ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕೃತಿ ‘ನಮ್ಮ ಊರಿನ ರಸಿಕರು’ ಆಧರಿಸಿ ಅದೇ ಶೀರ್ಷಿಕೆಯಡಿ ವೆಬ್‌ ಸರಣಿ ತಯಾರಾಗಿದೆ. ಕಿರುತೆರೆ ನಟಿ ನಂದಿತಾ ಯಾದವ್‌ ಈ ಸರಣಿಯ ನಿರ್ದೇಶಕಿ. ಈ ಪ್ರಯೋಗದೊಂದಿಗೆ ಕನ್ನಡ OTT ಪ್ಲಾಟ್‌ಫಾರ್ಮ್‌ ‘ಕಟ್ಟೆ’ ನವೆಂಬರ್‌ 1ರಿಂದ ಕಾರ್ಯಾರಂಭ ಮಾಡಲಿದೆ.

ಬೆರಳ ತುದಿಯಲ್ಲಿ ಮನರಂಜನೆ ಒದಗಿಸುವ ನವಮಾಧ್ಯಮ OTT. ಈಗಾಗಲೇ ಹಲವು ಪ್ಲಾಟ್‌ಫಾರ್ಮ್‌ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದೀಗ ಕನ್ನಡದ ಕಾರ್ಯಕ್ರಮಗಳಿಗೆಂದೇ ‘ಕಟ್ಟೆ’ OTT ಆರಂಭವಾಗುತ್ತಿದೆ. ಕನ್ನಡ ಸಿನಿಮಾ ಕಂಡ ಅಪ್ರತಿಮ ಹಾಸ್ಯನಟ ನರಸಿಂಹರಾಜು ಅವರ ಮೊಮ್ಮಕ್ಕಳು, ಈಗಾಗಲೇ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಿರುವ ಅವಿನಾಶ್ ಮತ್ತು ಅರವಿಂದ್ ‘ಕಟ್ಟೆ’ಯ ರೂವಾರಿಗಳು. ಕಳೆದೊಂದು ವರ್ಷದಿಂದ ಅವರು ‘ಕಟ್ಟೆ’ OTTಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದಾರೆ. ನವೆಂಬರ್‌ 1ರ ರಾಜ್ಯೋತ್ಸವದಂದು ಅಧಿಕೃತವಾಗಿ ‘ಕಟ್ಟೆ’ ಶುರುವಾಗಲಿದೆ. ಆರಂಭದ ಸರಣಿಯಾಗಿ ‘ನಮ್ಮ ಊರಿನ ರಸಿಕರು’ ಸ್ಟ್ರೀಮ್ ಆಗಲಿದೆ.

“ಕನ್ನಡ ಸಿನಿಮಾ ಹಾಗೂ ಪ್ರಾದೇಷಿಕ ಸೊಗಡಿನ ಕಂಟೆಂಟ್‌ಗಾಗಿಯೇ ಒಂದು OTT ಇರಬೇಕೆಂದು ಆಲೋಚಿಸಿದಾಗ ಶುರುವಾಗಿದ್ದು ‘ಕಟ್ಟೆ’. ಇಲ್ಲಿ ಕನ್ನಡದ ಸೊಗಡಿನ ಕಾರ್ಯಕ್ರಮಗಳನ್ನು ಸ್ಟ್ರೀಮ್‌ ಮಾಡುತ್ತೇವೆ. ಭಿನ್ನ ವಯೋಮಾನದ ವೀಕ್ಷಕರಿಗಾಗಿ ಕೆಲವು ಸೆಗ್‌ಮೆಂಟ್‌ಗಳನ್ನು ಪ್ಲ್ಯಾನ್ ಮಾಡಿದ್ದೇವೆ. ಜೊತೆಗೆ ಕನ್ನಡ ಸಿನಿಮಾಗಳೂ ಇರುತ್ತವೆ. ಗುಣಮಟ್ಟದ ವಸ್ತು-ವಿಷಯದೊಂದಿಗೆ ಜಗತ್ತಿನ ಕನ್ನಡಿಗರನ್ನು ತಲುಪುವುದು ನಮ್ಮ ಉದ್ದೇಶ” ಎನ್ನುತ್ತಾರೆ ‘ಕಟ್ಟೆ’ಯ ರೂವಾರಿಗಳಲ್ಲಿ ಒಬ್ಬರಾದ ಅರವಿಂದ್‌. ಈಗಾಗಲೇ ಅವರು OTTಗಾಗಿ ಕಂಟೆಂಟ್ ಸಿದ್ಧಪಡಿಸಿದ್ದಾರೆ. ‘ನಮ್ಮ ಊರಿನ ರಸಿಕರು’ ಸರಣಿ ಮೂಲಕ ‘ಕಟ್ಟೆ’ಗೆ ಚಾಲನೆ ಸಿಗಲಿದೆ.

ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 1932ರಲ್ಲಿ ರಚಿಸಿದ ಕೃತಿ ಆಧರಿಸಿ ಅದೇ ಶೀರ್ಷಿಕೆಯಡಿ ವೆಬ್‌ ಸರಣಿ ಸಿದ್ಧಪಡಿಸಲಾಗಿದೆ. ಕಿರುತೆರೆ ನಟಿ ನಂದಿತಾ ಯಾದವ್‌ ಸರಣಿಯ ನಿರ್ದೇಶಕಿ. ಈ ಸರಣಿಯಲ್ಲಿ ನಟಿಸಿರುವ ರವಿಕುಮಾರ್‌ ಮತ್ತು ನಿರ್ದೇಶಕಿ ನಂದಿತಾ ಚಿತ್ರಕಥೆ ಹೆಣೆದಿದ್ದಾರೆ. ಸಂಭಾಷಣೆ ಹೊಣೆ ರವಿಕುಮಾರ್ ಅವರದು. ಅನುಭವಿ ಛಾಯಾಗ್ರಾಹಕ ಅಶೋಕ್ ಕಶ್ಯಪ್‌ ಕ್ಯಾಮೆರಾ ಹಿಡಿದಿದ್ದಾರೆ. ಸುರೇಶ್ ಅರಸ್ ಸಂಕಲನ, ಕುಮಾರ್‌ ಮೇಕಪ್ ಕಲೆ, ರಂಗಕರ್ಮಿ ಮಂಗಳಾ ವಸ್ತ್ರವಿನ್ಯಾಸ, ಪ್ರಕಾಶ್ ಸೊಂಟಕ್ಕೆ ಸಂಗೀತ ಸಂಯೋಜನೆಯಿದೆ. ಮಲೆನಾಡಿನ ಸಿಗಂದೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸರಣಿ ನಿರ್ಮಾಣದಲ್ಲಿ ‘ಕಟ್ಟೆ’ಯೊಂದಿಗೆ ಕರಂಬೋಲ ಕ್ರಿಯೇಷನ್ಸ್‌ ಮತ್ತು ಮ್ಯಾಂಗೋ ಹೌಸ್ ಮೀಡಿಯಾ ಕೈಜೋಡಿಸಿವೆ. ಮೊದಲ ಸೀಸನ್‌ನಲ್ಲಿ ‘ನಮ್ಮ ಊರಿನ ರಸಿಕರು’ ಎಂಟು ಎಪಿಸೋಡ್‌ಗಳು ಸ್ಟ್ರೀಮ್ ಆಗಲಿವೆ.

“ಗೊರೂರರ ಕೃತಿಯಲ್ಲಿನ ಘಟನಾವಳಿಗಳನ್ನು ತೆಳುಹಾಸ್ಯದ ನಿರೂಪಣೆಯೊಂದಿಗೆ ಸಂಚಿಕೆಗಳಾಗಿ ರೂಪಿಸಲಾಗಿದೆ. ಸಮಾಜಕ್ಕೆ ಕೈಗನ್ನಡಿಯಂತಿರುವ ಘಟನಾವಳಿಗಳು ವೀಕ್ಷಕರಿಗೆ ಆಪ್ತವಾಗಲಿವೆ” ಎಂದು ನಿರ್ದೇಶಕಿ ನಂದಿತಾ ವಿಶ್ವಾಸ ವ್ಯಕ್ತಪಡಿಸುತ್ತಾರೆ. ತೊಂಬತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿ ಪ್ರವೇಶಿಸಿದ ಹಲವರು ಈ ಸರಣಿಯ ಕಲಾವಿದರು ಎನ್ನುವುದು ವಿಶೇಷ. ಬಿ.ಸುರೇಶ್‌, ಶಶಿಕುಮಾರ್‌, ರಮೇಶ್ ಪಂಡಿತ್‌, ಸುನೇತ್ರಾ ಪಂಡಿತ್‌, ರಾಜೇಶ್ ನಟರಂಗ, ರವಿಕುಮಾರ್‌, ಸುಂದರ್‌, ಮಂಗಳಾ, ಮಂಡ್ಯ ರಮೇಶ್ ಇತರರು ಅಭಿನಯಿಸಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಸಕ ಪಿ.ಶೇಷಾದ್ರಿ ಅವರು ಸರಣಿಯಲ್ಲಿ ನಟಿಸಿರುವುದು ವಿಶೇಷ. ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅವರಿಗೆ ಪ್ರಮುಖ ಪಾತ್ರವೊಂದಿದೆ. ಇವರೊಂದಿಗೆ ಇತ್ತೀಚಿನ ರಂಗಭೂಮಿ ಪ್ರತಿಭೆಗಳಾದ ಶೃಂಗ, ಅಂಜನ್‌ ಮತ್ತಿತತರು ಇದ್ದಾರೆ.

‘ನಮ್ಮ ಊರಿನ ರಸಿಕರು’ ವೆಬ್‌ ಸರಣಿ ಕಲಾವಿದರು ಹಾಗೂ ತಂತ್ರಜ್ಞರು

LEAVE A REPLY

Connect with

Please enter your comment!
Please enter your name here