ಮಾನವ ಕಳ್ಳ ಸಾಗಾಣಿಕೆ ಮತ್ತು ಬಾಲ ಕಾರ್ಮಿಕರ ಕುರಿತು ಬೆಳಕು ಚೆಲ್ಲುವ ‘ಸೋಲ್ಡ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರೇರಣಾ ಅಗರ್‌ವಾಲ್‌ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಡ್ಯಾನಿಶ್‌ ಸೇಠ್‌, ಶಿವಾನಿ ನಟಿಸಿದ್ದಾರೆ.

ಸ್ಯಾಂಡಲ್‌ವುಡ್‌ ಚಿತ್ರನಿರ್ದೇಶಕಿಯರ ಪಟ್ಟಿಗೆ ಹೊಸ ಸೇರ್ಪಡೆ ಪ್ರೇರಣಾ ಅಗರ್‌ವಾಲ್‌. ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿರುವ ಅವರು ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಸೋಲ್ಡ್‌’ ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದಲ್ಲಿ ಮಾನವ ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕ ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಕತೆಯಿದೆ. ಟ್ರೈಲರ್‌ ಬಿಡುಗಡೆಯಾಗಿದ್ದು, ಸಮಾಜದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಈ ಪಿಡುಗಿನ ಕುರಿತ ಕಹಿ ಸತ್ಯಗಳನ್ನು ನಿರೂಪಿಸಿದಂತಿದೆ ಅಲ್ಲಿನ ಸನ್ನಿವೇಶಗಳು. ಇಲ್ಲಿಯವರೆಗೆ ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಡ್ಯಾನಿಷ್‌ ಸೇಠ್‌ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಗಂಭೀರವಾದ ಪಾತ್ರ ನಿರ್ವಹಿಸಿದ್ದಾರೆ. ಬಾಲಕಿ ಶಿವಾನಿ ಆರ್‌.ಬಲ್ಲೂಕರಾಯ ಚಿತ್ರದ ಪ್ರಮುಖ ಪಾತ್ರಧಾರಿ.

ಚಿತ್ರದ ನಿರ್ಮಾಪಕ ದೀಪಂ ಕೊಹ್ಲಿ ಉತ್ತಮ ಸಿನಿಮಾಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿ. ಫಿಲಂ ಮೇಕಿಂಗ್ ವರ್ಕ್‌ಶಾಪ್‌ ಮುಗಿಸಿ, ಆನಂತರ ನ್ಯೂಯಾರ್ಕ್ ಆಕಾಡೆಮಿಯಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ. ಭಾರತಕ್ಕೆ ಹಿಂದಿರುಗಿದ ನಂತರ ಕೆಲವು ಕಿರುಚಿತ್ರಗಳನ್ನು ನಿರ್ಮಿಸಿ, ಅಭಿನಯಿಸಿದ್ದಾರೆ. ಈಗ ಹಾರ್ನ್ ಓಕೆ ಫಿಲಂ ಸಂಸ್ಥೆ ಸ್ಥಾಪಿಸಿ ಮೊದಲ ಪ್ರಯತ್ನವಾಗಿ ‘ಸೋಲ್ಡ್’ ಚಿತ್ರ ನಿರ್ಮಿಸಿದ್ದಾರೆ. ದೀಪಂ ಕೊಹ್ಲಿ, ಕಾವ್ಯಾ ಶೆಟ್ಟಿ, ಭರತ್ ಜೆ.ಬಿ, ಸಿದ್ಧಾರ್ಥ್ ಮಾಧ್ಯಮಿಕ, ಉಗ್ರಂ ಮಂಜು, ಭವಾನಿ ಪ್ರಕಾಶ್, ಹನುಮಂತೇ ಗೌಡ ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೀತ್ ಸಿಂಗ್ ಸಂಗೀತ ಸಂಯೋಜನೆ, ಸಮೀರ್ ದೇಶಪಾಂಡೆ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here