ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾದ ‘ಬೆಟ್ಟದ ಕಣಿವೆಗಳ’ ಜನಪದ ಹಾಡನ್ನು ನಟಿ ಶೃತಿ ಬಿಡುಗಡೆ ಮಾಡಿದ್ದಾರೆ. ನೈಜ ಘಟನೆ ಆಧಾರಿತ ಸ್ತ್ರೀಪ್ರಧಾನ ಚಿತ್ರ ರಿಲೀಸ್‌ಗೆ ಸಿದ್ಧವಾಗಿದೆ.
ಇತ್ತೀಚೆಗಷ್ಟೇ ‘ಕನ್ನೇರಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಫಸ್ಟ್ ಲುಕ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಂವೇದನಾಶೀಲ ಚಿತ್ರಗಳಿಗೆ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್, ‘ಕನ್ನೇರಿ’ ಚಿತ್ರದ ಕಾನ್ಸೆಪ್ಟ್ ಮತ್ತು ನಿರ್ದೇಶಕರ ಅಭಿರುಚಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ‘ನೀನಾಸಂ’ನಲ್ಲಿ ರಂಗಶಿಕ್ಷಣ ಪಡೆದ ಮಂಜು ನೈಜ ಘಟನೆಯೊಂದನ್ನು ಇಲ್ಲಿ ತೆರೆಗೆ ಅಳವಡಿಸಿದ್ದಾರೆ. ಇದೀಗ ಚಿತ್ರದ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ನಟಿ ಶೃತಿ ಹಾಡು ಬಿಡುಗಡೆಗೊಳಿಸಿದ್ದಾರೆ.
ಸಂಗೀತ ಸಂಯೋಜಕ ಮಣಿಕಾಂತ್ ಕದ್ರಿ ‘ಬೆಟ್ಟದ ಕಣಿವೆಗಳ’ ಎಂಬ ಜನಪದ ಹಾಡಿಗೆ ಮಾಡ್ರನ್ ಟಚ್ ಕೊಟ್ಟು ಸಂಯೋಜನೆ ಮಾಡಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಅವರ ಅರ್ಥಪೂರ್ಣ ಗೀತಸಾಹಿತ್ಯ. ಸಚಿನ್ ಅರಬಳ್ಳಿ ಹಾಡಿರುವ ಸಾಂಗ್ ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಅವರನ್ನೊಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ. ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಕನ್ನೇರಿ ಚಿತ್ರಕ್ಕಿದೆ.