾಕಿದವು. ಸಿನಿಮಾದ ಹೂರಣ ಏನು ಎಂದು ಇಡೀ ಟ್ರೇಲರ್‌ನಲ್ಲೇ ಹೇಳಿಬಿಡುವಂಥವು- ಹೀಗೆ ಥರಹೇವಾರಿ ಕೆಟ್ಟ ಕನ್ನಡ ಸಿನಿಮಾಗಳ ಟ್ರೇಲರ್‌ಗಳು ಯೂಟ್ಯೂಬ್‌ನಲ್ಲಿ ಧಂಡಿಯಾಗಿ ಸಿಗುತ್ತವೆ.
ಶುಕ್ರವಾರದ ಪತ್ರಿಕೆಗಳನ್ನು ತೆಗೆದು ನೋಡಿ, ಅಲ್ಲಿ ಸೆಟ್ಟೇರುತ್ತಿರುವ ಚಿತ್ರಗಳ ಬಗ್ಗೆ, ಚಿತ್ರೀಕರಣ ನಡೆಯುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ಇರುವುದನ್ನು ಓದಿದಾಗಲೇ ಆ ಚಿತ್ರಗಳ ಭವಿಷ್ಯ ಏನಿರಬಹುದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪತ್ರಿಕೆಗಳಲ್ಲಿ ಆ ಸಿನಿಮಾಗಳ ಬಗ್ಗೆ ಬಂದ ವರದಿಯೊಂದೇ ಗಟ್ಟಿ- ಮುಂದಕ್ಕೆ ಅವುಗಳಲ್ಲಿ ಬಹುಪಾಲು ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿ ಹೋಗುತ್ತವೆ.
ಇದೆಲ್ಲದರ ಹೊಡೆತ ಬೀಳುವುದು ನಿಜವಾದ ಆಸ್ಥೆಯಿಂದ ಸಿನಿಮಾ ಮಾಡಿದವರಿಗೆ. ಮೇಲಿಂದ ಮೇಲೆ ಕಳಪೆ ಕಂಟೆಂಟೇ ಕಣ್ಣಿಗೆ ಬೀಳುತ್ತಿದ್ದಾಗ ಮಧ್ಯದಲ್ಲೊಂದು ಉತ್ತಮ ಪ್ರಯತ್ನ ಕಂಡರೂ ಅದನ್ನು ನಂಬುವುದು ಹೇಗೆ? ದಿನಪತ್ರಿಕೆಗಳ ಸಿನಿಮಾ ರಿವ್ಯೂಗಳೋ ದೇವರಿಗೇ ಪ್ರೀತಿ. ಎಲ್ಲ ಚಿತ್ರಗಳಿಗೂ ಮೂರು ಸ್ಟಾರೇ! ನೋಡಬಹುದು ಅನ್ನುವ ಟಿಪ್ಪಣಿಯೇ. ಹಾಡು ಹೇಳಿದೋನಿಗೂ ಮೂರು ಸುಕ್ರುಂಡೆ, ಹಾಡು ಹೇಳದವನಿಗೂ ಮೂರು ಸುಕ್ರುಂಡೆ. ಇದೆಲ್ಲದರ ಮಧ್ಯೆ ಆ ಚಿತ್ರಗಳ ನಿರ್ದೇಶಕರೂ ಅಭಿಮಾನಿಗಳೂ ಸೋಶಿಯಲ್ ಮೀಡಿಯಾಗಳಲ್ಲಿ ಎಷ್ಟು ಬಡಕೊಂಡರೂ ಇದೊಂದು ಸಿನಿಮಾ ಓಟಿಟಿಲಿ ಬಂದರೆ ನೋಡಿಬಿಡೋಣ ಸಾಕು, ಯಾಕ್ ಸುಮ್ನೆ ಥಿಯೇಟರ್‌ಗೆ ಹೋಗಿ ರಿಸ್ಕ್ ತಗೋಳೋದು ಎಂದೇ ಅನ್ನಿಸುತ್ತದೆ.
ಅದೂ ಅಲ್ಲದೇ ಪುಟ್ಟದಾದ ಬಜೆಟ್‌ನಲ್ಲಿ ಉತ್ತಮ ಚಿತ್ರಗಳನ್ನು ಮಾಡಿದವರಿಗೆ ಅದನ್ನು ಮಾರ್ಕೆಟಿಂಗ್ ಮಾಡೋದಕ್ಕೆ ದುಡ್ಡಿರೋದಿಲ್ಲ. ತಮ್ಮ ಫೇಸ್‌ಬುಕ್ / ಇನ್‌ಸ್ಟಾಗ್ರಾಂನಲ್ಲೇ ಅವರ ಪ್ರೊಮೋಷನ್ ನಡೆಯುತ್ತದೆ. ಥಿಯೇಟರ್‌ಗೆ ಜನ ಬರೋದಕ್ಕೆ ಫೇಸ್‌ಬುಕ್ ಪ್ರಚಾರವನ್ನೇ ನಂಬಿಕೊಂಡಿರೋರನ್ನು ನೋಡಿದಾಗ ನಿಜಕ್ಕೂ ಅಯ್ಯೋ ಪಾಪ ಅನ್ನಿಸುತ್ತದೆ. ನಮ್ಮ ಸ್ನೇಹಿತರ ವಲಯದಲ್ಲೇ ಆ ಪೋಸ್ಟುಗಳು ಶೇರ್ ಆಗಿ, ಪದೇ ಪದೇ ಕಣ್ಣಿಗೆ ಬಿದ್ದು- ಈ ಸಿನಿಮಾಗೆ ಬಹಳ ಪ್ರಚಾರ ಸಿಗುತ್ತದೆ ಎನ್ನುವ ಭ್ರಮೆ ಸಿನಿಮಾ ತಂಡಕ್ಕೂ ಉಂಟಾಗುತ್ತದೆ. ಆದರೆ, ಅಲ್ಲಿ ಈತ ನಮ್ಮ ಸ್ನೇಹಿತ ಎಂಬ ಕಾರಣಕ್ಕೆ ಲೈಕ್ ಒತ್ತಿ ಕಮೆಂಟ್ ಮಾಡಿದವರು- ಶೇರ್ ಮಾಡಿದವರು ನಾಳೆ ಬೆಳಗ್ಗೆ ಆ ಸಿನಿಮಾ ನೋಡಿಯೇ ಬಿಡುತ್ತಾರೆ ಎಂಬುದಕ್ಕೆ ಯಾವ ಗ್ಯಾರೆಂಟಿಯೂ ಇರೋದಿಲ್ಲ. ಇನ್ನೂರು- ಮುನ್ನೂರು ಶೇರ್‌ಗಳು ಅಥವಾ ಹಾಡುಗಳನ್ನು ಒಂದು-ಎರಡು ಲಕ್ಷ ಜನರೇ ಕೇಳಿಸಿಕೊಂಡರೂ- ಅದರಿಂದ ಸಿನಿಮಾದ ಮೊದಲ ಶೋ ಕ್ರೌಡ್ ಕೂಡ ಹುಟ್ಟೋದಿಲ್ಲ.
ಇದೆಲ್ಲದರ ಮಧ್ಯದಲ್ಲಿ ವಾರಕ್ಕೆ ನಾಲ್ಕಾರು ಸಿನಿಮಾಗಳು ಬಿಡುಗಡೆ ಆಗುತ್ತಲೇ ಇವೆ, ಸೋಲುತ್ತಲೇ ಇವೆ. ಕನ್ನಡದ ಕೊನೆಯ ಹಿಟ್ ಸಿನಿಮಾ ಯಾವುದು ಎನ್ನುವುದು ಕೂಡ ಮರೆತು ಹೋಗಿದೆ. ಕನ್ನಡ ಸಿನಿಮಾ ಜಗತ್ತು ಸದ್ಯಕ್ಕೇನೂ ಸುಧಾರಿಸಿಕೊಳ್ಳುತ್ತದೆ ಎಂಬ ಯಾವ ಆಶಾಕಿರಣ ಕೂಡ ಕಾಣಿಸುತ್ತಿಲ್ಲ. ದೊಡ್ಡ ನಟರುಗಳು – ಪದೇ ಪದೇ ದೊಡ್ಡ ಸಂಖ್ಯೆಯಲ್ಲಿ ಚಿಕ್ಕೋರ ಸಿನಿಮಾಗಳನ್ನು ಪ್ರಮೋಟ್ ಮಾಡಿದರೆ ಏನಾದರೂ ಲಾಭ ಆಗಿರುತ್ತಿತ್ತೋ ಏನೋ. ಆದರೆ ಮೂರು ವರ್ಷಕ್ಕೊಮ್ಮೆ ಬರುವ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣದಲ್ಲಿ ಮತ್ತು ಕ್ರಿಕೆಟ್ ಆಟದಲ್ಲಿ ಬ್ಯುಸಿ ಇರುವ ಅವರುಗಳನ್ನು ಯಾರೂ ಏನೂ ಕೇಳಲು ಸಾಧ್ಯವಿಲ್ಲ.