ಒಂದು ಚಿತ್ರ ಜನಪ್ರಿಯವಾದರೆ ಅದರ ಮುಂದುವರಿಕೆಯ ಭಾಗವಾಗಿ ಎರಡು, ಮೂರು.. ಶೀರ್ಷಿಕೆಯಡಿ ಸಿನಿಮಾಗಲು ತಯಾರಾಗುವುದು ಹೊಸ ವಿಷಯವೇನಲ್ಲ. ಈಗ ಕನ್ನಡದಲ್ಲಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆ ಆಗಿರುವ ಹೊತ್ತಿನಲ್ಲಿ ಇಂಥ ಸೀಕ್ವೆಲ್ ಚಿತ್ರಗಳನ್ನು ಒಮ್ಮೆ ನೆನಪು ಮಾಡಿಕೊಳ್ಳುವ ಪ್ರಯತ್ನವಿದು.
ಸಿನಿಮಾರಂಗದಲ್ಲಿ ಒಂದು ಟ್ರೆಂಡ್ ಸೃಷ್ಟಿ ಮಾಡೋ ಸಿನಿಮಾ ಬಂದರೆ ಅದೇ ಟ್ರೆಂಡ್ನಲ್ಲಿ ಹತ್ತಾರು ಸಿನಿಮಾಗಳು ಬಂದು ಹೋಗುತ್ತವೆ. ಅದೇನೋ ಸಿನಿಮಾ ಮಂದಿಗೆ ಗೆಲ್ಲುವ ಫಾರ್ಮ್ಯುಲಾ ಅಂದ್ರೆ ಬಹಳ ನಂಬಿಕೆ. ಹಾಗೆ ಕೇವಲ ಟ್ರೆಂಡ್ ಅನ್ನು ಮಾತ್ರ ಸಿನಿಮಾರಂಗ ಫಾಲೋ ಮಾಡೋದಿಲ್ಲ. ಕೆಲವೊಮ್ಮೆ ಗೆದ್ದ ಚಿತ್ರಗಳ ಬಾಲ ಹಿಡಿದು ಅದೇ ಹೆಸರಿನಲ್ಲಿ ಸಿನಿಮಾಗಳು ಬರುತ್ತವೆ. ಇದಕ್ಕೆ ಹಳೆಯ ಚರಿತ್ರೆಯೇ ಇದೆ.
ಶಂಕರ್ನಾಗ್ ಅಭಿನಯದ ‘ಸಾಂಗ್ಲಿಯಾನ’ ಅಂತಹ ಚಿತ್ರಗಳಲ್ಲಿ ಒಂದು. ‘ಸಾಂಗ್ಲಿಯಾನ’ ಹಿಟ್ ಆದ ನಂತರ ಇದರ ಎರಡನೇ ಭಾಗವಾಗಿ ‘ಎಸ್.ಪಿ.ಸಾಂಗ್ಲಿಯಾನ 2’ ತೆರೆಕಂಡು ಸಕ್ಸಸ್ ಕಂಡಿತ್ತು. ಶಂಕರ್ ನಾಗ್ ಅವರ ನಿಧನದ ನಂತರ ‘ಸಾಂಗ್ಲಿಯಾನ 3’ ಕೂಡ ದೇವರಾಜ್ ಅವರ ಅಭಿನಯದಲ್ಲಿ ತೆರೆಕಂಡರೂ ಅದು ಯಶಸ್ಸು ಗಳಿಸಲಿಲ್ಲ. ಇದಕ್ಕೂ ಮುಂಚೆಯೇ ಅನಂತ್ ನಾಗ್ ಅಭಿನಯದ ‘ಗೋಲ್ ಮಾಲ್’ ಸರಣಿಯ ಚಿತ್ರಗಳೂ ಬಂದಿದ್ದವು. ಅಷ್ಟೇ ಏಕೆ ಡಾ.ರಾಜಕುಮಾರ್ ಅಭಿನಯದ ‘ಗಂಧದ ಗುಡಿ’ ಚಿತ್ರ ಕೂಡಾ ಮತ್ತೆ ಶಿವ ರಾಜಕುಮಾರ್ ಅಭಿನಯದಲ್ಲಿ ಎರಡನೇ ಭಾಗದ ಭಾಗ್ಯ ಪಡೆದುಕೊಂಡಿತ್ತು. ನಿರ್ದೇಶಕ ಶಶಾಂಕ್ ಕೂಡ ಯೋಗರಾಜ್ ಭಟ್ಟರ ‘ಮುಂಗಾರು ಮಳೆ’ಯ ಇನ್ನೊಂದು ಸೀಸನ್ ಅನ್ನು ತೆರೆಯ ಮೇಲೆ ತೋರಿಸಿದ್ದರು.
ಇನ್ನು, ಇತ್ತೀಚಿನ ದಿನಗಳಲ್ಲಿ ಶರಣ್ ಅಭಿನಯದ ‘ರ್ಯಾಬೋ’ ಮತ್ತು ‘ವಿಕ್ಟರಿ’ ಚಿತ್ರಗಳೂ ಕೂಡ ಎರಡನೇ ಭಾಗ ಬರುವಷ್ಟರ ಮಟ್ಟಿಗೆ ಗೆಲುವು ಕಂಡಿದ್ದವು. ಹಾಗೆಯೇ ಶರಣ್ ಅವರ ‘ಅಧ್ಯಕ್ಷ’ ಕೂಡಾ ಮತ್ತೆ ಬಂದಿದ್ದ ಅನ್ನೋದನ್ನು ಮರೆಯುವ ಹಾಗಿಲ್ಲ. ಇದರ ಮಧ್ಯೆ ‘ದಂಡುಪಾಳ್ಯ’ ಚಿತ್ರದ ಪಾರ್ಟ್ 2 ಕೂಡಾ ಬಂದುಹೋಯಿತು. ಹಾಗಂತ ಇದು ಕೇವಲ ಕನ್ನಡ ಚಿತ್ರರಂಗದಲ್ಲಿರೋ ಟ್ರೆಂಡ್ ಅಲ್ಲ. ಹಾಲಿವುಡ್ನಲ್ಲಿ ಇಂದಿಗೂ ಬಾಂಡ್ ಸರಣಿಯ ಸಿನಿಮಾಗಳು ಬೇರೆ ಬೇರೆ ಹೆಸರಿನಲ್ಲಿ ಬರುತ್ತಲೇ ಇವೆ. ‘ರ್ಯಾಂಬೋ’ ಕೂಡ ಅಲ್ಲಿನ ತೆರೆಯ ಮೇಲೆ ಹಲವು ಬಾರಿ ಅವತಾರ ತಾಳಿದ್ದಾನೆ. ಏಕೆಂದರೆ ಒಂದು ಸಲ ಮಿಷನ್ ಸಕ್ಸಸ್ ಫುಲ್ ಆದ ಮೇಲೆ ‘ಮಿಷನ್ ಇಂಪಾಸಿಬಲ್’ ಅನ್ನೋ ಪ್ರಶ್ನೆಯೇ ಇಲ್ಲ ಎನ್ನುವಂತೆ ಹಾಲಿವುಡ್ನವರು ಸೀಕ್ವೆಲ್ ಗಳನ್ನು ಮಾಡುತ್ತಲೇ ಇದ್ದಾರೆ.
ಹಿಂದಿ ಚಿತ್ರರಂಗ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಆ ಲೆಕ್ಕದಲ್ಲಿ ಅವರದ್ದು ಕೊಂಚ ಅತಿರೇಕ ಎನ್ನುವಷ್ಟರ ಮಟ್ಟಿಗೆ ಎಲ್ಲರಿಗಿಂತ ಮುಂದೆ ಇದೆ. ‘ಆಶಿಕಿ’, ‘ಬಂಟಿ ಔರ್ ಬಬ್ಲಿ’, ‘ಹಂಗಾಮಾ’, ‘ಭೂಲ್ ಭುಲಯ್ಯಾ’, ‘ಲವ್ ಆಜ್ ಕಲ್’, ‘ಸಡಕ್’, ‘ಹೇರಾಪೇರಿ’, ‘ಡಾನ್’ನಂಥ ಚಿತ್ರಗಳು ಪಾರ್ಟ್ 2 ಕಂಡರೆ, ‘ದಬಾಂಗ್’, ‘ಕ್ರಿಷ್’ ನಂಥ ಚಿತ್ರಗಳು ಪಾರ್ಟ್ 3 ಬಂದಿವೆ. ‘ಗೋಲ್ ಮಾಲ್ ಎನ್ನುವ ಸಿನಿಮಾ ಅಂತೂ ಈ ವಿಷಯದಲ್ಲಿ ಇಂಟರ್ನೆಟ್ನಲ್ಲಿ ಅನೇಕ ಮೆಮೆಗಳಿಗೆ ಕಾರಣವಾಗುಷ್ಟರ ಮಟ್ಟಿಗೆ ಟ್ರೋಲ್ ಆಗಿದೆ. 2006ರಲ್ಲಿ ಶುರುವಾದ ಈ ಗೋಲ್ ಮಾಲ್ ಟ್ರೆಂಡ್, ನಂತರ ‘ಗೋಲ್ ಮಾಲ್ ರಿಟರ್ನ್ಸ್’, ‘ಗೋಲ್ ಮಾಲ್ 3’, ‘ಗೋಲ್ಮಾಲ್ ಅಗೇನ್’ ಸೀಕ್ವೆಲ್ಗಳನ್ನು ಕಂಡಿದೆ. 2023ಕ್ಕೆ ತೆರೆಗೆ ಬರಲು ಇನ್ನೊಂದು ಗೋಲ್ಮಾಲ್ ಚಿತ್ರ ಕೂಡಾ ತಯಾರಾಗುತ್ತಿದೆ. ಆದರೆ ಇದರ ಜೊತೆಗೆ ಮೂಲ ‘ಗೋಲ್ಮಾಲ್’ ಎನ್ನುವ ಚಿತ್ರ ಅಮೋಲ್ ಪಾಲೇಕರ್ ಅವರ ನಾಯಕತ್ವದಲ್ಲಿ, ಹೃಷಿಕೇಶ್ ಮುಖರ್ಜಿ ಅವರ ನಿರ್ದೇಶನದಲ್ಲಿ 1979ರಲ್ಲೇ ತೆರೆಕಂಡಿತ್ತು ಅನ್ನೋದು ವಿಶೇಷ.
2010ರಲ್ಲಿ ‘ಹೌಸ್ಫುಲ್’ ಚಿತ್ರ, ಹೌಸ್ ಫುಲ್ ಪ್ರದರ್ಶನ ಕಂಡಿದ್ದರಿಂದ ಅದು ಕಳೆದ ವರ್ಷದವರೆಗೂ 1,2,3,4 ಭಾಗಗಳಾಗಿ ಬಿಡುಗಡೆ ಆಗಿದೆ. ಅದರ ಹಾದಿಯಲ್ಲೇ ‘ರಾಝ್’ ಚಿತ್ರ ಕೂಡ ‘ರಾಝ್ ದ ಮಿಸ್ಟ್ರಿ ಕಂಟಿನ್ಯೂಸ್’, ‘ರಾಝ್ 3’, ‘ರಾಝ್ ರಿಟರ್ನ್ಸ್’ ಹೆಸರುಗಳಲ್ಲಿ ಬಹುರೂಪ ತಾಳಿದೆ. ವಿದ್ಯುತ್ ಜಮಾಲ್ ಅಭಿನಯದ ಕಮ್ಯಾಂಡೋ’ ಚಿತ್ರಕ್ಕೂ ಸಿನಿಮಾವೊಂದು ಮೂರು ಭಾಗಗಳು ಎನ್ನುವ ಹೆಸರು ದೊರೆತಿದೆ. ಈ ಸೀಕ್ವೆಲ್ಗಳು ಬಾಲಿವುಡ್ನಲ್ಲಿ ಎಷ್ಟೊಂದು ಜನಪ್ರಿಯ ಅಂದ್ರೆ, ಪ್ರತಿ ವರ್ಷದ ಆರಂಭದಲ್ಲಿ ಈ ವರ್ಷ ಯಾವ್ಯಾವ ಚಿತ್ರಗಳ ಸೀಕ್ವೆಲ್ ಬರಲಿವೆ ಎಂದು ಲೆಕ್ಕ ಹಾಕುವುದೇ ಅಲ್ಲಿ ಒಂದು ಟ್ರೆಂಡ್ ಆಗಿದೆ. ಇನ್ನು, ತೆಲುಗು ಚಿತ್ರರಂಗದಿಂದ ಈ ಸೀಕ್ವೆಲ್ಗಳಿಗೆ ಅತಿ ದೊಡ್ಡ ಕೊಡುಗೆ ಅಂದ್ರೆ ಇತ್ತೀಚಿನ ‘ಬಾಹುಬಲಿ’ ಚಿತ್ರ ಎನ್ನಬಹುದು. ಆದರೆ, ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ‘ಕೋಟಿಗೊಬ್ಬ 3’ ನಂತರ ಎಲ್ಲರೂ ಎದುರು ನೋಡುತ್ತಿರುವ ಇನ್ನೊಂದು ಚಿತ್ರ ಅಂದ್ರೆ ‘ಕೆಜಿಎಫ್ 2’. ಇದಲ್ಲದೆ ‘ಉಗ್ರಂ 2’, ‘ಮಫ್ತಿ 2’ ಚಿತ್ರಗಳೂ ಬರುತ್ತವೆ ಎಂಬ ಗಾಳಿಸುದ್ದಿ ಇದೆ. ಒಟ್ಟಿನಲ್ಲಿ ಒಂದು ಗೆದ್ದ ಸಿನಿಮಾಕ್ಕೆ ಅದೇ ಹೆಸರಿಡುವ ವಿಷಯದಲ್ಲಿ ಮತ್ತು ಗೆದ್ದ ಕಥೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇಡೀ ಭಾರತೀಯ ಚಿತ್ರರಂಗವೇ ನಂಬಿಕೆ ಇಟ್ಟಿದೆ ಅನ್ನೋದು ಈ ಎಲ್ಲಾ ಚಿತ್ರಗಳ ಪಟ್ಟಿಯನ್ನು ನೋಡಿದಾಗ ಅನ್ನಿಸೋದು ಸಹಜ.