ಮುಹೂರ್ತದ ದಿನದಿಂದಲೂ ಸುದ್ದಿಯಲ್ಲಿರುವ ‘ಮುಗಿಲ್‌ ಪೇಟೆ’ ಸಿನಿಮಾ ನವೆಂಬರ್ 19ರಂದು ತೆರೆಗೆ ಬರಲಿದೆ. ಮನು ರವಿಚಂದ್ರನ್ ಅಭಿನಯದ ಮಹತ್ವಾಕಾಂಕ್ಷೆಯ ಈ ಚಿತ್ರವನ್ನು ಭರತ್ ನಾವುಂದ್ ನಿರ್ದೇಶಿಸಿದ್ದಾರೆ.

ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದೇ ಕರೆಸಿಕೊಂಡವರು ನಟ, ನಿರ್ದೇಶಕ ರವಿಚಂದ್ರನ್‌. ಅವರ ಹಿರಿಯ ಪುತ್ರ ಮನು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡದೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಭರತ್ ನಾವುಂದ್ ನಿರ್ದೇಶನದಲ್ಲಿ ತಯಾರಾಗಿರುವ ‘ಮುಗಿಲ್ ಪೇಟೆ’ ಸಿನಿಮಾ ಮನುಗೆ ಅಂಥದ್ದೊಂದು ಬ್ರೇಕ್ ಕೊಡಲಿದೆ ಎನ್ನುವ ನಿರೀಕ್ಷೆಯಿದೆ. “ಸಾಕಷ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್‌ ಮತ್ತು ಹಾಡು ಜನರಿಗೆ ಇಷ್ಟವಾಗಿದ್ದು ನಮ್ಮಲ್ಲಿ ಭರವಸೆ ತುಂಬಿವೆ. ಅಪ್ಪ ಕೂಡ ಹಾಡುಗಳನ್ನು ಮೆಚ್ಚಿದ್ದಾರೆ” ಎನ್ನುತ್ತಾರೆ ಮನು.

ರಂಗಾಯಣ ರಘು, ಕಾಕ್ರೋಚ್ ಸುಧಿ

ನಿರ್ದೇಶಕ ಭರತ್ ನಾವುಂದ್‌ ಅವರಿಗೆ ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವ ಸಮಾಧಾನವಿದೆ. “ಮುಗಿಲ್ ಪೇಟೆ’ ನನ್ನ ಕನಸು. ಇಡೀ ಚಿತ್ರತಂಡದ ಶ್ರಮದ ಫಲವಾಗಿ ಇಂದು ನಮ್ಮ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ತೊಂಬತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಸಿದ್ದೇವೆ. ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬವೊಂದು. ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಮತ್ತೊಂದು. ಈ ಎರಡು ಕುಟುಂಬದ ಎರಡು ಜೀವಗಳ ನಡುವೆ ಪ್ರೀತಿ‌ ಮಾಡಿದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾವಸ್ತು. ಇದು ಒಂದು ಜಾನರ್‌ನ ಸಿನಿಮಾ ಅಲ್ಲ.‌ ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ನಮ್ಮ ಸಿನಿಮಾದಲ್ಲಿದೆ” ಎನ್ನುತ್ತಾರೆ ಭರತ್‌. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್‌ ಸಿಕ್ಕಿದ್ದು, ನವೆಂಬರ್‌ 19ರಂದು ಸಿನಿಮಾ ತೆರೆಕಾಣಲಿದೆ.

ಚಿತ್ರತಂಡ

ನಟ ಸಾಧುಕೋಕಿಲ ಚಿತ್ರದಲ್ಲಿ ಹದಿನೇಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರಂತೆ! ಈ ಬಗ್ಗೆ ಅವರಿಗೆ ತುಂಬಾ ಖುಷಿಯಿದೆ. “ಮೊದಲ ಬಾರಿಗೆ ಹದಿನೇಳು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರತಂಡದವರು ಇದನ್ನು ಲಿಮ್ಕಾ ದಾಖಲೆಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ. ಯಾವ ಪಾತ್ರಗಳು ಅಂತ ಈಗ ಹೇಳುವುದಿಲ್ಲ. ಚಿತ್ರದಲ್ಲೇ ನೋಡಿ ಆನಂದಿಸಿ” ಎನ್ನುತ್ತಾರವರು. “ನಾನು ಮೊದಲು ಬಣ್ಣ ಹಚ್ಚಿದ್ದು ರವಿಚಂದ್ರನ್ ಅವರ ಮನೆಯಲ್ಲಿ. ಈಗ ಅವರ ಮಗನೊಡನೆ ನಟಿಸಿದ್ದೇನೆ. ಭಾಗವತರ ಪಾತ್ರ ನಿರ್ವಹಣೆ ಮಾಡಿದ್ದೇನೆ. ನಿಗದಿಯಂತೆ ಚಿತ್ರೀಕರಣ ನಡೆಸಿದ ನಿರ್ದೇಶಕರ ಕಾರ್ಯವೈಖರಿ ಶ್ಲಾಘನೀಯ” ಎಂದು ಹಿರಿಯ ನಟ ರಂಗಾಯಣ ರಘು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಮಾಪಕಿ ರಕ್ಷಾ ವಿಜಯಕುಮಾರ್, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಕಲಾವಿದರಾದ ಕಾಕ್ರೋಜ್ ಸುಧಿ, ಮೇಘಶ್ರೀ, ಅಪ್ಪಣ್ಣ ತಮ್ಮ ಅನುಭವವನ್ನು ಹಂಚಿಕೊಂಡರು. ಚಿತ್ರ ಉತ್ತಮವಾಗಿ ಮೂಡಿ ಬರಲು ಶ್ರಮಿಸುತ್ತಿರುವ ಮನು ಅವರ ಸಹೋದರ ವಿಕ್ರಂ ಅವರನ್ನು ಚಿತ್ರತಂಡದ ಎಲ್ಲರೂ ವಿಶೇಷವಾಗಿ ಅಭಿನಂದಿಸಿದರು.

LEAVE A REPLY

Connect with

Please enter your comment!
Please enter your name here