ತಮಿಳ್‌ ನಿರ್ದೇಶನದ ‘ಠಾಣಾಕ್ಕಾರನ್‌’ ಪೊಲೀಸ್‌ ಇಲಾಖೆಯ ಹಲವು ಮುಖಗಳನ್ನು ಅನಾವರಣಗೊಳಿಸುತ್ತದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ನಟ ವಿಕ್ರಂ ಪ್ರಭು ಅವರಿಗೆ ಇದು ಒಂದೊಳ್ಳೆಯ ಕಮ್‌ಬ್ಯಾಕ್‌ ಸಿನಿಮಾ. ‘ಠಾಣಾಕ್ಕಾರನ್‌’ ಡಿಸ್ನೀಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಆತನ ಹೆಸರು ಅರಿವಗನ್.‌ ಪೊಲೀಸ್‌ ಆಗಬೇಕೆನ್ನುವುದು ಅವನ ಚಿಕ್ಕಂದಿನ ಆಸೆ, ಹಂಬಲ ಮತ್ತು ಛಲ. ಅದಕ್ಕೊಂದು ಫ್ಲಾಶ್‌ಬ್ಯಾಕ್‌ ಕೂಡ ಇದ್ದು, ಅದು ಚಿಕ್ಕದಾಗಿ, ಚೊಕ್ಕವಾಗಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ. ತನ್ನಿಚ್ಛೆಯಂತೆ ತರಬೇತಿ ಪಡೆಯಲು ಪೊಲೀಸ್ ಅಕಾಡೆಮಿಗೆ ಸುಮಾರು 200 ರಿಂದ 300 ಜನರ ಜೊತೆ ಆತನೂ ಒಬ್ಬನಾಗಿ ಬರುತ್ತಾನೆ. ಆದರೆ ಆತ ಅಲ್ಲಿಗೆ ಬಂದ ಮೇಲೆ ಪೊಲೀಸ್ ತರಬೇತಿ ಸಂದರ್ಭದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಲ್ಲಿನ ರಾಜಕೀಯ, ಮೇಲಧಿಕಾರಿಗಳ ದರ್ಪ, ಪೊಲೀಸರ ವ್ಯಥೆಯ ಕತೆಗಳು, ಈತನನ್ನು ಪೊಲೀಸ್‌ ತರಬೇತಿ ಪೂರ್ಣಗೊಳಿಸಲು ಬಿಡಬಾರದು ಎನ್ನುವ ಅಧಿಕಾರಿಗಳ ಕುತಂತ್ರ… ಹೀಗೆ ಸಾಲು ಸಾಲು ಸಂಕಷ್ಟಗಳು. ಇದು ಹೊಸ ರೀತಿಯ ಕತೆ ಎಂದೇ ಹೇಳಬಹುದು. ಚಿತ್ರದ ನಿರ್ದೇಶಕನ ಹೆಸರು ತಮಿಳ್. ಈತ ‘ಅಸುರನ್’ ಚಿತ್ರದಲ್ಲಿ ನಾಯಿಗಳ ಜೊತೆ ಧನುಷ್‌ರನ್ನು ಬೇಟೆಯಾಡುವ ನೆಗಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ‘ಜೈಭೀಮ್’ ಚಿತ್ರದಲ್ಲಿ ನೆಗಟಿವ್ ಶೇಡ್‌ನ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ ವ್ಯಕ್ತಿ. ಹೆಸರಾಂತ ನಿರ್ದೇಶಕ ವೆಟ್ರಿಮಾರನ್ ಬಳಿ ಸಹಾಯಕ ನಿರ್ದೇಶಕನಾಗಿ ‘ವಿಸಾರಣೈ’, ‘ವಡಾ ಚೆನ್ನೈ’, ‘ಅಸುರನ್‌’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದವರು.

ಚಿತ್ರದಲ್ಲಿ ಇಷ್ಟೊಂದು ಡಿಟೇಲಿಂಗ್‌ ಬರಲು ಕಾರಣ ಸ್ವತಃ ನಿರ್ದೇಶಕರೇ ಹತ್ತು ವರ್ಷಗಳ ಕಾಲ ಪೊಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿರುವುದು. ಪ್ರತಿಯೊಂದು ದೃಶ್ಯವನ್ನೂ ಅಚ್ಚುಕಟ್ಟಾಗಿ ಕಟ್ಟಿದ್ದಾರೆ ನಿರ್ದೇಶಕರು. ಹಲವು ವರ್ಷಗಳಿಂದ ಒಂದೊಳ್ಳೆಯ ಕಮ್‌ ಬ್ಯಾಕ್‌ಗಾಗಿ ಕಾಯುತ್ತಿದ್ದ ವಿಕ್ರಂ ಪ್ರಭು ಅವರಿಗೆ ಇದು ಒಳ್ಳೆಯ ಕಮ್‌ಬ್ಯಾಕ್‌ ಎಂದೇ ಹೇಳಬಹುದು. ಅವರು ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಅವರ ಜೊತೆ ಲಾಲ್, ಮಧುಸೂದನ್ ರಾವ್, ಎಂ.ಎಸ್.ಭಾಸ್ಕರ್, ಬೋಸ್ ವೆಂಕಟ್ ಎಲ್ಲರ ಅಭಿನಯವೂ ಚೆನ್ನಾಗಿದೆ. ಗಿಬ್ರಾನ್‌ ಹಿನ್ನೆಲೆ ಸಂಗೀತ ಕತೆಗೆ ಪೂರಕವಾಗಿದೆ. ರಿಯಲಿಸ್ಟಿಕ್ ಸಿನಿಮಾ ಇಷ್ಟಪಡುವವರಿಗೆ ತುಂಬಾ ಇಷ್ಟವಾಗುವ ಈ ಸಿನಿಮಾ Disneyplus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleಹನ್ಸಲ್‌ ಮೆಹ್ತಾ ‘Scam 2003’ ಟೀಸರ್‌; ತೆಲಗಿ ಪಾತ್ರದಲ್ಲಿ ಗಗನ್‌ ದೇವ್‌ ರಿಯಾರ್‌
Next articleಕ್ರೈಂ ಪರಿಣಿತ ಜೀತು ಜೋಸೆಫ್ ಕೈಯಲ್ಲಿ ಹೊಸ ರೂಪದ ಹಳೆ ಕತೆ ’12th MAN’

LEAVE A REPLY

Connect with

Please enter your comment!
Please enter your name here