ಭಾರತೀಯ ಚಿತ್ರರಂಗದಲ್ಲಿ ಈ ಚಿತ್ರ ಮಾಡಿದ ದಾಖಲೆಯನ್ನು ಬಹುಶಃ ಯಾವ ಚಿತ್ರವೂ ಮಾಡಿಲ್ಲ ಮತ್ತು ಮಾಡಲಿಕ್ಕಿಲ್ಲ. ಏಕೆಂದರೆ ಈ ಚಿತ್ರ ಇನ್ನೂ ದಾಖಲೆ ಮಾಡುತ್ತಲೇ ಇದೆ. ಈ ಚಿತ್ರದ ಹೆಸರು ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’. ಈ ದಾಖಲೆಗೆ ಕಾರಣವಾಗಿ ಈ ಚಿತ್ರದ ಹೆಸರಿನ ಜತೆಗೇ ಬೆಸೆದುಕೊಂಡಿರುವ ಇನ್ನೊಂದು ಹೆಸರೆಂದರೆ ‘ಮರಾಠಾ ಮಂದಿರ್’.
ಶಾರುಖ್ – ಕಾಜೋಲ್ ಜೋಡಿಯ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದ ಬಗೆಗಿನ ಲೇಟೆಸ್ಟ್ ಸುದ್ದಿ ಎಂದರೆ, ಅಕ್ಟೋಬರ್ 22ರಿಂದ ‘ಮರಾಠಾ ಮಂದಿರ್’ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಮುಂದುವರಿಯುತ್ತದೆ ಅನ್ನೋದು. ಅಕ್ಟೋಬರ್ 22ರಿಂದ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ತೆರೆಯಲಿವೆ. ‘ಮರಾಠಾ ಮಂದಿರ್’ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ದೇಸಾಯಿ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರವನ್ನು ಕೋವಿಡ್ ನಂತರ ಚಿತ್ರಮಂದಿರದಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಚಿತ್ರದ ಅಭಿಮಾನಿಗಳು ಆಲೋಚಿಸಿದ್ದರು. ಆದರೆ ಹಾಗೇನೂ ಆಗುತ್ತಿಲ್ಲ. ಇಂದು 26 ವರ್ಷಗಳನ್ನು ಪೂರೈಸಿರುವ ‘ಡಿಡಿಎಲ್‌ಜೆ’ ಮುಂಬಯಿಯ ‘ಮರಾಠಾ ಮಂದಿರ’ದಲ್ಲಿ ಮ್ಯಾಟಿನಿ ಶೋನಲ್ಲಿ ಮುಂದುವರಿಯಲಿದೆಯಂತೆ.
ಮನೋಜ್ ದೇಸಾಯಿ ಈ ಬಗ್ಗೆ ಉತ್ಸಾಹದಿಂದಲೇ ಮಾತನಾಡಿದ್ದಾರೆ. “ಚಿತ್ರರಂಗದ ಇತರ ಸಹವರ್ತಿಗಳಂತೆ, ನಾನು ಕೂಡ ಮಾರ್ಚ್ 2020ರ ನಂತರ ದೊಡ್ಡ ನಷ್ಟ ಅನುಭವಿಸಿದ್ದೇನೆ. ಇದಕ್ಕೆ ಕಾರಣ ಕೋವಿಡ್. ನಾನು ಮರಾಠಾ ಮಂದಿರದಲ್ಲಿ ಡಿಡಿಎಲ್‌ಜೆ ಚಿತ್ರವನ್ನು ಹಿಂದಿನಂತೆಯೇ ಮುಂದುವರಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. ಆದರೆ, ಕೋವಿಡ್ ಪೂರ್ವದಲ್ಲಿದ್ದಂತೆ ಚಿತ್ರಕ್ಕೆ ನಿಯಮಿತವಾಗಿ ಪ್ರೇಕ್ಷಕರು ಬರುತ್ತಾರೆಯೇ ಎಂಬ ಪ್ರಶ್ನೆ ಅವರನ್ನೂ ಕಾಡುತ್ತಿದೆ. ಆದರೆ, ಮುಂದಿನ ಕೆಲವೇ ದಿನಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ ಎಂಬ ನಂಬಿಕೆ ಅವರದ್ದು. “ಸಿನಿಮಾ ನೋಡಲು ಸಾರ್ವಜನಿಕರು ಚಿತ್ರಮಂದಿರಗಳಿಗೆ ಮರಳುತ್ತಾರೆಯೇ? ಅಥವಾ ಪ್ರೇಕ್ಷಕರು ಮನೆಯಲ್ಲೇ ಕುಳಿತು ಒಟಿಟಿಗಳಿಗೆ ಅಂಟಿಕೊಂಡಿದ್ದಾರೆಯೇ? ಸದ್ಯಕ್ಕೆ ಏನನ್ನೂ ಹೇಳಲಾಗುವುದಿಲ್ಲ, ಆದರೆ ಸದ್ಯಕ್ಕೆ ಎಲ್ಲವನ್ನೂ ಆಶಾವಾದಿ ದೃಷ್ಠಿಯಿಂದಲೇ ನೋಡೋಣ” ಎಂದು ಮನೋಜ್ ಅಭಿಪ್ರಾಯ ಪಟ್ಟಿದ್ದಾರೆ.