ಸಿದ್ಧ ಸೂತ್ರ, ಕದ್ದ ಮಾಲೇ‌ ಆದರೂ ’12th MAN’ ಬೋರು ಹೊಡೆಸುವುದಿಲ್ಲ. ಆಹಾ, ಅತ್ಯದ್ಭುತ ಅನಿಸುವ ಸಿನಿಮಾ ಅಲ್ಲದಿದ್ದರೂ ಒಪ್ಪಬಹುದಾದ ಚಿತ್ರ. Disney+ Hotstarನಲ್ಲಿ ಸ್ಟ್ರೀಂ ಆಗುತ್ತಿರುವ ಕಾರಣ ಕೂತಲ್ಲೇ ಎರಡೂವರೆ ಗಂಟೆ ವಿನಿಯೋಗಿಸಲು ಅಡ್ಡಿಯಿಲ್ಲ.

ಈ ಮೊದಲು ಮೆಮೊರೀಸ್, ಊಳಂ, ದೃಶ್ಯಂನಂಥ ಸಿನಿಮಾಗಳನ್ನು ಕೊಟ್ಟ ಜೀತು‌ ಜೋಸೆಫ್‌ ಜತೆ ಮೋಹನ್ ಲಾಲ್ ಮತ್ತೆ ಜತೆಗೂಡಿದ್ದಾರೆ. ಈ ಬಾರಿ ಥ್ರಿಯೇಟರ್‌ಗೆ ಬರದೆ ನೇರ ಒಟಿಟಿ ಪ್ರವೇಶಿಸಿದ್ದಾರೆ. ಜೀತು ಜೋಸೆಫ್‌ಗೆ ಕ್ರೈಂ ಥ್ರಿಲ್ಲರ್ ಭಲೇ ಹಿಡಿತವಿರುವ ಕಥಾವಸ್ತು. ಹಾಗಾಗಿ ’12th MAN’ನಲ್ಲೂ ಅದು ಮುಂದುವರಿದಿದೆ.

ಕ್ರೈಂ ಅಥವಾ ಹಾರರ್ ಜಾತಿಯ ಸಿನಿಮಾದಲ್ಲಿ ಹನ್ನೊಂದು ಮಂದಿ ಮಾಜಿ ಕ್ಲಾಸ್ಮೇಟುಗಳು ಜತೆಯಾಗಿ ಒಂದು ರೆಸಾರ್ಟಿಗೆ ಹೋಗುವುದು ಲಾಗಾಯ್ತಿನಿಂದಲೂ ಅನುಸರಿಸಿಕೊಂಡು ಬಂದ ಸಿದ್ಧಸೂತ್ರ. ಅವರೆಲ್ಲ ಕ್ಲಾಸ್ಮೇಟ್‌ಗಳು ಎಂಬುದನ್ನು ತಿಳಿಸಲು ಹಾಗೂ ಪ್ರಸ್ತುತ ಅವರ ಸ್ಥಿತಿಗತಿಗಳನ್ನು ಆರಂಭದ ಹಂತದಲ್ಲಿ ಒಂದಷ್ಟು ದೃಶ್ಯಗಳು ಬೇರೆ ಬೇರೆ ಕಡೆಗಿವೆ. ಆ ಪೈಕಿ ನಾಲ್ವರು ಗಂಡ-ಹೆಂಡಿರು, ಫಿದಾ ತಾನೇ ಹೇಳಿಕೊಳ್ಳುವಂತೆ ಸ್ವತಂತ್ರ ಹಕ್ಕಿ – ವಿಚ್ಛೇದಿತೆ. ಉಳಿದವನೊಬ್ಬ ಸಿದ್ಧಾರ್ಥ್ ಸದ್ಯದಲ್ಲೇ‌ ಮದುವೆಯಾಗಲಿರುವಾತ, ಪಾರ್ಟಿಗೆ ಭಾವಿ ಪತ್ನಿಯನ್ನೂ ಕರೆದೊಯ್ಯಲು ಎಲ್ಲವೂ ಸಿದ್ಧವಾಗಿರುತ್ತದೆ. ಕ್ರೈಂ ಥ್ರಿಲ್ಲರಲ್ಲಿ ಅಷ್ಟೂ ಮಂದಿ ಜತೆಯಾಗಿ ಒಂದು ರೆಸಾರ್ಟಿಗೆ ಹೋದರೆ ಅವರಲ್ಲಿ ಒಬ್ಬರು ಹೆಣವಾಗುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇಂಥ ಅತಿ ನಿರೀಕ್ಷಿತ ಸೂತ್ರವಿದ್ದರೂ ಆರಂಭದಲ್ಲಿ ಪಾರ್ಟಿಯನ್ನು ರಂಗೇರಿಸುವುದು ಅವರು ಆಯ್ಕೆ‌ ಮಾಡುವ ಆಟ. ಆ ಆಟವನ್ನು ನಿರ್ದೇಶಕರು “ನಥಿಂಗ್ ಟು ಹೈಡ್” ಎಂಬ ಫ್ರೆಂಚ್ ಸಿನಿಮಾದಿಂದ ಆಯ್ದುಕೊಂಡಿದ್ದಾರೆ. ‘ಪ್ರತಿಯೊಬ್ಬರೊಳಗೂ ಮುಚ್ಚಿಟ್ಟ ಒಂದು ವ್ಯಕ್ತಿತ್ವ ಇದ್ದೇ‌ ಇರುತ್ತದೆ. ಮುಚ್ಚಿಡಲು ಏನೂ ಇಲ್ಲದವರು ತಮ್ತಮ್ಮ ಮೊಬೈಲ್‌ಗಳನ್ನು ತೆಗೆದು ಮೇಜಿನ ಮೇಲೆ ಇಡಬೇಕು. ಬರುವ‌ ಕರೆಗಳನ್ನು ಲೌಡ್ ಸ್ಪೀಕರಲ್ಲೇ ಸ್ವೀಕರಿಸಬೇಕು‌ ಮತ್ತು ಮೆಸೇಜುಗಳನ್ನು ಗಟ್ಟಿಯಾಗಿ ಓದಬೇಕು‌. ಯಾರಿದ್ದೀರ ಆಟಕ್ಕೆ?’ ಎಂದು ಮೊದಲು ಸವಾಲೆಸೆಯುವುದು ಫಿದಾ. ಆಟಕ್ಕಿಲ್ಲ ಎಂದರೆ ಯಾರಿಗೂ ತಿಳಿಯಬಾರದ ಗೌಪ್ಯ ವಿಚಾರ ತನ್ನಲ್ಲಿದೆ ಎಂಬುದು ಸಾಬೀತಾಗುತ್ತದೆ, ಹಾಗಾಗಿ ಮನಸ್ಸಿಲ್ಲದಿದ್ದರೂ ಒಬ್ಬೊಬ್ಬರಾಗಿ ಆಟಕ್ಕೆ ಸೇರುತ್ತಾರೆ. ಕೆಲವು ಕರೆಗಳು ಸ್ವೀಕರಿಸಿದವರಿಗೆ ಮತ್ತು ತಂಡಕ್ಕೆ ಜತೆಯಾಗಿ ಮುಜುಗರ‌ ತಂದರೆ ಇನ್ನು ಕೆಲವು ತಂಡಕ್ಕೇ ಮನರಂಜನೆ. ಹೀಗೇ ಸಾಗುತ್ತಿರುವಾಗ ಮದುವೆಯಾಗಲಿರುವ ಹುಡುಗನಿಗೆ ಬರುವ ಒಂದು ಕರೆ ಪಾರ್ಟಿಯಲ್ಲಿ ಹುಯಿಲೆಬ್ಬಿಸುತ್ತದೆ. ಮೆಡಿಕಲ್ ರೆಪ್ ಆಗಿರುವ ಗೆಳೆಯ‌ ಸಿದ್ಧಾರ್ಥನಿಗೆ ಕರೆ ಮಾಡಿದಾಗ ಈತ ‘ತಾನೊಂದು ಪಾರ್ಟಿಯಲ್ಲಿದ್ದೇನೆ’ ಎನ್ನುತ್ತಾನೆ. ‘ಅದೇ ಅವತ್ತು ಒಬ್ಳಿಗೆ ಗರ್ಭಪಾತಕ್ಕೆ ಮಾತ್ರೆ ಬೇಕು ಅಂತ ಕೇಳಿ‌ ತೆಗೊಂಡಿದ್ಯಲ್ಲ, ಅದೇ ಗ್ರೂಪಾ?’ ಎಂದು ಭೂಪ ಕೇಳಿದಾಗ ಪಾರ್ಟಿಯಲ್ಲಿ‌ ಅಲ್ಲೋಲ ಕಲ್ಲೋಲ.

ಸಿದ್ಧ ಸೂತ್ರ, ಕದ್ದ ಮಾಲೇ‌ ಆದರೂ ಸಿನಿಮಾ ಈ ಹಂತದವರೆಗೆ ಬೋರು ಹೊಡೆಸುವುದಿಲ್ಲ. ಆಟ ಶುರುವಾಗುವ ಮೊದಲು ಕುಡುಕ ಮೋಹನ್‌ಲಾಲ್ ಒಂದಷ್ಟು‌ ರಂಜಿಸಿದರೆ ತರುವಾಯ ಫೋನಿನಾಟ ಮುಂದಕ್ಕೆ ನೋಡಿಸುತ್ತದೆ. ಹೀಗೆ ಅರ್ಧಕ್ಕೆ ಬಂದು ನಿಂತಾಗ ಪ್ರೇಕ್ಷಕರ ನಿರೀಕ್ಷೆಯಂತೆ ಒಬ್ಬಳು ಬೆಟ್ಟದ ಮೇಲಿಂದ ಹಾರಿ ಶವವಾಗಿ ಪತ್ತೆಯಾಗುತ್ತಾಳೆ. ಅವಳ ಸಾವಿನಲ್ಲಿ ಕುಡುಕನ ಪಾತ್ರವಿಲ್ಲ. ಏಕೆಂದರೆ ಆ ಕುಡುಕ ಡಿವೈಎಸ್‌ಪಿ ಚಂದ್ರಶೇಖರ್. ಕುಡಿದ ಮತ್ತಿನಲ್ಲಿ ಮಾಧ್ಯಮ ಪ್ರತಿನಿಧಿಗೆ ನಾಲ್ಕು ಬಿಗಿದು ಅಮಾನತ್ತಿಲ್ಲಿರುವ ಪೊಲೀಸ್ ಅಧಿಕಾರಿ ಆತ. ಇನ್ನೆರಡು ದಿನದಲ್ಲಿ ಮತ್ತೆ ಸೇವೆಗೆ ಸೇರಿಕೊಂಡರೆ ಮತ್ತೇರಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಕೊನೆಯದಾಗಿ ಕಂಠ ಪೂರ್ತಿ ಕುಡಿಯಲು ರೆಸಾರ್ಟು ಸೇರಿದ‌ ಪ್ರಾಮಾಣಿಕ ಅಧಿಕಾರಿ. ತನಿಖಾಧಿಕಾರಿಯ ಅನುಮತಿ ಮೇರೆಗೆ ಈ ಹತ್ತು ಮಂದಿಯನ್ನು ಒಮ್ಮೆ ವಿಚಾರಿಸುವ ಜವಾಬ್ದಾರಿ ಚಂದ್ರಶೇಖರ್ ಹೆಗಲಿಗೆ ಬೀಳುತ್ತದೆ. ಇಲ್ಲಿಂದ ನಂತರ‌ದ ಕತೆಯೇ ರಹಸ್ಯ‌ ಬೇಧನೆ.

ಪರಿಚಿತರ ನಡುವಿನ ಸಂಬಂಧ, ಪರಸ್ಪರ ಮೇಲಿರುವ ಅನುಮಾನ, ಒಳಗೊಳಗೇ ಮಾಡಿರುವ ವಂಚನೆ, ಗುಪ್ತ ಗರ್ಭಧಾರಣೆಯ ವಿಚಾರಗಳೆಲ್ಲ ವಿಚಾರಣೆ ವೇಳೆಗೆ ಒಂದೊಂದಾಗಿ ಹೊರಬರುವ ಪರಿ ಮೋಹನ್ ಲಾಲ್ ಸಾರಥ್ಯದಲ್ಲಿ ಕುತೂಹಲಕಾರಿಯಾಗಿದೆ. ಎರಡೂವರೆ‌ ಗಂಟೆಯ ಸಿನಿಮಾವನ್ನು‌ ಈ ಹಂತಕ್ಕೆ ಕೊಂಚ ಬೇಗ ತಂದು ನಿಲ್ಲಿಸಿದ್ದರೆ ಇನ್ನೂ ಒಳ್ಳೆಯದಿತ್ತು ಎಂದು ಅನಿಸದಿರದು. ಮುಂದಿನ ಭಾಗದಲ್ಲಿ‌ ಕತೆಯ ಬಹುಭಾಗ‌‌ ಒಂದೇ‌ ಕೊಠಡಿಯಲ್ಲಿ ನಡೆಯುತ್ತದಾದರೂ ಮೋಹನ್ ಲಾಲ್ ನಟನೆಯ ಕಾರಣ ಪ್ರೇಕ್ಷಕನಿಗೆ‌ ತನ್ನನ್ನೇ ಕೊಠಡಿಯೊಳಗೆ ಕೂಡಿ ಹಾಕಿದ ಅನುಭವ ಆಗಲು‌ ಬಿಡುವುದಿಲ್ಲ. ಪೊಲೀಸ್ ಅಧಿಕಾರಿಯ ವಿನಮ್ರತೆ, ಏರು ಧ್ವನಿಯ‌ ಮಾತುಕತೆ ಹಾಗೂ ದೃಢತೆ ಇತ್ತಲಿಂದತ್ತ ಅತ್ತಿಂದಿತ್ತ ಸಾಗುವ ಭರದಲ್ಲಿ‌ ಸಿನಿಮಾಕ್ಕೊಂದು ವೇಗ ಸಿಗುತ್ತದೆ.

ಜತೆಗೆ ಸಾಥ್ ನೀಡಿರುವುದು ಚಿತ್ರಕತೆ ಮತ್ತು ಸಂಕಲನ‌ ಕಲೆ. ಕೊಲೆಯ ರಹಸ್ಯದ ಜತೆಗೆ ಪದರ ಪದರವಾಗಿ ಮಿಳಿತವಾಗಿರುವ ಹತ್ತೂ ಮಂದಿಯ ವ್ಯಕ್ತಿತ್ವಗಳನ್ನು ಚಿತ್ರಕಥೆ ಕುತೂಹಲಮಯವಾಗಿ ಅನಾವರಣ ಮಾಡಿದೆ. ಜತೆಗೆ ಕಳೆದ ಘಟನೆ ಹಾಗೂ ಪ್ರಸ್ತುತ ವಿಚಾರಣೆ ದೃಶ್ಯಗಳ ನಡುವಿನ ಜಿಗಿದಾಟ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿದೆ. ಪಾತ್ರಧಾರಿಗಳೆಲ್ಲರೂ ತಮ್ತಮ್ಮ ಪಾತ್ರಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿರುವ ಕಾರಣ ಯಾವ ಹಂತದಲ್ಲೂ ಕತೆ ಕೃತಕ ಅನಿಸುವುದಿಲ್ಲ. ಸಂಭಾಷಣೆಯ ಮೇಲೆಯೇ ಹೆಚ್ಚಾಗಿ ಆಶ್ರಯಿಸುವ ಕಾರಣ ಮಾತುಕತೆ ಕರಾರುವಾಕ್ಕಾಗಿದೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ತೋರುವ ಆ ಸಾವು ಕೊಲೆ ಎಂದಾಗದಿದ್ದರೆ ಅಲ್ಲಿ ಸಿನಿಮಾಕ್ಕೆ ಕೆಲಸವಿಲ್ಲ. ಹಾಗಾಗಿ ಅದನ್ನು ಆ ಸ್ನೇಹಕೂಟದ ಸದಸ್ಯರೇ ಮಾಡಿದ್ದೇ ಅಥವಾ ಹೊರಗಿನವರೇ? ಕೊಲೆಯ ಕಾರಣವೇನು ಎಂಬುದನ್ನೆಲ್ಲ ಈ ವಿಮರ್ಶೆಯಲ್ಲಿ ಹೇಳಲಾಗುವುದಿಲ್ಲ.

‘ದೃಶ್ಯಂ‌’ನಲ್ಲಿ ಜಾರ್ಜುಕುಟ್ಟಿ ಒಬ್ಬ ಶ್ರೀಸಾಮಾನ್ಯ. ಆ ಕಾರಣದಿಂದ ಆತ ಮಾಡುವ ಉಪಾಯಗಳು ಹುಬ್ಬೇರಿಸುತ್ತದೆ. ಆದರಿಲ್ಲಿ ಚಂದ್ರಶೇಖರ್ ಡಿವೈಎಸ್‌ಪಿ, ಹಾಗಾಗಿ ಆತನ ವಿಚಾರಣಾ ವಿಧಾನ ಪಾತ್ರದ ಚೌಕಟ್ಟಿನಲ್ಲಿ ವಿಶೇಷ ಅನಿಸುವುದಿಲ್ಲ. ಇವೆಲ್ಲ ಅಂಶಗಳ ನಡುವೆ ‘ಟ್ವೆಲ್ತ್‌ ಮ್ಯಾನ್‌’ ಅತ್ಯದ್ಭುತ ಅನಿಸುವ ಸಿನಿಮಾ ಅಲ್ಲದಿದ್ದರೂ ಒಪ್ಪಬಹುದಾದ ಚಿತ್ರ. ಒಟಿಟಿಯಾದ ಕಾರಣ ಕೂತಲ್ಲೇ ಎರಡೂವರೆ ಗಂಟೆ ವಿನಿಯೋಗಿಸಲು ಅಡ್ಡಿಯಿಲ್ಲ.

LEAVE A REPLY

Connect with

Please enter your comment!
Please enter your name here