ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರು ಪುನೀತ್‌ ರಾಜಕುಮಾರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವರನಟ ಡಾ.ರಾಜಕುಮಾರ್‌ ಕುಟುಂಬದೊಂದಿಗೆ ಅವರಿಗೆ ಆತ್ಮೀಯ ಒಡನಾಟವಿತ್ತು. ಬ್ಲಾಗ್‌ನಲ್ಲಿ ಈ ಕುರಿತು ಬರೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್‌ ದಕ್ಷಿಣ ಭಾರತದ ತಮ್ಮ ಸಮಕಾಲೀನ ನಟರಾದ ವರನಟ ಡಾ.ರಾಜಕುಮಾರ್‌ ಅವರೊಂದಿಗೆ ಆತ್ಮೀಯತೆಯಿತ್ತು. ಇದು ಎಪ್ಪತ್ತು, ಎಂಬತ್ತರ ದಶಕಗಳಿಂದಲೂ ಇದ್ದ ಒಡನಾಟ. ಬೆಂಗಳೂರಿಗೆ ಬಂದ ಹಲವು ಸಂದರ್ಭ, ಕಾರ್ಯಕ್ರಮಗಳಲ್ಲಿ ಬಚ್ಚನ್‌ ಮತ್ತು ಡಾ.ರಾಜ್‌ ಭೇಟಿಯಾಗಿದ್ದಿದೆ. ರಾಜ್ ನಿಧನದ ನಂತರವೂ ಬಚ್ಚನ್ ವರನಟನ ಕುಟುಂಬದ ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪುನೀತ್ ರಾಜಕುಮಾರ್ ಅಕಾಲಿಕ ಅಗಲಿಕೆ ಬಚ್ಚನ್‌ ಅವರಿಗೆ ದಿಗ್ರಮೆ ಮೂಡಿಸಿದೆ.

ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದಿರುವ ಬಚ್ಚನ್‌, “ಕನ್ನಡ ಚಿತ್ರರಂಗದ ಲೆಜೆಂಡರಿ ನಟ ರಾಜಕುಮಾರ್ ಕುಟುಂಬದೊಂದಿಗೆ ನನಗೆ ತುಂಬಾ ಆತ್ಮೀಯತೆಯಿತ್ತು. ಅವರ ಪುತ್ರ ಪುನೀತ್‌ ಸಿನಿಮಾರಂಗದಲ್ಲಿ ತಮ್ಮದೇ ಆದ ಒಂದು ಭವ್ಯ ಹಾದಿ ಸೃಷ್ಟಿಸಿಕೊಂಡಿದ್ದರು. 46ರ ಚಿಕ್ಕ ಹರೆಯದಲ್ಲೇ ಅಗಲಿದ್ದಾರೆ. ಇದು ನನಗೆ ಅತೀವ ದುಃಖ ತಂದಿದೆ” ಎಂದಿದ್ದಾರೆ. ಬಾಲಿವುಡ್‌ನ ಹಲವು ನಟ – ನಟಿಯರು, ತಂತ್ರಜ್ಞರು ಪುನೀತ್‌ರನ್ನು ನೆನಪು ಮಾಡಿಕೊಂಡಿದ್ದು, ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅನಿಲ್ ಕಪೂರ್, ಅಭಿಷೇಕ್ ಬಚ್ಚನ್‌, ಸಂಜಯ್ ದತ್‌, ಅಜಯ್ ದೇವಗನ್, ತಾಪಸಿ ಪನ್ನು, ರಿತೇಷ್ – ಜೆನಿಲಿಯಾ ದಂಪತಿ, ರಾಕುಲ್ ಪ್ರೀತ್‌ ಸಿಂಗ್‌, ಅದಾ ಶರ್ಮಾ, ಬೋನಿ ಕಪೂರ್‌, ಸುನೀಲ್ ಶೆಟ್ಟಿ, ಶ್ರೇಯಾ ಘೋಷಾಲ್‌, ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ಪುನೀತ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here