ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಮಲ್ಟಿಸ್ಟಾರರ್‌ ಸಿನಿಮಾ ‘ಕಲ್ಕಿ 2898 ಎಡಿ’. ಪೋಸ್ಟರ್‌ ಹಾಗೂ ಟೀಸರ್‌ನಿಂದ ಕುತೂಹಲ ಹೆಚ್ಚಿಸಿದ್ದ ಚಿತ್ರತಂಡ ಈಗ ಸಿನಿಮಾದ ವಿಡಿಯೋ ಗ್ಲಿಂಪ್ಸ್‌ ಹಂಚಿಕೊಂಡಿದೆ. ಅದರಲ್ಲಿ ಅಮಿತಾಭ್‌ ಬಚ್ಚನ್‌ ಅವರ ಪಾತ್ರವನ್ನು ರಿವೀಲ್‌ ಮಾಡಲಾಗಿದೆ.

ಪ್ಯಾನ್‌ ಇಂಡಿಯಾ ಸ್ಟಾರ್‌ಗಳಾದ ಅಮಿತಾಭ್‌ ಬಚ್ಚನ್‌, ಕಮಲ್‌ ಹಾಸನ್‌ ಹಾಗೂ ಪ್ರಭಾಸ್‌ ಅಭಿನಯದ ಬಿಗ್‌ ಬಜೆಟ್‌ ಹಾಗೂ ಪ್ರತಿಷ್ಠಿತ ಸಿನಿಮಾ ‘ಕಲ್ಕಿ 2898 ಎಡಿ’. ಡಾರ್ಲಿಂಗ್‌ ಪ್ರಭಾಸ್‌ ಹಾಗೂ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ ಮೊದಲ ಸಲ ತೆರೆಹಂಚಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾ ಭೂತ ಮತ್ತು ಭವಿಷ್ಯತ್‌ ಕಾಲದ ಕಥೆ ಹೇಳಲಿದೆ. ವೈಜಯಂತಿ ಮೂವೀಸ್‌ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಹಿಂದೆ ದೀಪಿಕಾ ಪಡುಕೋಣೆ, ಪ್ರಭಾಸ್‌, ಅಮಿತಾಭ್‌ ಬಚ್ಚನ್‌ ಅವರ ಫಸ್ಫ್‌ಲುಕ್‌ ರಿಲೀಸ್‌ ಮಾಡಲಾಗಿತ್ತು. ಈಗ ಚಿತ್ರತಂಡ ಬಾಲಿವುಡ್‌ನ ಬಿಗ್‌-ಬಿ ಅಮಿತಾಭ್‌ ನಿರ್ವಹಿಸುತ್ತಿರುವ ಪಾತ್ರವನ್ನು ಅದ್ಧೂರಿಯಾಗಿ ರಿವೀಲ್‌ ಮಾಡಿದ್ದಾರೆ.

ಈ ಹಿಂದೆ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದಾಗ ಅಮಿತಾಭ್‌ ಬಚ್ಚನ್‌ ಅವರ ಪಾತ್ರವನ್ನು ಕೆಲವೇ ಸೆಕೆಂಡ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಈಗ, ಚಿತ್ರತಂಡ ಅಮಿತಾಭ್‌ ಅವರನ್ನು ಅಶ್ವತ್ಥಾಮನಾಗಿ ಸಿನಿಪ್ರಿಯರಿಗೆ ಪರಿಚಯ ಮಾಡಿಕೊಟ್ಟಿದೆ. ಬಿಳಿ ಬಣ್ಣದ ವಸ್ತ್ರದಲ್ಲಿ ಸಖತ್‌ ಡಿಫರೆಂಟ್‌ ಲುಕ್‌ನಲ್ಲಿ ಅಶ್ವತ್ಥಾಮನಾಗಿ ಅಮಿತಾಭ್‌ ಕಾಣಿಸಿಕೊಂಡಿದ್ದಾರೆ. ಶ್ವೇತ ವರ್ಣದ ವಸ್ತ್ರದಲ್ಲಿ ಗುಹೆಯೊಳಗಿರುವ ಶಿವಲಿಂಗದ ಮುಂದೆ ಕುಳಿತಿರುವ ಅಮಿತಾಭ್‌ ಈ ಸಲ ಈ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೀನು ಯಾರು? ದೇವಸ್ಥಾನದಲ್ಲಿ ಇದ್ದೀಯಾ, ನೀನೇನಾದರೂ ದೇವರಾ..? ಎಂದು ಮಗುವೊಂದು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಉತ್ತರಿಸುವ ಅಮಿತಾಭ್‌, ‘ಅಂತಿಮ ಯುದ್ಧದ ಸಮಯ ಬಂದಿದೆ… ಪ್ರಾಚೀನ ಕಾಲದಿಂದಲೂ, ನಾನು ಅವತಾರದ ಆಗಮನಕ್ಕಾಗಿ ಕಾಯುತ್ತಿದ್ದೆ. ನಾನು ಗುರು ದ್ರೋಣಾಚಾರ್ಯರ ಮಗ. ಅಶ್ವತ್ಥಾಮ…’ ಎಂದು ಹೇಳುತ್ತಾರೆ. ಈ ಮೂಲಕ ಅಮಿತಾಭ್‌ ಪಾತ್ರ ರಿವೀಲ್‌ ಆಗುತ್ತದೆ. ಈ ವರ್ಷದ ದೊಡ್ಡ ಸಿನಿಮಾ ಎಂಬ ಖ್ಯಾತಿ ಪಡೆದಿರುವ ‘ಕಲ್ಕಿ 2898 ಎಡಿ’ ಯಾವಾಗ ರಿಲೀಸ್‌ ಆಗಲಿದೆ ಅಂತ ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ. ಚಿತ್ರದ ಬಿಡುಗಡೆ ದಿನಾಂಕಕ್ಕಾಗಿ ಸಿನಿಪ್ರಿಯರು ಇನ್ನೂ ಸ್ವಲ್ಪ ದಿನ ತಾಳ್ಮೆಯಿಂದ ಕಾಯಬೇಕಿದೆ.

LEAVE A REPLY

Connect with

Please enter your comment!
Please enter your name here