ಆಂಥೋನಿ ಭಾಗ್ಯರಾಜ್‌ ನಿರ್ದೇಶನದ ‘ಸೈರನ್‌’ ತಮಿಳು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಜಯಂ ರವಿ, ಕೀರ್ತಿ ಸುರೇಶ್‌, ಅನುಪಮಾ ಪರಮೇಶ್ವರನ್‌, ಸಮುದ್ರಕನಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ಜಿ ವಿ ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜನೆಯ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ಜಯಂ ರವಿ, ಕೀರ್ತಿ ಸುರೇಶ್, ಅನುಪಮಾ ಪರಮೇಶ್ವರನ್ ಮತ್ತು ಸಮುದ್ರಕನಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಸೈರನ್’ ತಮಿಳು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರವನ್ನು ‘ಇರುಂಬು ತಿರೈ’, ‘ವಿಶ್ವಾಸಂ’, ‘ಹೀರೋ’ ಮುಂತಾದ ಯಶಸ್ವೀ ಚಿತ್ರಗಳ ಬರವಣಿಗೆ ವಿಭಾಗದಲ್ಲಿ ಕೆಲಸ ಮಾಡಿರುವ ಆಂಥೋನಿ ಭಾಗ್ಯರಾಜ್ ನಿರ್ದೇಶಿಸಿದ್ದಾರೆ. ಜಯಂ ರವಿ ಆಂಬ್ಯುಲೆನ್ಸ್ ಡ್ರೈವರ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದೋ ಅಪರಾಧ ಮಾಡಿ ಈ ಡ್ರೈವರ್‌ ಜೈಲು ಸೇರಿರುತ್ತಾನೆ. 14 ವರ್ಷಗಳಿಂದ ಜೈಲಿನಿಂದ ಬಿಡುಗಡೆಯಾಗಲೆಂದೇ ಅವನಿಗೆ ಸಂಬಂಧಿಸಿದವರು ಕಾತುರದಿಂದ ಕಾಯುತ್ತಿರುತ್ತಾರೆ. ಈ ಪ್ರಕರಣವನ್ನು ಬಗೆಹರಿಸುವ ಪೊಲೀಸ್‌ ಅಧಿಕಾರಿಯಾಗಿ ಕೀರ್ತಿ ಸುರೇಶ್‌ ಅಭಿನಯಿಸಿದ್ದಾರೆ. ಜಯಂ ರವಿ ಅವರ ಕಾಲರ್‌ ಪಟ್ಟಿ ಹಿಡಿದು ಕೀರ್ತಿ ಎಳೆದುಕೊಂಡು ಬರುತ್ತಿರುವುದನ್ನು ಸಹ ಟೀಸರ್‌ನಲ್ಲಿ ಕಾಣಬಹುದು.

ಚಿತ್ರದಲ್ಲಿ ಯೋಗಿ ಬಾಬು, ಚಾಂದಿನಿ ತಮಿಳರಸನ್, ಅಳಗಂ ಪೆರುಮಾಳ್, ತುಳಸಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ G V ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ಸೆಲ್ವ ಕುಮಾರ್‌ S K ಛಾಯಾಗ್ರಹಣ, ರೂಬೆನ್‌ ಸಂಕಲನ ಚಿತ್ರಕ್ಕಿದೆ. ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಅಟ್ಲೀ ಅವರ 18ನೇ ಪ್ರಾಜೆಕ್ಟ್‌ನಲ್ಲಿ ವರುಣ್ ಧವನ್ ಜೊತೆಗೆ ಕೀರ್ತಿ ಸುರೇಶ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಜಯಂ ರವಿ ಅವರು ‘ಜೆನಿ’ ಮತ್ತು ‘ಬ್ರದರ್’ ಸಿನಿಮಾಗಳು ಸೇರಿದಂತೆ ಅನೇಕ ಯೋಜನೆಗಳ ಭಾಗವಾಗಿದ್ದಾರೆ.

LEAVE A REPLY

Connect with

Please enter your comment!
Please enter your name here