ಖ್ಯಾತ ನಟ ರಜನೀಕಾಂತ್ ಅವರಿಗೆ ಚೆನ್ನೈನಲ್ಲಿ ಕ್ಯಾರೊಟಿಡ್ ಆರ್ಟರಿ ರಿವ್ಯಾಸ್ಕುಲರೈಸೇಷನ್ ಸರ್ಜರಿ ಮಾಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈ ಮಧ್ಯೆ ಸ್ಯಾಂಡಲ್ವುಡ್ ನಟ ಪುನೀತ್ ಅಗಲಿಕೆಯ ಹಿನ್ನೆಲೆಯಲ್ಲಿ ರಜನೀಕಾಂತ್ ಅತಿಥಿಯಾಗಿ ಅವರು ಪಾಲ್ಗೊಂಡಿದ್ದ ‘ಅಪ್ಪು’ ಸಿನಿಮಾ ಶತದಿನೋತ್ಸವದ ವೀಡಿಯೋ ಗಮನ ಸೆಳೆಯುತ್ತಿದೆ.
ನಟ ರಜನೀಕಾಂತ್ ಮೊನ್ನೆ ಗುರುವಾರ ಚೆನ್ನೈನ ಕಾವೇರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ರಜನೀಕಾಂತ್ ಅವರ ಆಪ್ತ ಸಹಾಯಕ ರಿಯಾಝ್ ಅಹ್ಮದ್, “ಇದು ರೊಟೀನ್ ಚೆಕ್ಅಪ್. ಸುಸ್ತು, ತಲೆಭಾರ ಇದ್ದುದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ” ಎಂದಿದ್ದರು. ಇದೀಗ ಆಸ್ಪತ್ರೆ ವೈದ್ಯರು,” ರಜನಿ ಅವರಿಗೆ ಕ್ಯಾರೊಟಿಡ್ ಆರ್ಟರಿ ರಿವ್ಯಾಸ್ಕುಲರೈಸೇಷನ್ ಸರ್ಜರಿ ಮಾಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಮಾಡಲಾಗುವುದು” ಎಂದಿದ್ದಾರೆ. 70ರ ಹರೆಯದ ರಜನೀಕಾಂತ್ ಅವರು ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದರು. ದಿಲ್ಲಿಯಿಂದ ಬಂದ ನಂತರ ಆಸ್ಪತ್ರೆಗೆ ದಾಖಲಾಗಿದ್ದ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳು ಚಿಂತೆಗೀಡಾಗಿದ್ದು ಹೌದು. ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ರಜನೀಕಾಂತ್ ಚೇತರಿಸಿಕೊಳ್ಳುತ್ತಿರುವ ವರದಿಯಿದೆ.
ಈ ಮಧ್ಯೆ ಸ್ಯಾಂಡಲ್ವುಡ್ ನಟ ಪುನೀತ್ ಅಗಲಿಕೆಯ ಹಿನ್ನೆಲೆಯಲ್ಲಿ ರಜನೀಕಾಂತ್ ಅವರು ಪಾಲ್ಗೊಂಡಿದ್ದ ‘ಅಪ್ಪು’ ಸಿನಿಮಾದ ವೀಡಿಯೋ ಗಮನ ಸೆಳೆಯುತ್ತಿದೆ. ಬೆಂಗಳೂರಿನಲ್ಲಿ ನಡೆದ ‘ಅಪ್ಪು’ ಶತದಿನೋತ್ಸವದಲ್ಲಿ ವರನಟ ಡಾ.ರಾಜಕುಮಾರ್ ಇದ್ದರು. ರಜನೀಕಾಂತ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಹಾರೈಸಿದ ರಜನೀಕಾಂತ್, “ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ. ‘ಅಪ್ಪು’ ಚಿತ್ರದಲ್ಲಿ ಪುನೀತ್ ಎನರ್ಜಿ ನೋಡಿದರೆ ಅವರು ದೊಡ್ಡ ನಟನಾಗಿ ಬೆಳೆಯುವಂತೆ ತೋರುತ್ತದೆ. ಡಾ.ರಾಜಕುಮಾರ್ ಅವರ ಪುತ್ರ ಎನ್ನುವ ಕಾರಣಕ್ಕೆ ನಾವು ಚಪ್ಪಾಳೆ ಹೊಡೆಯಬೇಕಿಲ್ಲ. ಪುನೀತ್ ಟ್ಯಾಲೆಂಟ್ಗೆ ಚಪ್ಪಾಳೆ ಹೊಡೆಯಬೇಕು. ನಮಗೆ ಹತ್ತಾರು ಚಿತ್ರಗಳ ನಂತರ ಈ ಮೆಚ್ಯೂರಿಟಿ ಸಾಧಿಸಲು ಸಾಧ್ಯವಾಗಿತ್ತು. ಪುನೀತ್ ಮೊದಲ ಚಿತ್ರದಲ್ಲೇ ಈ ಮೆಚ್ಯೂರಿಟಿ ಸಾಧಿಸಿದ್ದಾರೆ” ಎಂದಿದ್ದರು.