ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಕೆಲವು ಎಂಜಿನಿಯರಿಂಗ್ ಪದವೀಧರರು ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲಾ ಪ್ರದರ್ಶನ ಮಾಡಿದ್ದಾರೆ. ಈಗ ಇದೇ ಪಟ್ಟಿಯಲ್ಲಿರುವ ಜಗನ್ನಾಥ್‌ ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಚಿತ್ರನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ದೀರ್ಘಕಾಲದ ಸಹವರ್ತಿಯಾಗಿದ್ದ ರಾಮೇನಹಳ್ಳಿ ಜಗನ್ನಾಥ್ ‘ಹೊಂದಿಸಿ ಬರೆಯಿರಿ’ ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದ ಅಖಾಡಕ್ಕೆ ಧುಮುಕಿದ್ದಾರೆ. ಈ ಚಿತ್ರದ ಕಥೆಯನ್ನು ಅವರೇ ಬರೆದಿದ್ದು, ಅರ್ಚನಾ ಜೋಯಿಸ್ (‘KGF’ ಖ್ಯಾತಿ), ನವೀನ್ (‘ಗುಲ್ಟೂ’ ಖ್ಯಾತಿ), ಪ್ರವೀಣ್ ತೇಜ್ (‘ಮುಂದಿನ ನಿಲ್ದಾಣ’ ಖ್ಯಾತಿ), ಭಾವನಾ ಮತ್ತು ಶ್ರೀ ಮಹಾದೇವ್ ಮುಂತಾದ ನಟನಟಿಯರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ‘ಜೀವನದಲ್ಲಿ ಯಾವುದೇ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಾದರೂ, ತೋಳೇರಿಸಿಕೊಂಡು ಅವನ್ನು ಎದುರಿಸಲು ಮತ್ತು ಬದುಕಲು ಕಲಿಯಬೇಕು’ ಅನ್ನೋದು ಚಿತ್ರದ ತಿರುಳು.

ಈ ಹೊಸಬರ ತಂಡವು ಈಗಾಗಲೇ ಚಿತ್ರೀಕರಣ ಮುಗಿಸಿದೆ. “ನಾವು 2019ರ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದೆವು. ಚಿತ್ರದ ಕಥೆಯು 12 ವರ್ಷಗಳ ಕಾಲಾವಧಿಯನ್ನು ಹೊಂದಿದೆ, ಏಕೆಂದರೆ ಮುಖ್ಯ ಪಾತ್ರಧಾರಿಗಳು ಕಾಲೇಜಿನಲ್ಲಿ ಕಲಿಯುವುದರಿಂದ ಹಿಡಿದು, ಅವರು ಕೆಲಸ ಮಾಡುವ, ಮದುವೆಯಾಗುವ ಅಥವಾ ಜೀವನದಲ್ಲಿ ಸೆಟ್ಲ್ ಆಗುವವರೆಗೂ ತಮ್ಮ ಪಾತ್ರವನ್ನು ಪೋಷಿಸಿದ್ದಾರೆ” ಎಂದು ಸಿನಿಮಾ ವಿವರ ನೀಡುತ್ತಾರೆ ನಿರ್ದೇಶಕರು. ಚಿತ್ರ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಕಲೇಶಪುರ, ಮಂಗಳೂರು, ತೀರ್ಥಹಳ್ಳಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಜಗನ್ 2008ರಲ್ಲಿ ರಾಕ್‌ಲೈನ್ ವೆಂಕಟೇಶ್ ಪ್ರೊಡಕ್ಷನ್ಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡವರು ಮತ್ತು ‘ದೇವ್ರು’ ಮತ್ತು ‘ಆದಿ ಲಕ್ಷ್ಮಿ ಪುರಾಣ’ದಂತಹ ಚಿತ್ರಗಳು ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಪ್ರಮುಖ ತಾರೆಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ಚಿತ್ರವನ್ನು ಅವರು ಮತ್ತು ಅವರ ಗೆಳೆಯರ ಗುಂಪು ‘ಸಂಡೇ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದೆ. “ಈಗಿನ ಪರಿಸ್ಥಿತಿಯಲ್ಲಿ ನಾವು ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದೇವೆ. ಲಾಕ್‌ಡೌನ್ ಮುಗಿದಿದೆ, ನಾವು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರಚಾರವನ್ನು ಪ್ರಾರಂಭಿಸುತ್ತೇವೆ” ಎನ್ನುವ ನಿರ್ದೇಶಕರ ಈ ಚಿತ್ರವು ಮಾನವೀಯ ಸಂಬಂಧಗಳ ಬಗ್ಗೆ ಮಾತನಾಡುತ್ತದಂತೆ. ಚಿತ್ರದಲ್ಲಿ ಏಳು ಹಾಡುಗಳಿವೆ.

ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌
Previous articleಡಬ್ಬಿಂಗ್ ದಬಾಂಗ್; ಮಾತಾಡ್ರೋ ಮಾತಾಡ್ರಿ..
Next articleಸರಣಿ ಸಿನಿಮಾಗಳು; ಸೀಕ್ವೆಲ್ ಸೀಕ್ರೆಟ್

LEAVE A REPLY

Connect with

Please enter your comment!
Please enter your name here