ಮೊದಲ ಮಹಾಯುದ್ಧದ ಹಿನ್ನೆಲೆಯ ಸಿನಿಮಾ ‘1917’ ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಒಂದೇ ಶಾಟ್‌ನಲ್ಲಿ ಚಿತ್ರಿಸಿದಂತೆ ಕಾಣುವ ಇದೊಂದು ತಾಂತ್ರಿಕ ಅದ್ಭುತ.
ಅದು ಫ್ರಾನ್ಸ್‌ನಲ್ಲಿನ ಒಂದು ಯುದ್ಧಭೂಮಿ. ಮೊದಲ ಮಹಾಯುದ್ಧದ ಕಾಲ. ದಿನಾಂಕ ಎಪ್ರಿಲ್ 6, ಇಸವಿ 1917. ಮಹಾಯುದ್ಧದ ಆ ಒಂದು ದಿವಸ ಬ್ರಿಟಿಷರ ಯುದ್ಧ ಇತಿಹಾಸದಲ್ಲಿ ಐತಿಹಾಸಿಕ ದಿನ. ಹಾಗಾಗಿ ಸಿನಿಮಾದ ಹೆಸರೂ ‘1917’.
ಐದಾರು ಅಡಿಕಂದಕ ತೋಡಿ ಅದರೊಳಗೆ ಕೂತು ಯುದ್ಧ ಮಾಡಬೇಕಿದ್ದ ‘ಟ್ರೆಂಚ್ ವಾರ್‌ಫೇರ್’ ಕಾಲವದು. ಬ್ಲೇಕ್ ಎಂಬ ಸೈನಿಕನಿಗೆ ಕಮಾಂಡರ್‌ನಿಂದ ಬುಲಾವ್ ಬರುತ್ತದೆ. ಆ ಪ್ರದೇಶದಿಂದ ಒಂಭತ್ತು ಮೈಲುಗಳಾಚೆ (14.4 ಕಿಮೀ) 1600 ಮಂದಿಯುಳ್ಳ ಡೆವೊನ್‌ಶೈರ್ ಹೆಸರಿನ ಮತ್ತೊಂದು ಬ್ರಿಟಿಷ್ ತುಕಡಿ ಇದೆ. ಮರುದಿನ ಬೆಳಗ್ಗೆ ಜರ್ಮನ್ನರ ಮೇಲೆ ಆಕ್ರಮಣ ಮಾಡಲು ಆ ತುಕಡಿ ಸರ್ವಸನ್ನದ್ಧವಾಗಿದೆ. ಆದರದು ವಾಸ್ತವದಲ್ಲಿ ಅಷ್ಟೂ ಬ್ರಿಟಿಷ್ ಸೈನಿಕರನ್ನು ಕಬ್ಜಾ ಮಾಡಲು ಜರ್ಮನರು ಹೂಡಿದ ಸಂಚು ಎಂಬ ಗುಪ್ತ ಸಂದೇಶ ಇಲ್ಲಿನ ಕಮಾಂಡರಿಗೆ ಬಂದಿದೆ. ಸಂದೇಶ ಬಂದಂತೆಯೇ ಟೆಲಿಗ್ರಾಫ್ ಲೈನ್ ಬಳಿಸಿ ಮುಂದಿನ ಬೆಟಾಲಿಯನ್‌ಗೆ ಸಂದೇಶ ದಾಟಿಸುವ ಅನುಕೂಲವಿಲ್ಲ. ಇವರಿಗೂ ಅವರಿಗೂ ನಡುವಿನ ಒಂಭತ್ತು ಮೈಲುಗಳ ನಡುವೆ ಈ ಮೊದಲು ಬೀಡುಬಿಟ್ಟಿದ್ದ ಜರ್ಮನ್ ಸೇನೆ ಈಗ ಜಾಗ ಖಾಲಿ ಮಾಡಿದೆ. ಹಾಗೆ ಎದ್ದು ಹೋಗುವಾಗ ಅಲ್ಲಿದ್ದ ಅಷ್ಟೂ ಟೆಲಿಗ್ರಾಫ್ ಲೈನುಗಳನ್ನು ಕೆಡವಿದೆ. ಹಾಗಾಗಿ ಸಂದೇಶ ರವಾನೆಗೆ ಸುಲಭ ವ್ಯವಸ್ಥೆ ಇಲ್ಲಿನವರಿಗಿಲ್ಲ.
ಹಾಗೆಂದು ಡೆವೋನ್‌ಶೈರ್ ತುಕಡಿಗೆ ಮರುದಿನ ಬೆಳಗಿನ ಜಾವದ ಒಳಗೆ ಸಂದೇಶ ತಲುಪದಿದ್ದರೆ ಅಷ್ಟೂ ಮಂದಿ ನಿರ್ನಾಮವಾಗುವುದು ಶತಸಿದ್ಧ. ಮುನ್ನುಗ್ಗಲಿರುವ ತಂಡದಲ್ಲಿ ಬ್ಲೇಕ್‌ನ ಅಣ್ಣನೂ ಇರುವ ಕಾರಣ ಸಂದೇಶ ರವಾನೆಗೆ ಈತನನ್ನೇ ಆಯ್ಕೆ ಮಾಡಲಾಗಿದೆ. ಸ್ಕೋಫೀಲ್ಡ್ ಎಂಬ ಮತ್ತೊಬ್ಬ ಸೈನಿಕ ಇವನ ಜತೆಗಾರ.
ಅಲ್ಲಿಂದ ಬ್ಲೇಕ್ ಹಾಗೂ ಸ್ಕೋಫೀಲ್ಡ್‌ನ ಸಾಹಸ ಯಾತ್ರೆ ಆರಂಭ. ನಡುವಿನ 14 ಕಿಲೋಮೀಟರ್ ಜರ್ಮನಿ ಸೇನೆ ಬೀಡುಬಿಟ್ಟು ಎದ್ದು ಹೋಗ ಜಾಗ. ಅಲ್ಲಿ ಹೆಜ್ಜೆ ಹೆಜ್ಜೆಗೂ ಅಪಾಯ ಎದುರಾಗುವ ವ್ಯವಸ್ಥೆ ಯೋಜಿಸಿಟ್ಟೇ ಜರ್ಮನರು ಆ ಪ್ರದೇಶ ಖಾಲಿ ಮಾಡಿದ್ದಾರೆ. ಹಾಗಾಗಿ ಶತಾಯಗತಾಯ ಅಣ್ಣನನ್ನು ಉಳಿಸಲೇಬೇಕು ಎಂಬವನಿಂದ ಮಾತ್ರವೇ ಆ ಅಪಾಯಕಾರಿ ಕಾಲ್ನಡಿಗೆಯ ದೀರ್ಘ ಪ್ರಯಾಣ ಸಾಧ್ಯ. ಮಾರ್ಗಮಧ್ಯೆ ಎದುರಾಗಬಹುದಾದ ಗಂಡಾಂತರ ನೂರಾರು.
ಇದೊಂದು ರೋಚಕ ಕತೆ, ನಿಜ. ಆದರೆ ಅದಕ್ಕಿಂತಲೂ ರೋಚಕ ಈ ಕತೆಯನ್ನು ಪ್ರಸ್ತುತಪಡಿಸಿದ ರೀತಿ. ಎಲ್ಲಾ ಸಿನಿಮಾಗಳಲ್ಲಿ ಒಂದಾದ ಮೇಲೆ ಒಂದು ದೃಶ್ಯಗಳು. ಕೆಲವು ಹಗಲು, ಕೆಲವು ರಾತ್ರಿ. ಇಲ್ಲಿ ಹಾಗಲ್ಲ. ಶುರುವಾದ ಮೇಲೆ ಕೊನೆಯವರೆಗೂ ಅದು ಒಂದೇ ಶಾಟ್. ಬ್ಲೇಕ್ ಮತ್ತು ಸ್ಕೋಫೀಲ್ಡನ್ನು ಸದಾ ಹಿಂಬಾಲಿಸುವುದೇ ಕ್ಯಾಮರಾದ ಕೆಲಸ. ಬೆಳಗ್ಗೆ ಹೊರಟು ನಡೆದೂ ನಡೆದು ಮಧ್ಯಾಹ್ನವಾಗುತ್ತದೆ. ಅದು ಕಳೆದು ರಾತ್ರಿಯವರೆಗೂ ಕಾಲ್ನಡಿಗೆ. ಅಲ್ಲಲ್ಲಿ ಒದಗಿ ಬರುವ ಸವಾಲುಗಳು, ಅದನ್ನು ಮೆಟ್ಟಿ ಮುನ್ನಡೆವ ಈ ಸೈನಿಕರ ಸಾಹಸಗಳು. ವಿಡಿಯೋ ಗೇಮ್ ಆಡುವಾಗ ನಮ್ಮ ನಿಗ್ರಹದಲ್ಲಿರುವ ಪಾತ್ರಗಳು ಸ್ಕ್ರೀನಿನಲ್ಲಿ ಹೇಗೆ ಕಣ್ಮುಂದೆ ಹೋಗುತ್ತವೋ ಹಾಗೆ ಆ ಸೈನಿಕರು ಕಾಣುತ್ತಾರೆ. ಹಾಗಾಗಿ ನಾವೂ ಅವರೊಂದಿಗೆ ಚಲಿಸಿದ ಅನುಭವ ನೀಡುವ ಯುದ್ಧಚಿತ್ರವಿದು. ಹಾಗೆಂದು ನಾವು ಅವರ ಬೆನ್ನು ಮಾತ್ರ ನೋಡುತ್ತಾ ಕೂರುವುದಲ್ಲ, ಅವರನ್ನು ಎಲ್ಲಾ ಕೋನದಿಂದ ತೋರಿಸಲಾದರೂ ಎಲ್ಲಿಯೂ ತುಣುಕಿಗೆ ತಡೆ ಬರದಂತೆ ಚಿತ್ರಿಸಿರುವುದು ನೋಡುವಿಕೆಗೊಂದು ಭಿನ್ನ ಅನುಭವ ಕೊಡುತ್ತದೆ.
ಹಾಗೆಂದು ಬೆಳಗ್ಗಿನಿಂದ ಮರುದಿನ ಬೆಳಗಿನವರೆಗೆ ಒಂದೇ ದಿನದಲ್ಲಿ ಚಿತ್ರೀಕರಣ ಮಾಡಿದ ಸಿನಿಮಾ ಇದಲ್ಲ. ಒಂದು ದೃಶ್ಯದಿಂದ ಮತ್ತೊಂದಕ್ಕೆ ಜಾರುವುದು ಗೊತ್ತೇ ಆಗದಂತೆ ಇದೆ ಎಡಿಟಿಂಗ್‌ನ ವಿನ್ಯಾಸ. ದೃಶ್ಯಗಳನ್ನು ಎಲ್ಲೆಲ್ಲಿ ಕತ್ತರಿಸಿ ಜೋಡಿಸಲಾಗಿದೆ ಎಂಬುದನ್ನು ಹುಡುಕುವುದು ಸವಾಲಿನ ಅನುಭವ. ‘1917’ ಚಲನಚಿತ್ರಕ್ಕಾಗಿಯೇ ಕ್ಯಾಮರಾ ಕಂಪನಿ ಆ್ಯರಿ ವಿಶೇಷ ಕ್ಯಾಮರಾವನ್ನು ಸಿದ್ಧಪಡಿಸಿಕೊಟ್ಟಿತ್ತು. 4k ಗುಣಮಟ್ಟವಿದ್ದೂ ಅತಿ ಸಣ್ಣ ಗಾತ್ರ ಅಲೆಕ್ಸಾ ಮಿನಿ ಕ್ಯಾಮರಾವನ್ನು ತಯಾರು ಮಾಡಿದ್ದೇ ಈ ಸಿನಿಮಾ ಚಿತ್ರೀಕರಣದ ಉದ್ದೇಶಕ್ಕೆ. ಛಾಯಾಗ್ರಾಹಕ ರೋಜರ್ ಡೇಕಿನ್ಸ್ ಕ್ಯಾಮರಾದ ಪ್ರತಿ ಚಲನೆಗೂ ಅರ್ಥ ಕೊಟ್ಟಿದ್ದರೆ ಥಾಮಸ್ ನ್ಯೂಮ್ಯಾನ್‌ನ ಹಿನ್ನೆಲೆ ಸಂಗೀತ ಯುದ್ಧದ ಉನ್ಮಾದ – ಅಪವಾದಗಳ ದೃಶ್ಯಗಳನ್ನು ಮೇಲೆತ್ತಿದೆ.
ಉತ್ತಮ ಅನುಭವ ನೀಡುವ ಸಿನಿಮಾವೇ ಆದರೂ ಕೆಲವೊಂದು ಚೋದ್ಯಗಳಿವೆ. ಯುದ್ಧದ ಇತಿಹಾಸ ಬರೆಯುವ ಅವಕಾಶ ಸಿಗುವುದು ಗೆದ್ದ ಪಕ್ಷಕ್ಕೆ ಮಾತ್ರ. ಹಾಗಾಗಿ ಎದುರು ಪಕ್ಷದವರದ್ದು ದುಷ್ಟರ ಸೇನೆ ಎಂದೇ ಇತಿಹಾಸ ದಾಖಲಿಸುತ್ತದೆ. ಈ ಸಿನಿಮಾವೂ ಅದೇ ಭಾವ ಮೂಡಿಸಲು ಹರಸಾಹಸ ಪಟ್ಟಿದೆ. ಜರ್ಮನ್ನರು ಬೆಂಕಿ ಹಾಕಿ ಜಾಗ ಖಾಲಿ ಮಾಡಿದ ಒಂದು ಪಟ್ಟಣಕ್ಕೆ ಸ್ಕೋಫೀಲ್ಡ್ ಪ್ರವೇಶಿಸುತ್ತಾನೆ. ಅಲ್ಲಿ ನೆಲಮಾಳಿಗೆಯಲ್ಲಿ ಓರ್ವ ದಾದಿ ಸಿಗುತ್ತಾಳೆ. ಅವಳ ಬಗಲಲ್ಲಿರುವುದು ಯಾರೋ ಹೆತ್ತ ಒಂದು ಮಗು. ಜರ್ಮನರು ಹೀಗೆ ಅಮಾನವೀಯವಾಗಿ ಬಿಟ್ಟು ಹೋದ ಮಗುವಿನ ಮೇಲೆ ಬ್ರಿಟಿಷ್ ಸೈನಿಕನಿಗೆ ಅನುಕಂಪ ಬರುತ್ತದೆ, ಇವನ ಕಿಟ್‌ನಲ್ಲಿದ್ದ ಅಷ್ಟೂ ಊಟವನ್ನು ಮಗುವಿಗೆ ಕೊಡುತ್ತಾನೆ. ಆದರೆ ಮಗುವಿಗೆ ಬೇಕಿರುವುದು ಹಾಲು. ಇಂಥ ಸನ್ನಿವೇಶವೊಂದು ಮುಂದೆ ಬರುತ್ತದೆ ಎಂದು ಮೊದಲೇ ತಿಳಿದಿದ್ದ ನಿರ್ದೇಶಕ ಸ್ಯಾಮ್ ಮೆಂಡೆಸ್ ಆ ಬ್ರಿಟಿಷ್ ಸೈನಿಕನಿಗೆ ದಾರಿ ಮಧ್ಯೆ ಹಾಲು ಸಿಗಲಿ ಎಂದು ದಾರಿಮಧ್ಯ ಹಸುವಿರುವ ದೃಶ್ಯ ಹೆಣೆದಿದ್ದಾನೆ.
ಈ ನಿರ್ದೇಶಕನ ಚಾಣಾಕ್ಷಮತಿ ಅಷ್ಟಕ್ಕೇ ಸೀಮಿತವಲ್ಲ. ಮೊದಲ ಮಹಾಯುದ್ಧದಲ್ಲಿ 13 ಲಕ್ಷ ಭಾರತೀಯ ಸೈನಿಕರು ಹೋರಾಡಿದ್ದರು ಎನ್ನುತ್ತದೆ ಅದೇ ಬ್ರಿಟಿಷರ ಇತಿಹಾಸ. ಆದರೆ ಐತಿಹಾಸಿಕ ಘಟನೆಯನ್ನು ಮರುಸೃಷ್ಟಿ ಮಾಡುವಾಗ ಈ ನಿರ್ದೇಶಕನಿಗೆ ಸಿಕ್ಕಿದ್ದು ಆ ಹದಿಮೂರು ಲಕ್ಷದ ಪೈಕಿ ಕೇವಲ ಇಬ್ಬರು ಭಾರತೀಯ ಸೈನಿಕರು. ಅದೂ ಅವರು ಒಂದೆಡೆಯಿಂದ ಮತ್ತೊಂದೆಡೆಗೆ ಲಾರಿಯಲ್ಲಿ ಹೋಗುವವರು. ಇನ್ನುಳಿದಂತೆ ಮೈಲುದ್ದದ ಟ್ರೆಂಚುಗಳಲ್ಲಿ, ಆಚೆ ಬದಿಯ ಮತ್ತೊಂದು ಬೆಟಾಲಿಯನ್‌ನಲ್ಲಿ ಎಲ್ಲಿಯೂ ಭಾರತೀಯರಂತೆ ಕಾಣುವವರನ್ನು ಹುಡುಕಿದರೂ ಸಿಗುವುದಿಲ್ಲ. ನೀವ್ನೀವೇ ಬಡಿದಾಡಿ ಎಂದು ಬ್ರಿಟಿಷರು ಪಾಕಿಸ್ತಾನ ಸೃಷ್ಟಿಸಿ, ಭಾರತ ಬಿಟ್ಟು ಹೋಗಿ ವರ್ಷ 75 ಆದರೂ, ಬ್ರಿಟನ್ ಇಂದು ಪುಟ್ಟ ರಾಷ್ಟ್ರವಾಗಿ ಐರೋಪ್ಯ ಒಕ್ಕೂಟದ ಜತೆಗೇ ಮುಗಿಯದ ಭಿನ್ನಾಭಿಪ್ರಾಯ ಇಟ್ಟುಕೊಂಡಿದ್ದರೂ ಅಂದು ಅವರಿಗಾಗಿ ಬಡಿದಾಡಿದ 13 ಲಕ್ಷ ಸೈನಿಕರು ಐತಿಹಾಸಿಕ ಚಲನಚಿತ್ರದ ನಿರ್ದೇಶಕನ ಗಮನಕ್ಕೆ ಬರದಿರುವುದು ಸಾಮ್ರಾಜ್ಯಶಾಹಿಯ ಸಣ್ಣತನಕ್ಕೆ ದೊಡ್ಡ ಸಾಕ್ಷಿ.
ಉತ್ತಮ ತಾಂತ್ರಿಕತೆ ನೋಡಿ ತಿಳಿಯಲು, ಯುದ್ಧ ಕಾಲದ ಸಂಕಷ್ಟಗಳನ್ನು ಅರಿಯಲು, ಹಾಗೂ ಅವರು ಸಾಹಸವೆಂದೇ ಬಿಂಬಿಸಿದ್ದರೂ, ನಮಗೆ ಬ್ರಿಟಿಷರ ಡೋಂಗಿತನ ಕಾಣಲು ‘1917’ ಒಮ್ಮೆಯಾದರೂ ನೋಡಲೇಬೇಕಾದ ಸಿನಿಮಾ.