ಸಂತೋಷ್‌ ಆನಂದರಾಮ್‌ ನಿರ್ದೇಶನದ ‘ಯುವ’ ಸಿನಿಮಾದ ‘ಅಪ್ಪುಗೆ’ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ಸಂತೋಷ್‌ ಅವರ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ವಿಜಯ ಪ್ರಕಾಶ್‌ ಹಾಡಿದ್ದಾರೆ. ಯುವ ರಾಜಕುಮಾರ್‌ ನಟನೆಯ ಸಿನಿಮಾ ಇದೇ ಮಾರ್ಚ್‌ 29ರಂದು ತೆರೆಕಾಣಲಿದೆ.

ಯುವ ರಾಜಕುಮಾರ್ ನಟನೆಯ ಬಹುನಿರೀಕ್ಷಿತ ‘ಯುವ’ ಚಿತ್ರದ ‘ಅಪ್ಪುಗೆ’ ಹಾಡು ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಟ ಪುನೀತ್ ರಾಜಕುಮಾರ್ ಅವರ ದ್ವಿತೀಯ ಪುತ್ರಿ ವಂದಿತಾ ಪುನೀತ್‌ ರಾಜಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಸಂತೋಷ್‌ ಆನಂದರಾಮ್‌ ಸಿನಿಮಾ, ಹಾಡಿನ ಬಗ್ಗೆ ಮಾತನಾಡಿ, ‘ಇದೊಂದು ಕೌಟುಂಬಿಕ ಹಾಗೂ ಆಕ್ಷನ್ ಕಥಾಹಂದರದ ಸಿನಿಮಾ. ತಂದೆ – ಮಗನ ಬಾಂಧವ್ಯದ ಚಿತ್ರವೂ ಹೌದು. ಒಂದು ಕುಟುಂಬಕ್ಕಾಗಿ ಅಪ್ಪ ಏನೆಲ್ಲಾ ಮಾಡುತ್ತಾನೆ. ಆದರೆ ಆತ ಯಾರಿಂದಲೂ ಏನನ್ನು ನಿರೀಕ್ಷಿಸುವುದಿಲ್ಲ. ಕುಟುಂಬದಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಂತಹ ಅಪ್ಪನ ಗುಣಗಳನ್ನು ವರ್ಣಿಸುವ ನಮ್ಮ ಚಿತ್ರದ ‘ಅಪ್ಪುಗೆ’ ಹಾಡು ಬಿಡುಗಡೆಯಾಗಿದೆ’ ಎಂದರು.

ಸಂತೋಷ್‌ ಆನಂದರಾಮ್‌ ರಚನೆಯ ಈ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯಿದೆ. ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಚಿತ್ರದ ಹೀರೋ ಯುವ ಹಾಡಿನ ಬಗ್ಗೆ ಮಾತನಾಡುತ್ತಾ, ‘ಈ ಚಿತ್ರದ ಕತೆಗೂ, ನನ್ನ ಜೀವನದ ಕತೆಗೂ ಸುಮಾರು ವಿಷಯಗಳು ಹೋಲುತ್ತವೆ. ತಂದೆಯ ಜವಾಬ್ದಾರಿ ನಮಗೆ ಅರ್ಥವಾಗುವುದೇ ಇಲ್ಲ. ನಾವು ದುಡಿಯುವುದಕ್ಕೆ ಶುರು ಮಾಡಿದಾಗ ನಮಗೆ ತಂದೆಯ ಜವಾಬ್ದಾರಿ ತಿಳಿಯುತ್ತಾ ಹೋಗುತ್ತದೆ. ಈ ಚಿತ್ರದಲ್ಲಿ ಅಚ್ಯುತ್‌ಕುಮಾರ್ ಅವರು ನನ್ನ ತಂದೆ ಪಾತ್ರ ಮಾಡಿದ್ದಾರೆ‌. ಅವರೊಂದಿಗೆ ಕೆಲವು ಸನ್ನಿವೇಶಗಳಲ್ಲಿ ನಟಿಸಬೇಕಾದರೆ ನನಗೆ ನಮ್ಮ ಅಪ್ಪ ಕಣ್ಮುಂದೆ ಬರುತ್ತಿದ್ದರು. ಅಂತಹ ಅಪ್ಪ – ಮಗನ ನಡುವಿನ ಸಂಬಂಧವನ್ನು ಬಣ್ಣಿಸುವ ಈ ʼಅಪ್ಪುಗೆʼ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ’ ಎಂದರು.

‘ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ‘ಅಪ್ಪುಗೆ’ ಮೂರನೇ ಹಾಡಾಗಿ ಬಿಡುಗಡೆಯಾಗಿದೆ. ಅಪ್ಪ-ಮಗನ ಸಂಬಂಧದ ಈ ಹಾಡು ತುಂಬಾ ಚೆನ್ನಾಗಿದೆ. ಈ ಹಾಡು ಕೇಳಿದಾಗಲ್ಲೆಲ್ಲಾ ನನಗೆ ನಮ್ಮ ತಂದೆ ನೆನಪಾಗುತ್ತಾರೆ’ ಎನ್ನುವುದು ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಮಾತು. ಆನಂದ್‌ ಆಡಿಯೋ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಸಂಸ್ಥೆ ಆರಂಭವಾಗಿ 25 ವರ್ಷಗಳಾಗಿವೆ. ‘ಯುವ’ ಸಿನಿಮಾದ ಆಡಿಯೋ ಹಕ್ಕು ನೀಡಿದ Hombale films ನವರಿಗೆ ಆನಂದ್‌ ಆಡಿಯೋದ ಶ್ಯಾಂ ಧನ್ಯವಾದ ಹೇಳಿದರು. ಮಾರ್ಚ್ 21ರಂದು ‘ಯುವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಮಾರ್ಚ್ 23ರಂದು ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಮಾರ್ಚ್ 29ಕ್ಕೆ ಸಿನಿಮಾ ತೆರೆಕಾಣಲಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಾಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here