ನೈಜ ಘಟನೆಯೊಂದನ್ನು ಆಧರಿಸಿ ಚಿತ್ರಕಥೆ ಹೆಣೆದು ಬಿಗಿ ನಿರೂಪಣೆ, ಉತ್ತಮ ಸಂಭಾಷಣೆಯುಳ್ಳ ರಿಯಲಿಸ್ಟಿಕ್‌ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿಸುವುದರಲ್ಲಿ ನಿರ್ದೇಶಕ ಕಮಲ್ ಕೆ..ಎಮ್. ಯಶಸ್ವಿಯಾಗಿದ್ದಾರೆ. ‘ಪಡ’ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಪಡ’ ಸತ್ಯ ಘಟನೆಯಾಧಾರಿತ ಚಿತ್ರ. ಅದು ಯಾವ ಕಾಲಘಟ್ಟದ ಸತ್ಯ ಘಟನೆಯಾಧಾರಿತ ಚಿತ್ರ ಎಂದು ಅವರು ಹೇಳದಿದ್ದರೂ ಪ್ರೇಕ್ಷರಿಗೆ ಅರ್ಥವಾಗುವಂತೆ ಸಿನಿಮ್ಯಾಟಿಕ್‌ ಆಗಿ, ಸರಳವಾಗಿ ಚಿತ್ರ ಕಟ್ಟಿದ್ದಾರೆ. ಯಾವುದೋ ಕಾಲಘಟ್ಟದ ಕಥೆ ಅಂತ ಹೇಳಲು ಹೊರಟಾಗ ಚಿತ್ರವನ್ನು ಒಂದಲ್ಲಾ ಒಂದು ರೀತಿಯಲ್ಲಿ ಡ್ರಮಟೈಸ್‌ ಮಾಡಿರುತ್ತಾರೆ. ಪಾತ್ರಗಳು ಅಥವಾ ಆ ವಾತಾವರಣ ಸೃಷ್ಟಿಸುವಂತ ಕಲೆಗಾರಿಕೆಯಲ್ಲಿ ಎಡವಿ, ಡಾಕ್ಯುಮೆಂಟರಿಯನ್ನೂ ಸಿನಿಮಾ ರೀತಿಯಲ್ಲಿ ತಯಾರಿಸುವಂತ ಈ ಕಾಲಘಟ್ಟದಲ್ಲಿ, ಡಾಕ್ಯುಮೆಂಟರಿ ಎನಿಸುವಂತೆ ಸಿನಿಮಾ ಮಾಡಿರುತ್ತಾರೆ. ಅಥವಾ ಸತ್ಯ ಘಟನೆಯಾಧಾರಿತ ಚಿತ್ರ ಎಂದು ಯಾವುದೋ ಒಂದು ದೃಶ್ಯದಲ್ಲಿ ಅನುಸರಿಸಿ ಆ ಕತೆಯಲ್ಲಿಲ್ಲದಿದ್ದರೂ ಅದಕ್ಕೊಬ್ಬ ಹೀರೋ, ಮತ್ತೊಬ್ಬನ್ಯಾರೋ ವಿಲ್ಲನ್‌ ಎನ್ನುವಂತಹ ಪಾತ್ರವನ್ನು ಸೃಷ್ಟಿಸಿ ವಿಜೃಂಭಿಸಿರುತ್ತಾರೆ. ಈ ರೀತಿಯ ತೊಡಕು ಈ ಸಿನಿಮಾದಲ್ಲಿ ಕಾಣಿಸುವುದಿಲ್ಲ.

ಈ ಚಿತ್ರ ಸತ್ಯ ಘಟನೆ ಆಧಾರಿತವಲ್ಲ, ಅದು ಸತ್ಯ ಘಟನೆ ಎನ್ನುವಂತೆ ತೆರೆಮೇಲೆ ತಂದಿದ್ದಾರೆ. ವಾತಾವರಣ ಸೃಷ್ಟಿಯ ಹಿನ್ನೆಲೆ ಧ್ವನಿಗಳಲ್ಲೇ ಆ ಕಾಲಘಟ್ಟವನ್ನು ಅರ್ಥೈಸಿಬಿಡುತ್ತಾರೆ. ಉದಾಹರಣೆಗೆ ಮೊದಲ ದೃಶ್ಯದಲ್ಲಿ ಮಾಧ್ಯಮದವರು ಪಾತ್ರವೊಂದರ ಸಂಭಾಷಣೆ ನೆಡೆಸುವಾಗ, ‘ಅಜಿಷಾ.. ಬ್ಯಾಕ್‌ ಫೋಕಸ್‌ ಓಕೆ ಅಲ್ಲ, ಆಮೇಲ್‌ ಫೋಕಸ್‌ ಪ್ರಾಬ್ಲಮ್‌ ಆಗ್ಬಾರ್ದೂ’ ಅಂತ ಹೇಳುತ್ತಿದ್ದಂತೆ, ಹಿಂದೊಮ್ಮೆ ಮಾದ್ಯಮಗಳಲ್ಲಿ ಮುಂಚೂಣಿಯಲ್ಲಿದ್ದ ಕ್ಯಾಮೆರಾ ಮತ್ತು ಬ್ಯಾಕ್‌ ಫೋಕಸ್‌ ಮತ್ತು ಬ್ಲಾಕ್‌ ಬ್ಯಾಲೆನ್ಸನ್ನು ತಂತ್ರಜ್ಞರಿಗೆ ನೆನಪಿಸುತ್ತದೆ. ಮತ್ತೊಂದು ದೃಶ್ಯದಲ್ಲಿ ರೇಡಿಯೋದಲ್ಲಿ ಸ್ಥಳೀಯ ಪ್ರಸಾರ ಕೇಂದ್ರದ ವಾರ್ತೆ ಪ್ರಸಾರವಾಗುತ್ತಿರುವಾಗ, ‘ನಾಳೆ ಪ್ರಧಾನ ಮಂತ್ರಿ ದೇವೆಗೌಡರು ಕೇರಳಕ್ಕೆ ಬೇಟಿ ನೀಡಲಿದ್ದಾರೆ’ ಎನ್ನುವುದು ಕೇಳಿಸುತ್ತದೆ. ಅಂದರೆ ಅದೂ ನಮಗೆ 1996 ಅಂತ ಅರ್ಥವಾಗಿ ಬಿಡುತ್ತದೆ. ಆ ವರ್ಷದಲ್ಲಿ ನಡೆದ ಘಟನೆಯೊಂದನ್ನು ಬಿಗಿ ನಿರೂಪಣೆ, ಉತ್ತಮ ಸಂಭಾಷಣೆಯುಳ್ಳ ರಿಯಲಿಸ್ಟಿಕ್‌ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿಸುವುದರಲ್ಲಿ ನಿರ್ದೇಶಕರಾದ ಕಮಲ್ ಕೆ..ಎಮ್. ಯಶಸ್ವಿಯಾಗಿದ್ದಾರೆ ಎನ್ನಬಹುದು.

ಆದಿವಾಸಿ ಜನರ ಬದುಕಿನ ಸ್ಥಿತಿಗತಿ ಕುರಿತು ಅರಿಯದೆ ರಾಜಕಾರಣಿಗಳು ದುರುದ್ದೇಶದಿಂದ ಹೊಸ ಕಾನೂನು ರೂಪಿಸಿ, ಆದಿವಾಸಿಗಳ ಭೂಕಾಯ್ದೆಯನ್ನು ಜಾರಿಗೊಳಿಸಿದ ಹಿನ್ನಲೆಯಲ್ಲಾದ ಸಾವು ನೋವನ್ನು ಕಂಡ, ಅಲ್ಲಿನ ವಸ್ತುಸ್ಥಿತಿ ಬಲ್ಲ ನಾಲ್ವರ ವಿಭಿನ್ನ ಪ್ರತಿಭಟನೆಯೇ ಚಿತ್ರದ ಕಥಾ ಸಾರ. ಕೇರಳ ಸರ್ಕಾರ ಅಂಗೀಕರಿಸಿದ ಆದಿವಾಸಿಗಳ ಭೂ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸಬೇಕು, ಆದಿವಾಸಿಗಳಿಗೆ ಸಂಬಂಧಪಟ್ಟ ಭೂಮಿಯನ್ನು ಅವರಿಗೆ ಹಿಂತಿರುಗಿಸಬೇಕು ಎನ್ನುವ ಅಹವಾಲಿನಲ್ಲಿ ರಾಖೇಶ್‌ ಕನಗಂಗಡ, ಬಾಲು ಕಲ್ಲಾರ್‌, ಅರವಿಂದ್‌ ಮನ್ನೂರ್‌ ಮತ್ತು ನಾರಾಯಣ್‌ ಕುಟ್ಟಿ ಎನ್ನುವ ನಾಲ್ವರು ಅಯ್ಯಕ್ಕಾಲಿ ಪಡದ ಸದಸ್ಯರು ಎಂದು ಹೇಳಿಕೊಂಡು, ಪಾಲಕ್ಕಾಡು ಕಲೆಕ್ಟರ್‌ನನ್ನು ಒತ್ತೆಯಾಳಾಗಿಸಿರಿಸಿಕೊಂಡು ಪ್ರತಿಭಟಿಸುತ್ತಾರೆ, ಆ ಗ್ಯಾಂಗ್ ಬಳಿ ಬಂದೂಕುಗಳು, ಬಾಂಬ್‌ಗಳು ಮತ್ತು ಡೈನಮೈಟ್‌ಗಳು ಇದ್ದವು ಎಂಬ ಮಾಹಿತಿ ಹೊರಬಿದ್ದಿದೆ. ಮುಂದೇನಾಗುತ್ತದೆ ಎನುವ ರೋಚಕಥೆಯನ್ನು ಕೊನೆವರೆಗೂ ಉಳಿಸಿಕೊಂಡು ಪೂರ್ತಿ ನೋಡಿಸಿಕೊಳ್ಳುತ್ತದೆ. ಚಿತ್ರದಲ್ಲಿ ಆದಿವಾಸಿಗಳ ಅಂದಿನ ಸ್ಥಿತಿಗತಿಗಳನ್ನೂ ತೆರೆಯ ಮೇಲೆ ತಂದೂ ಪ್ರೇಕ್ಷಕರಲ್ಲಿ ಕರುಣಾರಸ ಉಕ್ಕಿಸಬಹುದಿತ್ತು ಎನಿಸಬಹುದು, ಆದರೆ ಚಿತ್ರದ ಕೊನೆಯಲ್ಲಿ ಒರಿಜಿನಲ್‌ ಫೂಟೇಜ್‌ ಅನ್ನು ತೆರೆಯಲ್ಲಿ ಭಿತ್ತರಿಸಿ ನಿರ್ದೇಶಕರು ಬುದ್ಧಿವಂತಿಕೆ ಮೆರೆದಿದ್ದಾರೆ.

ದಿಲೀಶ್‌ ಪೋತಾನ್‌, ಕುಂಜುಕೋಬನ್, ವಿನಾಯಕನ್‌, ಜೊಜು ಜಾರ್ಜ್‌, ಪ್ರಕಾಶ್‌ ರಾಜ್‌, ಟಿ.ಜಿ.ರವಿ, ಉನ್ನಿ ಮಾಯಾಪ್ರಸಾದ್‌ ಸೇರಿದಂತೆ ಉತ್ತಮ ಕಲಾವಿದರೆನಿಸಿ ಕೊಂಡಿರುವ ಹಲವರು ನಟಿಸಿದ್ದಾರೆ. ಎಲ್ಲರ ಅಭಿನಯವೂ ಉತ್ತಮವಾಗಿದೆ. ಕಮಲ್‌ ಕೆ.ಎಮ್‌. ಬರವಣಿಗೆ ಮತ್ತು ನಿರ್ದೇಶನದಲ್ಲಿ ಇಂತಹದೊಂದು ಅದ್ಬುತ ಪ್ರಯತ್ನ ಮಾಡಿದ್ದಾರೆ ಎಂದು ನೆನಪಿನಲ್ಲುಳಿಯುವುದಲ್ಲದೆ, ಅವರ ಮುಂದಿನ ಚಿತ್ರಗಳಿಗಾಗಿ ಕಾಯುವಂತೆ ಮಾಡುತ್ತದೆ. ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here