ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ಮನೆಯ ಸ್ಪರ್ಧಿಗಳು ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.

ವಿನಯ್‌ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂದು ವೀಕ್ಷಕರು ಊಹಿಸಿದ್ದರು. ಹಾಗೆಯೇ ಅವರಿಗೆ ಸಂಕಷ್ಟ ಎದುರಾಗಿದೆ. ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗಳಿಗೆಯಲ್ಲಿ ರಕ್ಷಕ್, ತುಕಾಲಿ, ನಮ್ರತಾ, ಸ್ನೇಹಿತ್‌, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಸ್ನೇಹಿತ್ ಅವರಂತೂ, ‘ಇಡೀ ಮನೆಯ ವಾತಾವರಣವೇ ಹಾಳಾಗಿದೆ’ ಎಂದು ಹೇಳಿದ್ದಾರೆ.

ಆದರೆ ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇಡೀ ಮನೆ ತಮ್ಮ ವಿರುದ್ಧ ಇರೋ ಹಾಗಿದೆ ಎಂದೂ ಹೇಳಿದ್ದಾರೆ. ಅಂತಿಮವಾಗಿ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ. ವಿನಯ್‌ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ. ಕಾರ್ತಿಕ್ ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ. ಕಾರ್ತಿಕ್ ಮೌನದ ಹಿಂದಿರುವ ಕೋಪ, ಸಂಗೀತಾ ನೋವಿನ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಸಂಗೀತಾ ತಂಡಕ್ಕೆ ಗೆಲುವಿನ ಸಮಾಧಾನ! | ಈ ವಾರದ ಟಾಸ್ಕ್‌ನಲ್ಲಿ ಸೋತು ಒಳಗೊಳಗೇ ಕುದಿಯುತ್ತಿರುವ ಸಂಗೀತಾ ತಂಡ, Fun Friday ಟಾಸ್ಕ್‌ನಲ್ಲಿ ಗೆದ್ದು ಸಮಾಧಾನದ ನಿಟ್ಟುಸಿರುಬಿಟ್ಟಿದೆ. ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಆಯ್ಕೆಯಾಗಿದ್ದಾರೆ. ಅದು ಸಂಗೀತಾ ಗ್ಯಾಂಗ್‌ನ ತಳಮಳಕ್ಕೂ ಕಾರಣವಾಗಿದೆ. ಟಾಸ್ಕ್‌ನ ನಂತರ ಮನೆಯವರೆಲ್ಲರ ಬಹುಮತದ ಅಭಿಪ್ರಾಯದ ಮೇರೆಗೆ ವಿನಯ್‌ ‘ಅತ್ಯುತ್ತಮ ಪ್ರದರ್ಶನ’ದ ಪದಕ ಕೊರಳಿಗೇರಿಸಿಕೊಂಡರೆ, ಸಂಗೀತ ಜೈಲಿನುಡುಗೆ ತೊಟ್ಟು ಬಂಧಿಯಾಗಿದ್ದಾರೆ.

ಜಿಯೊ ಸಿನಿಮಾ, ಮನೆಯ ಸ್ಪರ್ಧಿಗಳಿಗೆ ‘ಏಳೋಂದ್ಲ ಏಳು’ ಟಾಸ್ಕ್‌ ನೀಡಿತ್ತು. ಅದರ ನಿರ್ವಹಣೆಯ ಜವಾಬ್ದಾರಿಯನ್ನು ಭಾಗ್ಯಶ್ರೀ ಅವರಿಗೆ ನೀಡಿತ್ತು. ತುಕಾಲಿ ಸಂತೋಷ್ ಅವರು ಸಂಗೀತಾ ಅವರ ತಂಡದಿಂದ ಆಡಿದರು. ‘ಏಳೊಂದ್ಲ ಏಳು’ ಇದು ಸಂಖ್ಯೆಗಳ ಆಟ. ಸಂಗೀತಾ ತಂಡದವರು ನೀಲಿ ಬಣ್ಣದ ಟೀ ಷರ್ಟ್‌ ಮತ್ತು ವಿನಯ್ ತಂಡದವರು ಕೆಂಪು ಬಣ್ಣದ ಟೀ ಷರ್ಟ್‌ ಧರಿಸಿದ್ದರು. ಅವರ ಟೀ ಷರ್ಟ್‌ ಮೇಲೆ ಒಂದೊಂದು ಅಂಕಿ ಬರೆಯಲಾಗಿತ್ತು. ಭಾಗ್ಯಶ್ರೀ ಒಮ್ಮೆ ಒಂದಿಷ್ಟು ಸಂಖ್ಯೆಗಳನ್ನು ಹೇಳುತ್ತಾರೆ. ತಂಡದ ಸದಸ್ಯರೆಲ್ಲ ತಮ್ಮ ಟೀ ಷರ್ಟ್‌ ಮೇಲಿನ ಅಂಕಿಗಳಿಗೆ ಅನುಗುಣವಾಗಿ ಭಾಗ್ಯಶ್ರೀ ಹೇಳಿದ ಸಂಖ್ಯೆಯಂತೆ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು. ತಂಡದ ಸದಸ್ಯರ ನಡುವಿನ ಹೊಂದಾಣಿಕೆಯನ್ನು ಬಿಂಬಿಸುವ ಈ ಆಟಕ್ಕೆ ಎರಡೂ ತಂಡದವರು ಸಾಕಷ್ಟು ಉತ್ಸಾಹದಿಂದಲೇ ಸಿದ್ಧರಾದರು.

ಒಂದು ಕಡೆಯಲ್ಲಿ ವಿನಯ್, ಸಿರಿ, ನೀತು, ಸ್ನೇಹಿತ್, ಇಶಾನಿ, ರಕ್ಷಕ್, ನಮ್ರತಾ ನಿಂತಿದ್ದರೆ ಮತ್ತೊಂದು ಕಡೆಯಲ್ಲಿ ಸಂಗೀತಾ, ತನಿಷಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್, ಮೈಕಲ್, ಡ್ರೋಣ್ ಪ್ರತಾಪ್‌, ಕಾರ್ತಿಕ್ ನಿಂತಿದ್ದರು. ಭಾಗ್ಯಶ್ರೀ ಹೇಳಿದ ನಂಬರ್‌ಗೆ ಅನುಗುಣವಾಗಿ ತಮ್ಮನ್ನು ತಾವು ಜೋಡಿಸಿಕೊಂಡು ನಿಲ್ಲುವಲ್ಲಿ ಮೊದಲು ಯಶಸ್ವಿಯಾಗಿದ್ದು ಸಂಗೀತಾ ತಂಡ. ಹಾಗಾಗಿ ಸಂಗೀತಾ ತಂಡದವರು ಈ ಆಟದಲ್ಲಿ ಗೆಲುವು ಸಾಧಿಸಿದರು. ಆದರೆ ಅವರ ಗೆಲುವು ಸಂಭ್ರಮವಾಗಿ ಬದಲಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ. ಯಾಕೆಂದರೆ ಇಡೀ ಮನೆಯ ಕ್ಯಾಪ್ಟನ್ ಆಗಿ ವಿನಯ್‌ ಆಯ್ಕೆಯಾಗಿದ್ದರು. ಹಾಗಾಗಿ ಆಗಲೇ ಸೋತುಹೋಗಿದ್ದ ಸಂಗೀತಾ ತಂಡಕ್ಕೆ ತಾತ್ಕಾಲಿಕ ನೆಮ್ಮದಿಯನ್ನಷ್ಟೇ ಈ ಗೆಲುವು ನೀಡಿತು.

LEAVE A REPLY

Connect with

Please enter your comment!
Please enter your name here