ಮಹೇಂದ್ರ ಮನ್ನೋತ್ ನಟಿಸಿ, ನಿರ್ಮಿಸಿದ್ದ ‘ಆಟೋ’ ಸಿನಿಮಾದ ಹಾಡು ರಾಜ್ಯೋತ್ಸವಕ್ಕೆ ಮರುನಿರ್ಮಾಣವಾಗಿದೆ. ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದ ಈ ಗೀತೆಗೆ ಈಗ ಬಿ.ಪಿ.ಹರಿಹರನ್ ನಿರ್ದೇಶನ ಮಾಡಿದ್ದಾರೆ.
ರಾಜ್ಯೋತ್ಸವಕ್ಕಾಗಿ ಚಿತ್ರನಿರ್ಮಾಪಕ ಮಹೇಂದ್ರ ಮನ್ನೋತ್ ಹೊಸತೊಂದು ಯೋಜನೆ ಹಾಕಿಕೊಂಡಿದ್ದಾರೆ. 2009ರಲ್ಲಿ ಅವರು ನಟಿಸಿ, ನಿರ್ಮಿಸಿದ್ದ ‘ಆಟೋ’ ಸಿನಿಮಾದ ಜನಪ್ರಿಯ ಕನ್ನಡದ ಹಾಡೊಂದನ್ನು ಅವರು ಮರುಚಿತ್ರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದ ಗೀತೆಯಿದು. ಈಗ ಮರುಚಿತ್ರಣ ಮಾಡಿರುವ ಹಾಡನ್ನು ಚಿತ್ರತಂಡ ಎಸ್‌ಪಿಬಿ ಅವರಿಗೇ ಅರ್ಪಿಸಿದೆ. ಮಲ್ಲಿಕಾರ್ಜುನ ಮುತ್ತಲಗೇರಿ ರಚಿಸಿರುವ ಈ ಹಾಡಿಗೆ ವಿಜಯ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. “ಈ ಕನ್ನಡದ ಹಾಡಿನ ಹಕ್ಕುಗಳನ್ನು ಯಾವುದೇ ಆಡಿಯೋ ಸಂಸ್ಥೆಗೆ ಕೊಟ್ಟಿಲ್ಲ. ಯಾರಾದರೂ ಬಳಕೆ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ನಾಡು, ನುಡಿಗೆ ಸಂಬಂಧಿಸಿದ ಹಾಡುಗಳನ್ನು ರೂಪಿಸಲಿದ್ದೇವೆ” ಎನ್ನುತ್ತಾರೆ ಮಹೇಂದ್ರ ಮಣೋತ್.
‘ಆಟೋ’ ಚಿತ್ರದ ನಿರ್ದೇಶಕರೇ ಈ ಹಾಡಿನ ಮರುಚಿತ್ರೀಕರಣದ ಹೊಣೆ ಹೊತ್ತಿದ್ದಾರೆ. “ಬೆಂಗಳೂರು ಮತ್ತು ಮೈಸೂರಿನ ಮಧ್ಯೆ ಸುಮಾರು ಎಪ್ಪತ್ತು ಕಡೆ ಹಾಡಿಗೆ ಚಿತ್ರೀಕರಣ ಮಾಡಿದ್ದೇವೆ. ಸಾಹಿತಿ ದೊಡ್ಡರಂಗೇಗೌಡರು, ಸಾಲುಮರದ ತಿಮ್ಮಕ್ಕ ಸೇರಿದಂತೆ ಮತ್ತೆ ಹಲವರ ಮೇಲೆ ಚಿತ್ರಿಸಿದ್ದು, ಕನ್ನಡ ಸಂಘಟನೆಗಳ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವೀಡಿಯೋದಲ್ಲಿದ್ದಾರೆ. ಒಂದೂವರೆ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಮೇಲೆ ಚಿತ್ರಿಸಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಬಿ.ಪಿ.ಹರಿಹರನ್.