ನೆಟ್‌ಫ್ಲಿಕ್ಸ್‌ನ ಹೊಸ ವೆಬ್ ಸೀರೀಸ್ ಸ್ಕ್ವಿಡ್ ಗೇಮ್ ಈಗ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಈಗ ಬಾಲಿವುಡ್ ಸಿನಿಮಾಪ್ರಿಯರು ಈ ವೆಬ್ ಸೀರೀಸ್‌ನ ಇನ್ನೊಂದು ಆಯಾಮದ ಬಗ್ಗೆ ಮಾತನಾಡುತ್ತಿರೋದು ವಿಶೇಷ.

ನೆಟ್‌ಫ್ಲಿಕ್ಸ್‌ನ ಜನಪ್ರಿಯ ಸ್ಕ್ವಿಡ್‌ಗೇಮ್ ವೆಬ್ ಸೀರೀಸ್ ಅನ್ನು ಈಗ ಬಾಲಿವುಡ್ ಸಿನಿಮಾಪ್ರಿಯರು ಹಿಂದಿಯಲ್ಲಿ ದಶಕದ ಹಿಂದೆ ಬಿಡುಗಡೆ ಆಗಿದ್ದ ಚಿತ್ರವೊಂದಕ್ಕೆ ಹೋಲಿಸುತ್ತಿದ್ದಾರೆ. ಬಾಲಿವುಡ್‌ನ ‘ಲಕ್‌’ ಚಿತ್ರಕ್ಕೂ ಈ ಸೀರೀಸ್‌ಗೂ ಸಾಕಷ್ಟು ಸಾಮ್ಯತೆ ಇದೆ ಅನ್ನೋದು ಅವರ ಅನಿಸಿಕೆ. ಸ್ಕ್ವಿಡ್‌ಗೇಮ್ ಸೀರೀಸ್‌ಗೆ ‘ಲಕ್’ ಚಿತ್ರದೊಂದಿಗೆ ಇರುವ ಹಲವು ಸಾಮ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಅನ್ನೋದು ಇವರ ವಾದ. 2009ರಲ್ಲಿ ಬಾಲಿವುಡ್ ಇದೇ ಥೀಮ್ ಅನ್ನು ಇವರಿಗೂ ಮೊದಲೇ ಸಿನಿಮಾ ಮಾಡಿತ್ತು ಎಂದು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ.

2009ರಲ್ಲಿ ಬಿಡುಗಡೆಯಾದ ‘ಲಕ್’ ಚಲನಚಿತ್ರದ ಕಥಾವಸ್ತು ಇದೇ ಧಾಟಿಯನ್ನು ಅನುಸರಿಸುತ್ತದೆ ಎಂದು ಹಲವರು ಬೆರಳು ಮಾಡಿ ತೋರಿಸಿದ್ದಾರೆ. ಎರಡೂ ಕಥೆಗಳು ಹಣದ ಅವಶ್ಯಕತೆ ಇರುವ ಪಾತ್ರಗಳ ಸುತ್ತ ಸುತ್ತುತ್ತವೆ. ಅಪಾಯಕಾರಿ ಆಟಗಳನ್ನು ಆಡುತ್ತವೆ. ಪರಸ್ಪರ ಸ್ಪರ್ಧಿಸುತ್ತವೆ ಮತ್ತು ಹತಾಶೆಗೊಳಗಾದ ಮಿಲಿಯನೇರ್ ನೀಡುವ ಹಣವನ್ನು ಗೆಲ್ಲಲು ಅವರು ಯಾವ ಮಟ್ಟಕ್ಕೆ ಹೋಗುತ್ತಾರೆ ಅನ್ನೋದೇ ಎರಡೂ ಕಡೆ ಕಾಣಸಿಗುತ್ತದೆ ಎಂಬ ಅಭಿಪ್ರಾಯ ಅವರದ್ದು. ಬಹುಶಃ ಎರಡು ನಿರ್ಮಾಣಗಳ ನಡುವಿನ ವ್ಯತ್ಯಾಸ ಅಂದ್ರೆ ಅದು ಬಜೆಟ್ ಮಾತ್ರ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ವಿಷಯ ಒಂದೇ ಆದರೂ ಸ್ಕ್ವಿಡ್‌ಗೇಮ್ ಸೀರೀಸ್‌ನ ಸ್ಕ್ರಿಪ್ಟ್ ಬರವಣಿಗೆ ಉತ್ತಮವಾಗಿದೆ ಮತ್ತು ಅದೃಷ್ಟಕ್ಕೆ ಅವರಿಗೆ ಉತ್ತಮ ಬಜೆಟ್ ಸಿಕ್ಕಿದೆ ಎಂಬುದು ಸಿನಿಪ್ರೇಮಿಗಳ ಆನ್ ಲೈನ್ ಅನಿಸಿಕೆ. ಅಂದಹಾಗೆ, ‘ಲಕ್’ ಚಲನಚಿತ್ರಕ್ಕೆ ಹೋಲಿಸಿದರೆ ಸ್ಕ್ವಿಡ್ ಗೇಮ್ ಸರಣಿ ಹೆಚ್ಚು ಗಮನ ಸೆಳೆದಿದೆ. ‘ಲಕ್’ ಚಿತ್ರಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಲಕ್ ಕೈ ಹಿಡಿಯಲಿಲ್ಲ. ‘ಲಕ್’ ಚಿತ್ರದಲ್ಲಿ ಸಂಜಯ್ ದತ್, ಇಮ್ರಾನ್ ಖಾನ್, ಡ್ಯಾನಿ, ಮಿಥುನ್ ಚಕ್ರವರ್ತಿ ಮುಂತಾದವರು ಅಭಿನಯಿಸಿದ್ದರು.

LEAVE A REPLY

Connect with

Please enter your comment!
Please enter your name here