ಅಕಾಲಿಕವಾಗಿ ಅಗಲಿದ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಅವರ ನೆನಪಿನಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. ಪನ್ನಗ ಭರಣ ಮತ್ತು ಕಮಲೇಶ್ ನಿರ್ಮಿಸಲಿರುವ ಈ ಚಿತ್ರವನ್ನು ವಿಶಾಲ್ ಆತ್ರೇಯ ನಿರ್ದೇಶಿಸಲಿದ್ದು, ಪ್ರಮುಖ ಪಾತ್ರದಲ್ಲಿ ಮೇಘನಾ ನಟಿಸುತ್ತಿದ್ದಾರೆ.
ಕಳೆದ ವರ್ಷ ಅಗಲಿದ ಯುವನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾದ ನಿನ್ನೆ ಮೇಘನಾರ ಸಿನಿಮಾ ಘೋಷಣೆಯಾಗಿದೆ. ಇದು ಚಿರು ನೆನಪಿಗಾಗಿ ಅವರ ಸ್ನೇಹಿತರು ಮತ್ತು ಪತ್ನಿ ಮೇಘನಾ ಜೊತೆಗೂಡಿ ಶುರುಮಾಡುತ್ತಿರುವ ಪ್ರಯೋಗ. “ನಾವೆಲ್ಲಾ ಗೆಳೆಯರು ಒಟ್ಟಾಗಿ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಿದ್ದೆವು. ಚಿರು ಅವರಿಗಂತೂ ಈ ಬಗ್ಗೆ ತುಂಬಾ ಒತ್ತಾಸೆಯಿತ್ತು. ಆದರೆ ಈ ವಿಷಯ ಚರ್ಚೆಯಾದ ಒಂದುವಾರಕ್ಕೆ ಚಿರು ನಮ್ಮನೆಲ್ಲಾ ಬಿಟ್ಟುಹೋದ. ಆಮೇಲೆ ಈ ವಿಷಯ ಅಲ್ಲಿಗೆ ನಿಂತುಹೋಯಿತು. ಅವನ ಕನಸು ನನಸಾಗುವ ಸಮಯ ಈಗ ಬಂದಿದೆ” ಎಂದರು ಚಿರಂಜೀವಿ ಸರ್ಜಾ ಅವರ ಗೆಳೆಯ, ಚಿತ್ರನಿರ್ದೇಶಕ ಪನ್ನಗ ಭರಣ.
ಪಿ.ಬಿ.ಸ್ಟುಡಿಯೋಸ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಪನ್ನಗ ಅವರೊಂದಿಗೆ ಕಮಲೇಶ್ ನಿರ್ಮಾಣದಲ್ಲಿ ಕೈಜೋಡಿಸುತ್ತಿದ್ದಾರೆ. ವಿಶಾಲ್ ಆತ್ರೇಯ ಕತೆ ಬರೆದು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಮೇಘನಾ ಅವರದ್ದು ಪ್ರಮುಖ ಪಾತ್ರ. ವಾಸುಕಿ ವೈಭವ್ ಸಂಗೀತ ಸಂಯೋಜಿಸಲಿದ್ದು, ಈ ವರ್ಷಾಂತ್ಯದಲ್ಲಿ ಶೂಟಿಂಗ್‌ಗೆ ಚಾಲನೆ ಸಿಗಲಿದೆ. ನಟಿ ಮೇಘನಾ, “ನಾನು ನಟಿಸಲು ಸಿದ್ದವಾಗಿದ್ದೀನಾ ಎಂದು ಯಾರಾದರೂ ಕೇಳಿದರೆ, ಈಗಲೂ ನನ್ನಲ್ಲಿ ಗೊಂದಲವಿದೆ. ಆದರೆ ಪನ್ನಗ ಭರಣ ನಿರ್ಮಾಣ ಮಾಡುತ್ತಿದ್ದೇನೆ ಅಂದಾಕ್ಷಣ ಒಪ್ಪಿಕೊಂಡೆ. ನಮ್ಮಪ್ಪ ಹಾಗೂ ಅವರ ಅಪ್ಪ ಬಹಳ ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಪನ್ನಗ ಮತ್ತು ನಾನು ಕೂಡ ಹೀಗೆ ಮುಂದೆ ಸಾಕಷ್ಟು ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆನ್ನುವ ಆಸೆ ಇದೆ” ಎಂದರು.
ಪತಿ ಚಿರಂಜೀವಿ ಸರ್ಜಾ ಅವರನ್ನು ನೆನಪು ಮಾಡಿಕೊಳ್ಳುವ ಅವರು, “ಚಿತ್ರನಿರ್ಮಾಣ ಚಿರು ಕನಸು. ಅದು ಈಗ ನನಸಾಗುತ್ತಿದೆ. ಈ ಸಿನಿಮಾ ಅವರ ಹುಟ್ಟುಹಬ್ಬಕ್ಕೆ ಉಡುಗೊರೆ. ನಿರ್ದೇಶಕರು ಹೇಳಿದ ಕಥೆ ಕೇಳಿ ನಾನು ಎರಡು ದಿನ ಅದೇ ಗುಂಗಿನಲ್ಲಿದೆ. ತುಂಬಾ ಸುಂದರವಾದ ಕಥೆ. ಹಾಗಾಗಿ ಒಪ್ಪಿಕೊಂಡೆ” ಎಂದರು. ನಿರ್ದೇಶಕ ವಿಶಾಲ್ ಆತ್ರೇಯ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಅವರಿಗಿದೆ. “ನಾನು ಕಥೆ ಹೇಳಿದ ತಕ್ಷಣ ಪನ್ನಗಾಭರಣ ಯಾವಾಗಿನಿಂದ ಆರಂಭ ಮಾಡೋಣ ಎಂದರು. ಇನ್ನೂ ಸ್ಕ್ರಿಪ್ಟ್ ಸೇರಿ ಕೆಲವು ಕೆಲಸಗಳಿಗೆ ಸಮಯ ಬೇಕು. ಹಾಗಾಗಿ ಸ್ವಲ್ಪ ನಿಧಾನವಾಗಿ ಆರಂಭಿಸೋಣ ಅಂದೆ. ಸದ್ಯಕ್ಕೆ ಮೇಘನಾರಾಜ್ ನಟಿಸುವುದು ಖಾತ್ರಿಯಾಗಿದೆ. ಸಾಕಷ್ಟು ಹೆಸರಾಂತ ಕಲಾವಿದರು ಇದರಲ್ಲಿ ನಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡುತ್ತೇವೆ” ಎಂದರು.
ನಿರ್ದೇಶಕ ನಾಗಾಭರಣ ಅವರು ಪುತ್ರನ ನಿರ್ಮಾಣದ ಚಿತ್ರದ ಸಂದರ್ಭದಲ್ಲಿ ಹಾಜರಿದ್ದು ಹಾರೈಸಿದರು. “ಬೇರೆ ಭಾಷೆಗಳಲ್ಲಿ ಒಳ್ಳೆಯ ಚಿತ್ರ ಬರುತ್ತದೆ, ಕನ್ನಡದಲ್ಲಿ ಬರುತ್ತಿಲ್ಲ ಎಂಬ ಮಾತು ಆಗಿಂದಾಗ್ಗೆ ಕೇಳಿಬರುತ್ತವೆ. ಎಪ್ಪತ್ತರ ದಶಕದಲ್ಲಿ ನಾವೆಲ್ಲಾ ಪ್ರಯೋಗಶೀಲರು ಸೇರಿ ಚಿತ್ರ ನಿರ್ಮಾಣ ಮಾಡಿದ್ದೆವು. ಈಗ ಪಿ.ಬಿ.ಸ್ಟುಡಿಯೋಸ್ ಮೂಲಕ ನನ್ನ ಮಗ ಪನ್ನಗಾಭರಣ ಹಾಗೂ ಸ್ನೇಹಿರು ಸೇರಿ ಹೊಸ ಬದಲಾವಣೆಗೆ ಮುಂದಾಗಿದ್ದಾರೆ. ನಿಮ್ಮ ಪ್ರೋತ್ಸಾಹ ಅವರ ಮೇಲಿರಲಿ. ನನ್ನ ಸ್ನೇಹಿತ ಸುಂದರರಾಜ್ ಪುತ್ರಿ ಮೇಘನಾರಾಜ್ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಸಂತಸ ತಂದಿದೆ” ಎನ್ನುವುದು ನಾಗಾಭರಣರ ಮಾತು. “ನಾಗಾಭರಣ ಮತ್ತು ನನ್ನ ಸ್ನೇಹ ಐದು ದಶಕಗಳಷ್ಟು ಹಳೆಯದು. ಇಂದು ನಮ್ಮ ಮಕ್ಕಳ ಚಿತ್ರಕ್ಕೆ ನಾವು ಹಾರೈಸಲು ಬಂದಿರುವುದು ಸಂತೋಷ. ನಮ್ಮ ಸ್ನೇಹದ ತರಹ ಅವರ ಸ್ನೇಹವೂ ಸಾಕಷ್ಟು ದೀರ್ಘ ಕಾಲವಿರಲಿ” ಎಂದು ಸುಂದರರಾಜ್ ಹಾರೈಸಿದರು.