ಯಶ್ ಹುಟ್ಟುಹಬ್ಬಕ್ಕೆ ‘TOXIC’ ಚಿತ್ರತಂಡ ವೀಡಿಯೋವೊಂದನ್ನು ಬಿಡುಗಡೆಗೊಳಿಸಿದೆ. ಯಶ್ ಪಾತ್ರ ಪರಿಚಯ ಮಾಡಿಕೊಡುವ ಈ ವೀಡಿಯೋ ಮೇಕಿಂಗ್, BGMನಿಂದಾಗಿ ಗಮನ ಸೆಳೆಯುತ್ತದೆ. ‘A Fairy Tale for Grown-ups’ ಎನ್ನುವುದು ಚಿತ್ರದ ಶೀರ್ಷಿಕೆ ಟ್ಯಾಗ್ಲೈನ್. ಈಗ ಬಿಡುಗಡೆಯಾಗಿರುವ ವೀಡಿಯೋ ಇದಕ್ಕೆ ಸಾಕ್ಷ್ಯ ನುಡಿಯುತ್ತದೆ.
ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘TOXIC’ನ ವೀಡಿಯೋವೊಂದು ರಿಲೀಸ್ ಆಗಿದೆ. ಇದು ಹೀರೋ ಯಶ್ಗೆ ಚಿತ್ರತಂಡದ ಬರ್ತ್ಡೇ ಗಿಫ್ಟ್. ಯಶ್ ಪಾತ್ರವನ್ನು ಪರಿಚಯಿಸುವ ಕ್ಯಾರಕ್ಟರ್ ಟೀಸರ್ ಎಂದೂ ಇದನ್ನು ಗುರುತಿಸಬಹುದು. PAN ಇಂಡಿಯಾ ಸಿನಿಮಾ ಎಂದು ಸುದ್ದಿಯಾಗಿರುವ ‘TOXIC’ ವೀಡಿಯೋ ಮೇಕಿಂಗ್, BGMನಿಂದಾಗಿ ಗಮನ ಸೆಳೆಯುತ್ತದೆ. ಮೊನ್ನೆ ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಸಿನಿಮಾ ಈಗ ವೀಡಿಯೋದೊಂದಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ‘KGF’ ಸರಣಿ ಸಿನಿಮಾಗಳ ನಂತರ ಸೆಟ್ಟೇರಿರುವ ಯಶ್ ಸಿನಿಮಾ ಸಾಕಷ್ಟು ಸುದ್ದಿಯಲ್ಲಿದೆ. KVN Productions ಮತ್ತು ಯಶ್ರ ಮಾಸ್ಟರ್ಮೈಡ್ ಕ್ರಿಯೇಷನ್ಸ್ ಜೊತೆಗೂಡಿ ನಿರ್ಮಿಸುತ್ತಿರುವ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ 2025ರ ಏಪ್ರಿಲ್ 10ರಂದು ಸಿನಿಮಾ ತೆರೆಕಾಣಲಿದೆ ಎನ್ನಲಾಗಿತ್ತು. ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆಗಳೂ ಇವೆ ಎಂದು ಚಿತ್ರತಂಡದ ಮೂಲಗಳು ಹೇಳುತ್ತವೆ.
ಚಿತ್ರ ಘೋಷಣೆಯಾದಾಗ, ಟೈಟಲ್ ಟೀಸರ್ನಲ್ಲಿ ಯಶ್ ಅವರ ಪೂರ್ಣ ಲುಕ್ ರಿವೀಲ್ ಆಗಿರಲಿಲ್ಲ. ಜೋಕರ್ ಕಾರ್ಡ್, ಹ್ಯಾಟ್ ತೊಟ್ಟಿರುವ ಯಶ್ ಇಮೇಜಿನ ಗ್ರಾಫಿಕ್ಸ್ ಜೊತೆ ಹಿನ್ನೆಲೆ ಸಂಗೀತದ ಗುಂಗು ಇತ್ತು. ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ 2019ರ ‘ಮೂಥಾನ್’ ಮಲಯಾಳಂ – ಹಿಂದಿ ದ್ವಿಭಾಷಾ ಸಿನಿಮಾ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ‘ಲಯರ್ಸ್ ಡೈಸ್’ (2014) ಅವರ ನಿರ್ದೇಶನದ ಮತ್ತೊಂದು ಹಿಂದಿ ಸಿನಿಮಾ. ಚಿತ್ರತಂಡ ‘TOXIC’ ಕುರಿತಾಗಿ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ತಿಂಗಳುಗಳ ಹಿಂದೆ, ಶೂಟಿಂಗ್ಗಾಗಿ ಮರಗಳನ್ನು ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಚಿತ್ರತಂಡದ ವಿರುದ್ಧ ದೂರು ದಾಖಲಿಸಿತ್ತು. ಚಿತ್ರತಂಡ ಈ ಆರೋಪವನ್ನು ಅಲ್ಲಗಳೆದಿತ್ತು. ಬೆಂಗಳೂರಿನ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಿದ ನಂತರ ಮುಂಬೈನಲ್ಲಿ ಶೂಟಿಂಗ್ ನಡೆಸಲಾಗಿದೆ.