ಹಿಂದಿ ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಬಯೋಪಿಕ್ ಸಿನಿಮಾ ಸೆಟ್ಟೇರಲಿದೆ. ನಟ, ನಿರ್ಮಾಪಕ ನಿಖಿಲ್ ದ್ವಿವೇದಿ ಈ ಸಿನಿಮಾ ನಿರ್ಮಿಸಲಿದ್ದು, ಫರ್ಹಾ ಖನಾ ಚಿತ್ರ ನಿರ್ದೇಶಿಸಲಿದ್ದಾರೆ.
ನಟ ರಾಜೇಶ್ ಖನ್ನಾ ಅವರು ನಮ್ಮೊಂದಿಗಿದ್ದಿದ್ದರೆ ನಾಳೆ ಡಿಸೆಂಬರ್ 29ಕ್ಕೆ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹಿಂದಿ ಸಿನಿಮಾ ಕಂಡ ಮೊದಲ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ನಟನೆಯ ಬಹಳಷ್ಟು ಸಿನಿಮಾಗಳು ಮೈಲುಗಲ್ಲಾಗಿವೆ. ಖನ್ನಾ ಜನ್ಮದಿನದ ಸಂದರ್ಭದಲ್ಲಿ ಅವರ ಬಯೋಪಿಕ್ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದ್ದಾರೆ ಬಾಲಿವುಡ್ ನಟ, ನಿರ್ಮಾಪಕ ನಿಖಿಲ್ ದ್ವಿವೇದಿ. ಇದಕ್ಕೆ ಪೂರ್ವಭಾವಿಯಾಗಿ ಅವರು ಗೌತಮ್ ಚಿಂತಾಮಣಿ ಬರೆದಿರುವ ರಾಜೇಶ್ ಖನ್ನಾ ಬಯೋಗ್ರಫಿ ‘ಡಾರ್ಕ್ ಸ್ಟಾರ್’ ಕೃತಿಯ ಹಕ್ಕುಗಳನ್ನು ಖರೀದಿಸಿದ್ದಾರೆ. ಪುಸ್ತಕ ರಚಿಸಿರುವ ಗೌತಮ್ ಚಿಂತಾಮಣಿ ಅವರೇ ಸಿನಿಮಾಗೆ ಚಿತ್ರಕಥೆ ರಚಿಸಲಿದ್ದಾರೆ. ನೃತ್ಯಸಂಯೋಜಕಿ, ಚಿತ್ರನಿರ್ದೇಶಕಿ ಫರ್ಹಾ ಖಾನ್ ಸಿನಿಮಾ ನಿರ್ದೇಶಿಸಲಿದ್ದಾರೆ.
“ಹಿಂದಿ ಸಿನಿಮಾ ಕಂಡ ಶ್ರೇಷ್ಠ ನಟ ರಾಜೇಶ್ ಖನ್ನಾ ಹಲವು ನಟ-ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ವರ್ಣರಂಜಿತ ವ್ಯಕ್ತಿತ್ವದ ಸೂಪರ್‌ಸ್ಟಾರ್. ಸಿನಿಮಾರಂಗದಲ್ಲಿ ಸೋಲುಗಳನ್ನು ಗೆಲುವುಗಳಾಗಿ ಪರಿವರ್ತಿಸಿಕೊಂಡ ವ್ಯಕ್ತಿ. ‘ಡಾರ್ಕ್ ಸ್ಟಾರ್’ ಕೃತಿಯಲ್ಲಿ ಅವರ ವ್ಯಕ್ತಿತ್ವವನ್ನು ಆಕರ್ಷಿಕವಾಗಿ ಕಟ್ಟಿಕೊಡಲಾಗಿದೆ. ಹಾಗೆ ನೋಡಿದರೆ ಅವರ ಕುರಿತ ಸಿನಿಮಾ ಯಾವಾಗಲೋ ಸಿದ್ಧವಾಗಬೇಕಿತ್ತು. ನಾನು ಅವರ ಬದುಕು – ಸಾಧನೆಯನ್ನು ತೆರೆಗೆ ಅಳವಡಿಸಲು ಎಗ್ಸೈಟ್ ಆಗಿದ್ದೇನೆ” ಎಂದಿದ್ದಾರೆ ನಿರ್ಮಾಪಕ ನಿಖಿಲ್. ಸಿನಿಮಾ ನಿರ್ದೇಶಿಸಲಿರುವ ಫರ್ಹಾ ಖಾನ್, “ಗೌತಮ್ ರಚಿಸಿರುವ ಪುಸ್ತಕವನ್ನು ನಾನು ಓದಿದ್ದೇನೆ. ಈ ಪ್ರಾಜೆಕ್ಟ್ ಕುರಿತಂತೆ ಮಾತುಕತೆ ನಡೆಯುತ್ತಿದೆ” ಎಂದಿದ್ದಾರೆ.
ಚೇತನ್ ಆನಂದ್ ನಿರ್ದೇಶನದ ‘ಆಖ್ರಿ ಖತ್’ (1966) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪ್ರವೇಶಿಸಿದ ರಾಜೇಶ್ ಖನ್ನಾ 60, 70ರ ದಶಕಗಳ ಜನಪ್ರಿಯ ಹೀರೋ ಆಗಿ ಮಿಂಚಿದರು. ಆರಾಧನಾ, ಇತ್ತೆಫಾಕ್, ಸಚ್ಛಾ ಝೂಟಾ, ಕಟಿ ಪತಂಗ್, ಆನ್ ಮಿಲೊ ಸಜನಾ, ಆನಂದ್, ದುಶ್ಮನ್, ಅಮರ್ ಪ್ರೇಮ್, ಬಾವರ್ಚಿ, ಧಾಗ್, ನಮಕ್ ಹರಾಮ್ ಸೇರಿದಂತೆ ಹಲವು ಹಿಟ್ ಸಿನಿಮಾಗಳ ಮೂಲಕ ಸೂಪರ್‌ಸ್ಟಾರ್ ಪಟ್ಟ ಅಲಂಕರಿಸಿದ್ದರು. ರಾಜೇಶ್ ಖನ್ನಾ ಬಯೋಪಿಕ್‌ನಲ್ಲಿ ವಿವಾದಕ್ಕೆ ಕಾರಣವಾಗುವ ಯಾವುದೇ ಅಂಶಗಳನ್ನು ಹೇಳುವುದಿಲ್ಲ ಎಂದು ನಿಖಿಲ್ ದ್ವಿವೇದಿ ಸ್ಪಷ್ಟಪಡಿಸಿದ್ದಾರೆ. “ಬಯೋಪಿಕ್‌ನಲ್ಲಿ ನಟನಾಗಿ ಅವರ ವ್ಯಕ್ತಿತ್ವ, ಸಾಧನೆಯನ್ನು ಹಿಡಿದಿಡಲಿದ್ದೇವೆ. ಸೆನ್ಸೇಷನ್ ಮಾಡುವ, ವಿವಾದ ಸೃಷ್ಟಿಸುವ ಅಂಶಗಳಿಂದ ದೂರವೇ ಇರುತ್ತೇವೆ” ಎನ್ನುವ ಅವರು ಮುಂದಿನ ದಿನಗಳಲ್ಲಿ ಚಿತ್ರದ ಕುರಿತಾಗಿ ಇತರೆ ಮಾಹಿತಿ ನೀಡುವುದಾಗಿ ಹೇಳುತ್ತಾರೆ.