ಅಕ್ಷಯ್‌ ರಾಯ್‌ ನಿರ್ದೇಶನದ ‘ವಿಜಯ್‌ 69’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಮುಖ್ಯಪಾತ್ರದಲ್ಲಿ ನಟಿಸಿರುವ ಅನುಪಮ್‌ ಖೇರ್‌ ಚಿತ್ರದ ಸಹಕಲಾವಿದರು ಹಾಗೂ ತಂತ್ರಜ್ಞರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಟ ಚುಂಕಿ ಪಾಂಡೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನುಪಮ್‌ ಖೇರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ವಿಜಯ್‌ 69’ ಹಿಂದಿ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಸಿನಿಮಾವನ್ನು ಅಕ್ಷಯ್ ರಾಯ್ ನಿರ್ದೇಶಿಸಿದ್ದು, ಚುಂಕಿ ಪಾಂಡೆ ಕೂಡ ಚಿತ್ರದ ಭಾಗವಾಗಿದ್ದಾರೆ. ಈ ಚಿತ್ರವನ್ನು Yash Raj Films ನಿರ್ಮಿಸುತ್ತಿದ್ದು, ಈ ಕುರಿತು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ. ಅನುಪಮ್‌ ಖೇರ್‌ ತಮ್ಮ Instgram ಖಾತೆಯಲ್ಲಿ ಈ ಚಿತ್ರದಲ್ಲಿ ನಟಿಸಿದ ಅನುಭವ ಹಂಚಿಕೊಂಡಿದ್ದು, ‘ತಂಡದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿದ್ದರು. ನನ್ನ 540 ಚಲನಚಿತ್ರಗಳಲ್ಲಿ ಹತ್ತು ಅತ್ಯುತ್ತಮ ಚಿತ್ರಗಳ ಬಗ್ಗೆ ನೀವು ಕೇಳಿದರೆ, ಖಂಡಿತವಾಗಿಯೂ ಅವುಗಳಲ್ಲಿ ಇದೂ ಒಂದು ಎಂದು ಉತ್ತರಿಸುತ್ತೇನೆ. ನನ್ನ40 ವರ್ಷಗಳ ವೃತ್ತಿಜೀವನದಲ್ಲಿ 540 ಚಲನಚಿತ್ರಗಳನ್ನು ಮಾಡಿದ್ದೇನೆ. ಈ ಸಿನಿಮಾ ನನ್ನ ಅರಿವನ್ನು ಹೆಚ್ಚಿಸಿದ ಸಿನಿಮಾ’ ಎಂದಿದ್ದಾರೆ.

ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಶುರುವಾಗಲಿವೆ. ನಟ ಅನುಪಮ್‌ ಖೇರ್‌ ಶೂಟಿಂಗ್‌ ಸವಿನೆನಪುಗಳನ್ನು ನೆನಪು ಮಾಡಿಕೊಂಡು ಸಹನಟರು ಹಾಗೂ ತಂತ್ರಜ್ಞರಿಗೆ ಧನ್ಯವಾದ ಹೇಳಿದ್ದಾರೆ. ‘ಚಿತ್ರೀಕರಣ ಮುಗಿದಿದೆ ಎಂಬ ಶೂನ್ಯತೆಯ ಭಾವನೆ ನನ್ನೊಳಗೆ ಇದೆ. ಆದರೆ ಈ ಸುಂದರ ಚಿತ್ರದಲ್ಲಿ ನನ್ನ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಧನ್ಯವಾದಗಳು YRF. ಪ್ರತಿಭಾವಂತ ಬರಹಗಾರ/ನಿರ್ದೇಶಕ ಅಕ್ಷಯ್‌ರಾಯ್‌ ಅವರಿಗೂ ಧನ್ಯವಾದಗಳು. ‘Vijay 69′ ಚಿತ್ರ ನಿರ್ಮಾಣದಲ್ಲಿ ನಿಮ್ಮ ಪ್ರೀತಿ ಮತ್ತು ಸಹಕಾರಕ್ಕಾಗಿ ಸಹನಟರು ಹಾಗೂ ತಂತ್ರಜ್ಞರಿಗೆ ಧನ್ಯವಾದಗಳು. ಗೆಳೆಯ ಚಂಕಿಪಾಂಡೆ ಅವರಿಗೂ ಸಹ ಧನ್ಯವಾದಗಳು’ ಎಂದಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚುಂಕಿ ಪಾಂಡೆ, ಅನುಪಮ್ ಖೇರ್ ಜೊತೆಗಿನ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡು, ‘ಕೆಲವು ಸ್ನೇಹಗಳು ವಜ್ರದಂತೆ, ಕಾಲ ಕಳೆದಷ್ಟು ಬಲಿಷ್ಠವಾಗುತ್ತವೆ’ ಎಂದು ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here