‘ಡೇರ್‌ಡೆವಿಲ್ ಮುಸ್ತಾಫಾ’ ಕನ್ನಡ ಸಿನಿಮಾ ತಂಡದ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಅನಿಮೇಷನ್ ವೀಡಿಯೋ ಬಿಡುಗಡೆಯಾಗಿದೆ. ಡಾ.ರಾಜ್‌ ಅಭಿಮಾನಿಗಳಿಗೆ ಇದು ದಸರಾ ಉಡುಗೊರೆ.

ಈ ದಸರಾ ಸಂದರ್ಭದಲ್ಲಿ ಕನ್ನಡದ ಮೇರು ತಾರೆ ಡಾ.ರಾಜಕುಮಾರ್‌ ಅಭಿಮಾನಿಗಳಿಗಾಗಿ ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರತಂಡ ಒಂದೊಳ್ಳೆಯ ಉಡುಗೊರೆ ತಂದಿದೆ. ಅನಿಮೇಷನ್‌ನಲ್ಲಿ ರಾಜ್‌ರನ್ನು ಚಿತ್ರಿಸಿರುವ ವಿಶಿಷ್ಟ ಪ್ರಯೋಗವಿದು. ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಇಂದು ಪಿಆರ್‌ಕೆ ಆಡಿಯೋದಲ್ಲಿ ಬಿಡುಗಡೆಯಾಗಿದೆ. ಆರಂಭದಿಂದಲೂ ನಿರ್ದೇಶಕ ಶಶಾಂಕ್ ಸೋಗಾಲ್‌ ಮತ್ತು ಚಿತ್ರತಂಡ ಭಿನ್ನ ಆಲೋಚನೆ, ಪ್ರೊಮೋಷನ್‌ನೊಂದಿಗೆ ಗಮನ ಸೆಳೆದಿತ್ತು. ಈ ಪ್ರೊಮೋಷನ್‌ನ ಪ್ರಮುಖ ಅಂಶ ‘ನಿನ್ನಂಥೋರ್‌ ಯಾರೂ ಇಲ್ವಲ್ಲೋ’ ಅನಿಮೇಷನ್‌ ವೀಡಿಯೋ. ಮೈಸೂರು ಅರಸ ರಣಧೀರ ಕಂಠೀರವರ ಸಾಹಸದ ಕತೆಯಿದು. ರಾಜ್‌ರನ್ನು ಅರಸರ ಪಾತ್ರದಲ್ಲಿ ಅನಾವರಣಗೊಳಿಸಿರುವ ಈ ವೀಡಿಯೋ ಕನ್ನಡ ಸಿನಿಮಾದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ ಎಂದೇ ಹೇಳಬಹುದು.

‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ’ ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. ಸುಮಾರು ನಾಲ್ಕು ದಶಕಗಳ ಹಿಂದೆ ಬೆಂಗಳೂರು ಸಮುದಾಯ ರಂಗತಂಡ ಅಭಿನಯಿಸಿದ, ಪ್ರಸನ್ನ ನಿರ್ದೇಶಿಸಿದ, ಡಾ ಕೆ.ವಿ.ನಾರಾಯಣ ರಚಿಸಿದ ‘ಹುತ್ತವ ಬಡಿದರೆ’ ನಾಟಕದ ಗೀತೆ. ಡಾ.ಸಿ.ವೀರಣ್ಣ ರಚಿಸಿದ ಈ ಹಾಡಿಗೆ ಹೆಸರಾಂತ ರಂಗಕರ್ಮಿ ಬಿ.ವಿ.ಕಾರಂತರು ಸಂಗೀತ ಸಂಯೋಜಿಸಿದ್ದರು. ಈ ಪ್ರಸಿದ್ಧ ರಂಗಗೀತೆಯನ್ನು ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರದಲ್ಲಿ ಕಾಲೇಜು ಹುಡುಗರು ವಾರ್ಷಿಕೋತ್ಸವದಲ್ಲಿ ಹಾಡಿ ಕುಣಿಯುವಂತೆ ಚಿತ್ರಿಸಲಾಗಿದೆ. ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆ ಹೇಳುವ ಹಾಡಿದು. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಚಿತ್ರತಂಡಕ್ಕೆ ಹೊಳೆದದ್ದು ಡಾ.ರಾಜಕುಮಾರ್ ಅನಿಮೇಷನ್. ಈ ಅನಿಮೇಷನ್‌ ಕಾರ್ಯರೂಪಕ್ಕೆ ತರಲು ಚಿತ್ರತಂಡ ರಾಜ್‌ ಚಿತ್ರಗಳ ಟೀಷರ್ಟ್‌ಗಳನ್ನು ಮಾರಾಟ ಮಾಡಿದೆ. ಸುಮಾರು 800ಕ್ಕೂ ಹೆಚ್ಚು ಕಲಾಭಿಮಾನಿಗಳು ಟೀ ಷರ್ಟ್‌ ಕೊಂಡು ಚಿತ್ರತಂಡದ ಈ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಕೈಜೋಡಿಸಿದ್ದರು. ಚಿತ್ರತಂಡದ ಈ ಯೋಜನೆಯ ಸಾಕಾರವೇ ಈ ಅನಿಮೇಷನ್ ವೀಡಿಯೋ.

ಪಿಆರ್‌ಕೆ ಆಡಿಯೋದಲ್ಲಿ ಇಂದು ಸಂಜೆ ಅನಿಮೇಷನ್‌ ವೀಡಿಯೋ ಬಿಡುಗಡೆಯಾಗಿದೆ. ಡಾ.ಸಿ.ವೀರಣ್ಣ ಅವರ ಗೀತೆಗೆ ಮೂಲ ಸಂಗೀತ ಬಿ.ವಿ.ಕಾರಂತರದ್ದು. ಅನಿಮೇಷನ್‌ ವೀಡಿಯೋಗಾಗಿ ನವನೀತ್ ಶ್ಯಾಂ ಸಂಗೀತ ಸಂಯೋಜಿಸಿದ್ದಾರೆ. ವಾಸುಕಿ ವೈಭವ್ ಹಾಡಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ಶಶಾಂಕ್ ಸೋಗಾಲ್ ಅವರದ್ದು. ಅನಿಮೇಷನ್‌ ಪ್ಲಾಂಗಲ್‌ ಸ್ಟುಡಿಯೋ. ಇನ್ನು ‘ಡೇರ್‌ಡೆವಿಲ್ ಮುಸ್ತಾಫಾ’ ಚಿತ್ರದ ವಿಚಾರಕ್ಕೆ ಬರುವುದಾದರೆ ಇದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿದ ಪ್ರಯೋಗ. ತೇಜಸ್ವಿ ಅವರ ಅಭಿಮಾನಿ ಓದುಗರೇ ‘ಸಿನಿಮಾಮರ’ ಬ್ಯಾನರ್‌ನಡಿ ಸಿನಿಮಾ ನಿರ್ಮಿಸುತ್ತಿದ್ದಾರೆ ಎನ್ನುವುದು ವಿಶೇಷ. ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ ಪ್ರಮುಖ ಪಾತ್ರಗಳಲ್ಲಿದ್ದು, ಕನ್ನಡ ಚಿತ್ರರಂಗದ ಹತ್ತಾರು ಕಲಾವಿದರು ಚಿತ್ರತಂಡದಲ್ಲಿದ್ದಾರೆ. ನವ್‌ನೀತ್‌ ಶ್ಯಾಂ ಸಂಗೀತ ಸಂಯೋಜಿಸಿದ್ದು, ಶಶಾಂಕ್ ಸೋಗಾಲ್‌ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವಿನೂತನ ಐಡಿಯಾ, ಕಾನ್ಸೆಪ್ಟ್‌ಗಳ ಮೂಲಕ ‘ಡೇರ್‌ಡೆವಿಲ್ ಮುಸ್ತಾಫಾ’ ತಂಡ ಹೆಸರು ಮಾಡುತ್ತಿದ್ದು, ಅನಿಮೇಷನ್ ವೀಡಿಯೋ ಮೂಲಕ ಸಿನಿಪ್ರೇಮಿಗಳಿಗೆ ಮತ್ತಷ್ಟು ಆಪ್ತವಾಗಿದೆ.

LEAVE A REPLY

Connect with

Please enter your comment!
Please enter your name here