ಇಂದು (ಡಿಸೆಂಬರ್ 16) ಬೆಳಗಿನ ಜಾವ ಅಗಲಿದ ಖ್ಯಾತ ತಬಲಾ ವಾದಕ ಝಾಕಿರ್ ಹುಸೇನ್ ಅವರ ನಿಧನಕ್ಕೆ ಜಗತ್ತಿನ ಹಲವಡೆಯಿಂದ ಸಂಗೀತ ಪ್ರೇಮಿಗಳು ಸಂತಾಪ ಸೂಚಿಸುತ್ತಿದ್ದಾರೆ. ಹಿಂದಿ, ಇಂಗ್ಲಿಷ್, ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದ ಝಾಕಿರ್ ಅಗಲಿಕೆ ಸಿನಿಪ್ರಿಯರನ್ನೂ ಕಾಡುತ್ತಿದೆ.
ಜಗತ್ತಿನ ಶ್ರೇಷ್ಠ ಸಂಗೀತಗಾರರ ಜೊತೆ ಗುರುತಿಸಲ್ಪಡುತ್ತಿದ್ದವರು ಝಾಕಿರ್ ಹುಸೇನ್. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೇರು ಸಂಗೀತಗಾರರೊಂದಿಗೆ ಅವರು ಕೆಲಸ ಮಾಡಿದ್ದಾರೆ. ಚಿತ್ರರಂಗದೊಂದಿಗೂ ಅವರಿಗೆ ವಿಶೇಷ ನಂಟು ಇತ್ತು. ಅವರ ಸಂಯೋಜನೆಯ ಸಿನಿಮಾ ಹಾಡುಗಳು ಕ್ಲಾಸಿಕ್ ಎನಿಸಿವೆ. ‘ಸಾಝ್’ ಹಿಂದಿ ಚಿತ್ರ, ‘ಹೀಟ್ ಅಂಡ್ ಡಸ್ಟ್’ ಹಿಂದಿ – ಇಂಗ್ಲಿಷ್ ದ್ವಿಭಾಷಾ ಸಿನಿಮಾದಲ್ಲಿ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದರು.
ಸಾಝ್ | ಈ ಚಿತ್ರಕ್ಕಾಗಿ ಜಾವೆದ್ ಅಖ್ತರ್ ರಚಿಸಿದ್ದ ‘ಕ್ಯಾ ತುಮ್ನೆ ಹೈ ಕೆಹ್ ದಿಯಾ’ ಹಾಡಿಗೆ ಝಾಕಿರ್ ಹುಸೇನರು ಸಂಗೀತ ಸಂಯೋಜಿಸಿದ್ದರು. ಕವಿತಾ ಕೃಷ್ಣಮೂರ್ತಿ ಅವರ ಮೆಲೊಡಿ ದನಿಯಲ್ಲಿ ಈ ಹಾಡು ಜನಪ್ರಿಯವಾಗಿತ್ತು. ಇದೇ ಚಿತ್ರದಲ್ಲಿನ ಅವರ ಸಂಯೋಜನೆಯ ‘ಫಿರ್ ಭೋರ್ ಭಾಯೇ’ ಹಾಡಿಗೆ ದೇವಕಿ ಪಂಡಿತ್ ದನಿಯಾಗಿದ್ದರು. ಈ ಚಿತ್ರದಲ್ಲಿ ನಾಯಕನಟಿ ಶಬಾನಾ ಅಜ್ಮಿ ಅವರೊಂದಿಗೆ ಝಾಕಿರ್ ಹುಸೇನ್ ತೆರೆಮೇಲೆ ಕಾಣಿಸಿಕೊಂಡಿದ್ದರು.
ಇನ್ ಕಸ್ಟಡಿ | ಇಸ್ಮಾಯಿಲ್ ಮರ್ಚೆಂಟ್ ನಿರ್ದೇಶನದ ‘ಇನ್ ಕಸ್ಟಡಿ’ ಹಿಂದಿ ಚಿತ್ರಕ್ಕೆ ಸುಲ್ತಾನ್ ಖಾನ್ ಅವರೊಡಗೂಡಿ ಝಾಕಿರ್ ಹುಸೇನ್ ಸಂಗೀತ ಸಂಯೋಜಿಸಿದ್ದರು. ಈ ಚಿತ್ರಕ್ಕಾಗಿ ಅವರು ಸಂಯೋಜಿಸಿದ್ದ ‘ನಸೀಬ್ ಆಝ್‌ಮಾನೆ ಕೆ’ ಗೀತೆಗೆ ಶಂಕರ್ ಮಹದೇವನ್ ದನಿಯಾಗಿದ್ದರು. ‘ದಿಲ್ ಥಾಹರ್ ಜಾಯೇಗಾ’ ಚಿತ್ರದ ಒಂದು ಹಾಡಿಗೂ ಝಾಕಿರ್ ಸಂಗೀತ ಸಂಯೋಜಿಸಿದ್ದರು. ಶಶಿಕಪೂರ್, ಶಬಾನಾ ಅಜ್ಮಿ, ಓಂಪುರಿ, ನೀನಾ ಗುಪ್ತಾ, ಅಮ್ಜದ್ ಖಾನ್ ಅವರಂತಹ ದೊಡ್ಡ ಕಲಾವಿದರು ನಟಿಸಿದ್ದ ಚಿತ್ರವಿದು.
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್ | ಅಪರ್ಣಾ ಸೇನ್ ನಿರ್ದೇಶನಲ್ಲಿ 2002ರಲ್ಲಿ ತೆರೆಕಂಡಿದ್ದ ‘ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್’ ಇಂಗ್ಲಿಷ್ ಸಿನಿಮಾ, ವಿಮರ್ಶಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಹುಲ್ ಬೋಸ್ ಮತ್ತು ಕೊಂಕಣ ಸೇನ್ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಿತ್ರವಿದು. ಈ ಸಿನಿಮಾದ ಸಂಗೀತದ ಹೊಣೆ ಹೊತ್ತಿದ್ದವರು ಝಾಕಿರ್. ವಿಶೇಷವಾಗಿ ಈ ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆದಿದ್ದರು. ಅವರ ಸಂಯೋಜನೆಯ ‘ಕಿಥೆ ಮೆಹೆರ್ ಆಲಿ’ ಮತ್ತು ‘If I’d Known’ ಹಾಡುಗಳು ಸಿನಿಪ್ರಿಯರ ಮನಗೆದ್ದಿದ್ದವು. ‘ಕಿಥೆ ಮೆಹೆರ್ ಆಲಿ’ ಹಾಡಿನ ಒಂದು ಭಾಗಕ್ಕೆ ಅವರು ದನಿಯಾಗಿದ್ದರು. ಮುಖ್ಯವಾಹಿನಿ ಸಿನಿಮಾಗೆ ಅವರು ಹಾಡಿದ ಮೊದಲ ಪ್ರಯತ್ನವಿದು.
ಪರ್ಝಾನಿಯಾ | ರಾಹುಲ್ ಧೊಲಾಕಿಯಾ ನಿರ್ದೇಶನದ ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಪರ್ಝಾನಿಯಾ’ ಹಿಂದಿ ಸಿನಿಮಾಗೆ ಝಾಕಿರ್ ಹುಸೇನ್ ಸಂಗೀತವಿತ್ತು. 2002ರ ಗುಜರಾತ್ ಗಲಭೆ ಹಿನ್ನೆಲೆಯ ಕಥಾವಸ್ತು ಹೊಂದಿದ್ದ ಚಿತ್ರವಿದು. ನಾಸಿರುದ್ದೀನ್ ಷಾ, ಸಾರಿಕಾ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಇದಾಗಿ ತುಂಬಾ ವರ್ಷಗಳ ನಂತರ ಅವರು ಮತ್ತೆ ಸಿನಿಮಾ ಸಂಗೀತಕ್ಕೆ ಹಿಂತಿರುಗಿದ್ದು ‘ಮಾಂಟೊ’ (2018) ಚಿತ್ರಕ್ಕೆ. ನಂದಿತಾ ದಾಸ್ ನಿರ್ದೇಶನದ ಈ ಬಯೋಪಿಕ್ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅಭಿನಯಿಸಿದ್ದರು.
ಹೀಟ್ ಅಂಡ್ ಡಸ್ಟ್ | ಜೇಮ್ಸ್ ಐವರಿ ನಿರ್ದೇಶನದ ‘ಹೀಟ್ ಅಂಡ್ ಡಸ್ಟ್’ ಹಿಂದಿ – ಇಂಗ್ಲಿಷ್ ದ್ವಿಭಾಷಾ ಸಿನಿಮಾಗೆ ರಿಚರ್ಡ್ ರಾಬಿನ್ಸ್ ಜೊತೆಗೂಡಿ ಸಂಗೀತ ಸಂಯೋಜಿಸಿದ್ದರು ಝಾಕಿರ್. ಈ ಚಿತ್ರದಲ್ಲಿ ‘ಇಂದರ್ ಲಾಲ್’ ಆಗಿ ಅವರು ತೆರೆಯ ಮೇಲೂ ಕಾಣಿಸಿಕೊಂಡಿದ್ದರು. ಷಾಜಿ ಕರುಣ್ ನಿರ್ದೇಶನ, ಮೋಹನ್ ಲಾಲ್ ನಟನೆಯ ‘ವಾನಪ್ರಸ್ಥಂ’ ಮಲಯಾಳಂ ಸಿನಿಮಾಗೆ ಝಾಕಿರ್ ಹುಸೇನ್ ಸಂಗೀತ ಸಂಯೋಜಿಸಿದ್ದರು.