ಆರ್ಕೆಸ್ಟ್ರಾಗಳಲ್ಲಿ ಜನರಿಗೆ ಗೊತ್ತಿಲ್ಲದ ಹಾಡುಗಳಿಗಿಂತ ಪ್ರಸಿದ್ಧ ಸಿನಿಮಾ ಹಾಡುಗಳನ್ನು ಹಾಡಿ ಅವರನ್ನು ಮನರಂಜಿಸುವುದು ಗಾಯಕರ ಗುರಿಯಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಬರುವ ಹಾಡುಗಳು ಆ ಫೀಲ್ ಕೊಡುವುದಿಲ್ಲ. ಖಳನಾಯಕ ಇಲ್ಲದ ಸಮಯದಲ್ಲಿ ಸಿಕ್ಕ ಪುಟ್ಟ ಸಮಯದಲ್ಲಿ ನಾಯಕ ಒಂದು ಹಾಡು ಹೇಳುತ್ತಾನೆ. ಆ ಹಾಡು ಯಾವುದಾದರೂ ಜನಪ್ರಿಯ ಸಿನಿಮಾ ಗೀತೆಯಾಗಿದ್ದರೆ ಅದೊಂದು ಅದ್ಭುತ ಮಾಸ್ ಮೊಮೆಂಟ್ ಆಗುತ್ತಿತ್ತು. ಕಮರ್ಶಿಯಲ್ ಆಗಿ ಸಿನಿಮಾ ಇನ್ನು ಚೆನ್ನಾಗಿ ಜನರಿಗೆ ತಲುಪುತ್ತಿತ್ತು. ಆದರೆ ಹಾಗಾಗಿಲ್ಲ. ‘ಆರ್ಕೇಸ್ಟ್ರಾ ಮೈಸೂರು’ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮೈಸೂರಿನಲ್ಲಿ ಬೆಳೆದವರಿಗೆ ಆರ್ಕೆಸ್ಟ್ರಾ ಅಂದರೆ ಸಾಕು ಕಣ್ಣರಳಿಸುತ್ತಾರೆ. FMಗಳಿಲ್ಲದ ಕಾಲ, ರೇಡಿಯೋದಲ್ಲಿ ಮೂರು ಹೊತ್ತೂ ಹಾಡುಗಳು ಹಾಕದ ಕಾಲ. ಟಿವಿಯಲ್ಲೂ ವಾರಕ್ಕೊಮ್ಮೆ ಅರ್ಧ ಘಂಟೆ ಮಾತ್ರ ಹಾಡುಗಳನ್ನು ನೋಡುತ್ತಿದ್ದ ಕಾಲ. ಆಗ ವರ್ಷಕ್ಕೊಮ್ಮೆ ಬರುತ್ತಿದ್ದ ಕನ್ನಡ ರಾಜ್ಯೋತ್ಸವ, ಗಣೇಶನ ಹಬ್ಬಗಳಲ್ಲಿ ನಮಗೆ ಸಿಗುತ್ತಿದ್ದ ಅತಿದೊಡ್ಡ ಮನರಂಜನೆಯೆಂದರೆ ಆರ್ಕೆಸ್ಟ್ರಾ!

ಕೆ. ಜಿ.ಕೊಪ್ಪಲಿನಲ್ಲೇ ಅದೆಷ್ಟು ಆರ್ಕೆಸ್ಟ್ರಾಗಳನ್ನು ನಿಂತೇ ನೋಡಿದ್ದೆನೋ. ಇನ್ನೂ ನೆನಪಿದೆ. “ಕೇಳದೆ ನಿಮಗೀಗ……ಲಾಲಲಾಲಲಾಲ……” ಅಂತ ಹಾಡು ಶುರುಮಾಡಿದ ಒಂದೆರಡು ನಿಮಿಷಗಳಲ್ಲಿ ಹಾಡುತ್ತಿದ್ದವನ ಅಂಗಿಯ ಮೇಲೆಲ್ಲ ಶಂಕರ್ ನಾಗ್ ಅಭಿಮಾನಿಗಳು ಹತ್ತು, ಇಪ್ಪತ್ತು, ಐವತ್ತು, ನೂರರ ನೋಟುಗಳನ್ನು ಪಿನ್ ಮಾಡುತ್ತಿದ್ದರು. ಇನ್ನೊಬ್ಬ ಗಾಯಕ ಮುಂದೆ ಬಂದು ಮುಂದಿನ ಹಾಡು ‘ಬೆಳ್ಳಿ ರಥದಲ್ಲಿ ಸೂರ್ಯ ತಂದ ಕಿರಣ’ ಅಂದ ಮುಂದಿನ ಸೆಕೆಂಡೇ ಅಂಬಿ ಅಭಿಮಾನಿಗಳು ಆ ಗಾಯಕನಿಗೆ ಮೇಲೆ ನೋಟಗಳನ್ನು ಚೆಲ್ಲುತ್ತಿದ್ದರು. ‘ಈ ಭೂಮಿ ಬಣ್ಣದ ಬುಗುರಿ’ ಅಂದರೆ ವಿಷ್ಣುವಿನ ಅಭಿಮಾನಿಗಳು. ‘ಆಡಿಸಿ ನೋಡು ಬೀಳಿಸಿ ನೋಡು’ ಅಂದರೆ ಸಾಕು ಅಣ್ಣಾವ್ರ ಅಭಿಮಾನಿಗಳು. ‘ಬರಿ ಓಳು’ ಅಂತ ಅರ್ಧ ಸಾಲು ಹೇಳುವುದರೊಳಗೆ ಪ್ರೇಕ್ಷಕರ ಕಿರುಚಾಟ. ಜನರು ಆ ಗಾಯಕರ ದನಿಯಲ್ಲಿ ತಮ್ಮ ನೆಚ್ಚಿನ ನಟನನ್ನು ಕಾಣುತ್ತಿದ್ದರು…. ಆ ಆರ್ಕೆಸ್ಟ್ರಾ ತಂದುಕೊಡುತ್ತಿದ್ದ ರೋಮಾಂಚನವನ್ನು ಎಂದಿಗೂ ಮರೆಯಲಾಗದು.

ಇವೆಲ್ಲವೂ ಮೊನ್ನೆ ‘ಆರ್ಕೆಸ್ಟ್ರಾ ಮೈಸೂರು’ ಸಿನಿಮಾ ನೋಡುವಾಗ ನೆನಪಿಗೆ ಬಂದವು. ಈಗ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಅದೆಷ್ಟು ನಡೆಯುತ್ತಿವೆಯೋ ಗೊತ್ತಿಲ್ಲ. ಆದರೆ ಅದೇ ಹಾದಿಯಲ್ಲಿ ನಡೆದು ಬಂದ ಕಲಾವಿದನೊಬ್ಬನ ಕಷ್ಟವನ್ನು ಈ ಸಿನಿಮಾ ಸಶಕ್ತವಾಗಿ ಹೇಳುತ್ತದೆ. ಯಾವುದೇ ಕ್ಷೇತ್ರವಾಗಲಿ ಅಲ್ಲಿ ಸ್ಪರ್ಧೆ ಇರುತ್ತದೆ. ಆದರೆ ಸ್ಪರ್ಧೆ ಧನಾತ್ಮಕವಾಗಿ ಇರುವುದರ ಬದಲು ಋಣಾತ್ಮಕವಾಗಿ ಇದ್ದರೆ ನ್ಯಾಯದ ಹಾದಿ ಹಿಡಿದು ಹೊರಟವರು ಅದೆಷ್ಟು ಅವಮಾನ ಅನುಭವಿಸಬೇಕು? ಅದೆಷ್ಟು ಕಷ್ಟಪಡಬೇಕು? ನಮಗೆ ಗೊತ್ತೇ ಇರದ ಆರ್ಕೆಸ್ಟ್ರಾ ತಂಡಗಳ ಒಳಗಿನ ಜೀವನವನ್ನು ‘ಆರ್ಕೆಸ್ಟ್ರಾ’ ಸಿನಿಮಾ ತೋರಿಸುತ್ತದೆ. ಹಲವಾರು ಕಲಾವಿದರನ್ನು ಒಟ್ಟಿಗೆ ಸೇರಿಸಿ ಹೆಚ್ಚು ಶ್ರಮ ಹಾಕಿ ಸಿನಿಮಾ ಮಾಡಿರುವುದು ಗೊತ್ತಾಗುತ್ತದೆ.

ಮುಖದಲ್ಲಿ ಆ ನಗು, ಕಣ್ಣಲ್ಲಿ ಕನಸು ಮತ್ತು ಕಂಬನಿ. ಪೂರ್ಣಚಂದ್ರ ಮೈಸೂರು ಆ ಪಾತ್ರಕ್ಕೆ ಬೆಸ್ಟ್. ಅದೇನೇ ಕಷ್ಟ ಬಂದರೂ ನಗುತ್ತಲೇ ಮುಂದುವರೆಯುವ, ಕಷ್ಟ ನುಂಗುತ್ತಲೇ ತನ್ನ ಗುರಿಯತ್ತ ಸಾಗುವ ಬಿಲ್ಡಪ್ ಇಲ್ಲದ ಪಾತ್ರದಲ್ಲಿ ಇಷ್ಟವಾಗುತ್ತಾರೆ. ದಿಲೀಪ್ ರಾಜ್, ನಾಯಕಿ ಮತ್ತು ಇತರರೂ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ನಾಯಕನ ಗೆಳೆಯನ ಪಾತ್ರದ ಹುಡುಗ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾನೆ. ಯುವ ದಸರಾದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕೊಡದ ವಿಷಯಗಳು ಸಿನಿಮಾವನ್ನು ಹೆಚ್ಚು ನೈಜತೆಯ ಹತ್ತಿರಕ್ಕೆ ಕರೆದೊಯ್ಯುತ್ತದೆ. ‘ನದಿಯೊಂದು ಓಡಿ’ ಹಾಡು ಬೆಸ್ಟ್. ಸಿನಿಮಾದ ಎಲ್ಲ ಹಾಡುಗಳನ್ನು ಧನಂಜಯ ಅವರು ಬರೆದಿರುವುದು ವಿಶೇಷ.

What could have been better? ಮೊದಲಿಗೆ ಸಿನಿಮಾದ Duration ಜಾಸ್ತಿ ಅನ್ನಿಸಿತು. ಎರಡನೆಯದಾಗಿ ಆರ್ಕೆಸ್ಟ್ರಾಗಳಲ್ಲಿ ಜನರಿಗೆ ಗೊತ್ತಿಲ್ಲದ ಹಾಡುಗಳಿಗಿಂತ ಪ್ರಸಿದ್ಧ ಸಿನಿಮಾ ಹಾಡುಗಳನ್ನು ಹಾಡಿ ಅವರನ್ನು ಮನರಂಜಿಸುವುದು ಗಾಯಕರ ಗುರಿಯಾಗಿರುತ್ತದೆ. ಆದರೆ ಈ ಸಿನಿಮಾದಲ್ಲಿ ಬರುವ ಹಾಡುಗಳು ಆ ಫೀಲ್ ಕೊಡುವುದಿಲ್ಲ. ಖಳನಾಯಕ ಇಲ್ಲದ ಸಮಯದಲ್ಲಿ ಸಿಕ್ಕ ಪುಟ್ಟ ಸಮಯದಲ್ಲಿ ನಾಯಕ ಒಂದು ಹಾಡು ಹೇಳುತ್ತಾನೆ. ಆ ಹಾಡು ಯಾವುದಾದರೂ ಜನಪ್ರಿಯ ಸಿನಿಮಾ ಗೀತೆಯಾಗಿದ್ದರೆ ಅದೊಂದು ಅದ್ಭುತ ಮಾಸ್ ಮೊಮೆಂಟ್ ಆಗುತ್ತಿತ್ತು. ಖಳನಾಯಕ ಅದನ್ನು ಬಂದು ಅರ್ಧಕ್ಕೆ ತಡೆದಾಗಲೂ ಅಲ್ಲೊಂದು ಬೇಕಿದ್ದ ಫೀಲ್ ಕ್ರಿಯೇಟ್ ಆಗಿರುತ್ತಿತ್ತು. ಕಮರ್ಶಿಯಲ್ ಆಗಿ ಸಿನಿಮಾ ಇನ್ನು ಚೆನ್ನಾಗಿ ಜನರಿಗೆ ತಲುಪುತ್ತಿತ್ತು. ಆದರೆ ಹಾಗಾಗಿಲ್ಲ.
ನಟ ಪೂರ್ಣಚಂದ್ರ ಅವರಿಗೆ ಇನ್ನಷ್ಟು ಇದೇ ರೀತಿಯ ಒಳ್ಳೆಯ ಅವಕಾಶಗಳು ಸಿಗಲಿ.

LEAVE A REPLY

Connect with

Please enter your comment!
Please enter your name here