ಮನುಷ್ಯ- ಮನುಷ್ಯರ ನಡುವಿನ ಜಾತಿ, ಧರ್ಮ, ಮೇಲು, ಕೀಳೆಂಬ ಅಸಮಾನತೆಯನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋದಾಗ, ಅಲ್ಲಿ ಮಾನವೀಯತೆ ಮೇಲುಗೈ ಸಾಧಿಸುವುದಲ್ಲದೆ ‘ಯಾರೂ ಅಮುಖ್ಯರಲ್ಲ’ ಎಂಬುದನ್ನು ಸಿನಿಮಾ ತೋರಿಸಿಕೊಟ್ಟಿದೆ. ‘2018’ SonyLivನಲ್ಲಿ ಸ್ಟ್ರೀಮ್ ಆಗುತ್ತಿದೆ.
2018, ಕೇರಳಿಗರು ಮರೆಯಲಾಗದ ವರ್ಷ. ದೇವರ ಸ್ವಂತ ನಾಡಿನಲ್ಲಿ ಎಲ್ಲ ರಾಜ್ಯಗಳಿಗಿಂತ ಬೇಗನೆ ಮುಂಗಾರು ಬಂದು ಬಿಡುತ್ತದೆ. ಆದರೆ 2018ರ ಆಗಸ್ಟ್ ತಿಂಗಳ ಮಳೆ ಯಾವತ್ತಿನಂತೆ ಆಹ್ಲಾದಕರ ಆಗಿರಲಿಲ್ಲ. ಎಡೆಬಿಡದೆ ಧೋ ಎಂದು ಸುರಿಯುವ ಮಳೆ ಇನ್ನೂ ಯಾಕೆ ನಿಂತೇ ಇಲ್ಲ ಎಂದು ಇಲ್ಲಿನ ಜತ ಯೋಚಿಸುತ್ತಿರುವಾಗಲೇ ಪ್ರವಾಹ ಎಂಬ ಆ ದುರಂತ ಕಣ್ಣೆದುರು ಬಂದು ನಿಂತಿತ್ತು, ಅನೇಕರು ಪ್ರಾಣ ಕಳೆದುಕೊಂಡರು. ಆ ದುರಂತದ ಆಘಾತದಿಂದ ಅನೇಕರು ಇನ್ನೂ ಚೇತರಿಸಿಕೊಂಡಿಲ್ಲ. ನಿರ್ದೇಶಕ ಜೂಡ್ ಆಂಟನಿ ಜೋಸೆಫ್ ‘2018’ ಸಿನಿಮಾ ಮೂಲಕ ಆ ನೋವಿನ ನೆನಪನ್ನು ತೆರೆಯ ಮೇಲೆ ತಂದಿದ್ದಾರೆ. ಒಂದು ತಿಂಗಳ ಹಿಂದೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಪ್ರಸ್ತುತ ಸೋನಿ ಲೈವ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಯಾವುದೇ ವೈಭವೀಕರಣಗಳಿಲ್ಲದೆ, 2018ರ ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಎಲ್ಲರೂ ಅನುಭವಿಸಿದ ನೋವುಗಳನ್ನು ಜೂಡ್, ‘ಮಾನವೀಯತೆ’ಯೇ ದೊಡ್ಡದು ಎಂಬ ಸಂದೇಶದೊಂದಿಗೆ ನಮ್ಮ ಮುಂದೆ ತಂದಿದ್ದಾರೆ. ಕೇರಳ, ಈ ಮಹಾ ಪ್ರವಾಹವನ್ನು ಹೇಗೆ ಎದುರಿಸಿತು ಎಂಬುದೇ ಚಿತ್ರದ ಕಥಾವಸ್ತು. ನಿಧಾನವಾಗಿ ಶುರುವಾಗಿ ಕ್ರಮೇಣ ಲಯ ಕಂಡುಕೊಳ್ಳುವ ಸಿನಿಮಾ ಅಲ್ಲ ‘2018’. ಪ್ರತಿಯೊಂದು ಪಾತ್ರವೂ ಇಲ್ಲಿ ಮುಖ್ಯವಾಗಿದೆ. ಅಷ್ಟೇ ಅಲ್ಲದೆ ಪ್ರೇಕ್ಷಕರನ್ನು ಪಾತ್ರಗಳೊಂದಿಗೆ ಕರೆದೊಯ್ಯುತ್ತಾ ಮತ್ತೇನಾಗುತ್ತದೆ ಎಂಬ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ. ಐದು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಗಿರುವ ಕಾರಣ ಕೇರಳದಲ್ಲಿನ ಪ್ರವಾಹದ ಹೊತ್ತಲ್ಲಿ ಕಂಡುಬಂದ ಮಾನವೀಯ ಮುಖಗಳು, ಜನರ ಪ್ರಯತ್ನಗಳನ್ನು ನಾವು ಸುದ್ದಿಯಲ್ಲಿ ಓದಿದ್ದೇವೆ, ನೋಡಿರುತ್ತೇವೆ. ಹೀಗಿರುವಾಗ ಅಂಥ ಘಟನೆಗಳನ್ನು ತೆರೆ ಮೇಲೆ ನೋಡುವಾಗ ನಮಗರಿವಿಲ್ಲದಂತೆ ಕಣ್ಗಳು ಹನಿಗೂಡುತ್ತದೆ.
‘ಎಲ್ಲರೂ ಹೀರೋಗಳೇ’ ಎಂಬುದು ಚಿತ್ರದ ಟ್ಯಾಗ್ ಲೈನ್. ಹೀಗಾಗಿ ಇಂಥವರೇ ಚಿತ್ರದ ನಾಯಕ ಎಂದು ಹೇಳುವಂತಿಲ್ಲ. ಮಿಲಿಟರಿ ಸೇರಲು ಹೋಗಿ ಹೆದರಿಕೆಯಿಂದ ತಪ್ಪಿಸಿಕೊಂಡು ಓಡಿ ಊರಿಗೆ ಬಂದ ಯುವಕ ಅನೂಪ್ (ಟೊವಿನೊ ಥಾಮಸ್) ಅಂಧನಾಗಿರುವ ದಾಸನ್‌ನ ಪುಟ್ಟ ಅಂಗಡಿಯಲ್ಲಿ ಸಹಾಯಕ. ಅಪ್ಪ ಮತ್ತು ಸಹೋದರ ಮೀನುಗಾರರಾಗಿದ್ದರೂ, ಕುಲಕಸುಬಿಗೆ ನಾನು ಒಲ್ಲೆ ಎಂದು ಮಾಡೆಲ್ ಆಗುವ ಗುರಿಯೊಂದಿಗೆ ಓಡುತ್ತಿರುವ ನಿಕ್ಸನ್. ವಿದೇಶದಲ್ಲಿ ಕೆಲಸ ಮಾಡುತ್ತಿರುವ ರಮೇಶ್ ತನ್ನ ಪತ್ನಿಯೊಂದಿಗಿನ ಮುನಿಸನ್ನು ಸರಿ ಮಾಡಲು ಹೆಣಗಾಡುತ್ತಿರುವ ಯುವಕ, ಕಲೆಕ್ಟರೇಟ್‌ನಲ್ಲಿ ಬಿಡುವಿಲ್ಲದ ಕೆಲಸದ ನಡುವೆ ಹೆಂಡತಿ ಮತ್ತು ಮಗಳಿಗಾಗಿ ಸಮಯ ಕೊಡಲಾಗದೆ ಒದ್ದಾಡುವ ಶಾಜಿ. ಹೀಗೆ ಒಂದೊಂದು ಕುಟುಂಬಗಳು ಬದುಕಿನ ಹೋರಾಟದಲ್ಲಿ ಬ್ಯುಸಿಯಾಗಿರುವಾಗ ಅಣೆಕಟ್ಟೆಯಿಂದ ಬಿಡುವ ನೀರು ಈ ಜನರ ಬದುಕಿಗೇ ಬಂದು ನುಗ್ಗುತ್ತದೆ.
ಯಾವುದೇ ಮುನ್ಸೂಚನೆಯಿಲ್ಲದೆ ರಾತ್ರಿಯಿಡೀ ಬಿಡುಗಡೆಯಾದ ನೀರು ಹಲವರ ಜೀವ ಮತ್ತು ಕನಸುಗಳನ್ನು ಕೊಚ್ಚಿಕೊಂಡು ಹೋಗುತ್ತದೆ. ಮುಳುಗುತ್ತಿರುವ ಜನರನ್ನು ರಕ್ಷಿಸಲು ಸರ್ಕಾರ ಮತ್ತು ತಂತ್ರಜ್ಞಾನಕ್ಕೆ ಸಾಧ್ಯವಾಗದಿದ್ದಾಗ, ಸಮುದ್ರದ ಹೃದಯ ಬಡಿತ ಅರಿಯುವ ಮೀನುಗಾರರು ರಕ್ಷಣಾ ಕಾರ್ಯಾಚರಣೆಯ ಚುಕ್ಕಾಣಿ ಹಿಡಿಯಲು ಮುಂದಾಗುತ್ತಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಪ್ರವಾಹದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಿಸುತ್ತಾರೆ. ಅನೂಪ್ ಪಾತ್ರದಲ್ಲಿ ಟೊವಿನೋ ಥಾಮಸ್ ಅಭಿನಯ ಮೆಚ್ಚುವಂಥದ್ದು. ವಿಕಲಚೇತನ ಬಾಲಕನ ಅಪ್ಪನಾಗಿ ಸುಧೀಶ್ ಪ್ರೇಕ್ಷಕರನ್ನು ಅಳಿಸಿದರೆ, ಶಾಜಿ (ಕುಂಚಾಕೊ ಬೋಬನ್), ವಿನ್‌ಸ್ಟನ್ (ನರೇನ್), ನಿಕ್ಸನ್ (ಆಸಿಫ್ ಅಲಿ), ಮಾತ್ತಚ್ಚನ್(ಲಾಲ್), ದಾಸ್ (ಇಂದ್ರನ್ಸ್), ಪತ್ರಕರ್ತೆ ನೂರಾ (ಅಪರ್ಣಾ ಬಾಲಮುರಳಿ ) ಪಾತ್ರಗಳು ಪ್ರವಾಹವನ್ನು ಎದುರಿಸಿದ ಕೇರಳದ ಜನರ ಪ್ರತಿನಿಧಿಗಳಾಗಿ ತಮ್ಮ ಅಭಿನಯಕ್ಕೆ ಚಪ್ಪಾಳೆ ಗಿಟ್ಟಿಸುತ್ತಾರೆ.
ದೇಶ ಕಂಡ ಬಹುದೊಡ್ಡ ದುರಂತವೊಂದು ಮಾನವೀಯತೆ, ಏಕತೆಯ ಮಹತ್ವವನ್ನು ಸಾರಿತ್ತು. ನಿರ್ದೇಶಕ ಜೂಡ್ ಆಂಟನಿ ಜೋಸೆಫ್ ತಂಡ ಈ ವಿಷಯವನ್ನು ಕೈಗೆತ್ತಿಕೊಂಡು ನೋವಿನ ನೆನಪುಗಳನ್ನು ಮತ್ತೊಮ್ಮೆ ಕೆದಕಿ, ‘ನೋಡಿ ನಾವು ಈ ದುರಂತವನ್ನು ಹೀಗೆ ಎದುರಿಸಿದ್ದೆವು’ ಎಂದು ಪ್ರತಿಯೊಬ್ಬ ಕೇರಳಿಗನೂ ಜಗತ್ತಿಗೆ ತೋರಿಸಿಕೊಟ್ಟಂತಿದೆ ಈ ಸಿನಿಮಾ. ಪ್ರವಾಹ ಮತ್ತು ನೀರೊಳಗಿನ ದೃಶ್ಯಗಳು, ಜನರ ನೋವು, ಕಿರುಚಾಟ, ಪ್ರಾಣ ಭಯ ಎಲ್ಲವನ್ನೂ ತುಂಬಾ ಸೂಕ್ಷ್ಮವಾಗಿ ತೆರೆಯ ಮೇಲೆ ತರಲಾಗಿದೆ. ಅಖಿಲ್ ಜಾರ್ಜ್ ಅವರ ಛಾಯಾಗ್ರಹಣ ಪ್ರವಾಹದ ಭೀಕರತೆಯನ್ನು ಕಣ್ಣ ಮುಂದೆ ತಂದಿಡುತ್ತದೆ. ಇಡೀ ರಾಜ್ಯ ನೀರಲ್ಲಿ ಮುಳುಗಿರುವಾಗ ಮೀನುಗಾರರು ಕಡಲಿನ ನೀರು ನೋಡಿದ್ದೇವೆ, ನೆಲದ ಮೇಲಿನ ನೀರು ಅಷ್ಟಿಲ್ಲವಲ್ಲ ಎಂದು ದೋಣಿ ಮೂಲಕ ಜನರನ್ನು ರಕ್ಷಿಸುವ ದೃಶ್ಯ, ಏರ್ ಲಿಫ್ಟ್ ಮಾಡುವ ಹೊತ್ತಿನ ನಡುಕ, ಪರಿಹಾರ ಕ್ಯಾಂಪ್‌ನ ನೋವು, ನಲಿವುಗಳು ನಮ್ಮ ಮನಸ್ಸಿಗೆ ನಾಟುತ್ತವೆ. ಮನುಷ್ಯ- ಮನುಷ್ಯರ ನಡುವಿನ ಜಾತಿ, ಧರ್ಮ, ಮೇಲು, ಕೀಳೆಂಬ ಅಸಮಾನತೆಯನ್ನು ಪ್ರವಾಹದ ನೀರು ಕೊಚ್ಚಿಕೊಂಡು ಹೋದಾಗ, ಅಲ್ಲಿ ಮಾನವೀಯತೆ ಮೇಲುಗೈ ಸಾಧಿಸುವುದಲ್ಲದೆ ಯಾರೂ ಅಮುಖ್ಯರಲ್ಲ ಎಂಬುದನ್ನು ‘2018’ ಸಿನಿಮಾ ತೋರಿಸಿಕೊಟ್ಟಿದೆ.