‘ಚಂದ್ರಮುಖಿ 2’ ತಮಿಳು ಸಿನಿಮಾದ ರಾಘವ ಲಾರೆನ್ಸ್‌ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಪಿ ವಾಸು ನಿರ್ದೇಶನದ ಈ ಸಿನಿಮಾದ ನಾಯಕಿ ಕಂಗನಾ ರನಾವತ್‌. ಆರಂಭದಿಂದಲೂ ಸುದ್ದಿಯಲ್ಲಿರುವ ಈ ಸಿನಿಮಾ ಸೆಪ್ಟೆಂಬರ್‌ 19ರಂದು ತೆರೆಕಾಣಲಿದೆ.

ರಾಘವ ಲಾರೆನ್ಸ್‌ ಮತ್ತು ಕಂಗನಾ ರನಾವತ್‌ ನಟನೆಯ ‘ಚಂದ್ರಮುಖಿ 2’ ಸಿನಿಮಾದ ನೂತನ ಲುಕ್‌ ಬಿಡುಗಡೆಯಾಗಿದೆ. ಚಿತ್ರದ ಹೀರೋ ರಾಘವ ಲಾರೆನ್ಸ್‌ ಅವರ ವೆಟ್ಟೈಯನ್‌ ರಾಜನ ಆಕರ್ಷಕ ಫಸ್ಟ್‌ಲುಕ್‌ ಪೋಸ್ಟರನ್ನು ನಟ ರಜನೀಕಾಂತ್‌ ಇಂದು ರಿಲೀಸ್‌ ಮಾಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪೋಸ್ಟರ್ ಹಂಚಿಕೊಂಡ ನಟ ರಾಘವ, ‘ವೆಟ್ಟೈಯನ್ ರಾಜನ ಫಸ್ಟ್ ಲುಕ್ ಬಿಡುಗಡೆ ಮಾಡಿದ ತಲೈವರ್, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಧನ್ಯವಾದಗಳು. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ’ ಎಂದು ಟ್ವೀಟ್‌ ಮಾಡಿದ್ದಾರೆ. 2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ʼಚಂದ್ರಮುಖಿʼ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್ ಲೀಸ್ಟ್ ಸೇರಿತ್ತು. 18 ವರ್ಷಗಳ ಬಳಿಕ ಚಂದ್ರಮುಖಿ ಸೀಕ್ವೆಲ್ ಬರುತ್ತಿದ್ದು, ನಿರೀಕ್ಷೆ ಹೆಚ್ಚಿದೆ.

ಚಿತ್ರದಲ್ಲಿ ನಟ ರಾಘವ ಲಾರೆನ್ಸ್ ‘ರಾಜಾ ವೆಟ್ಟೈಯನ್’ ಪಾತ್ರದಲ್ಲಿ ದುಷ್ಟ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ (ಚಂದ್ರಮುಖಿ) ಮೊದಲ ಭಾಗದಲ್ಲಿ ಹಿರಿಯ ನಟ ರಜನೀಕಾಂತ್ ನಿರ್ವಹಿಸಿದ ಇದೇ ಪಾತ್ರವನ್ನು ಭಾಗ ಎರಡರಲ್ಲಿ ಲಾರೆನ್ಸ್‌ ನಿಭಾಯಿಸುತ್ತಿದ್ದಾರೆ. ಪೋಸ್ಟರ್‌ನಲ್ಲಿ, ‘ರಾಜಾ ವೆಟ್ಟೈಯನ್’ ಅರಮನೆ ಪ್ರಾಂಗಣದ ಮೆಟ್ಟಿಲುಗಳಿಂದ ಇಳಿಯುತ್ತಾ ಕಪಟ ನಗೆ ಬೀರಿರುವುದನ್ನು ಕಾಣಬಹುದು. ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಸುಭಾಷ್‌ ಕರಣ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಸಂಗೀತ, ಆರ್ ‌ಡಿ ರಾಜಶೇಖರ್‌ ಛಾಯಾಗ್ರಹಣ, ಆಂಥೋನಿ ಸಂಕಲನ ಚಿತ್ರಕ್ಕಿದೆ. ಲಕ್ಷ್ಮಿ ಮೆನನ್‌, ಮಹಿಮಾ ನಂಬಿಯಾರ್‌, ರಾಧಿಕಾ ಶರತ್‌, ಸುರೇಶ್‌ ಮೆನನ್‌ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದೇ ಸೆಪ್ಟೆಂಬರ್‌ 19ರಂದು ಮೂಲ ತಮಿಳು ಸೇರಿದಂತೆ ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಲಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

Previous article‘ಬಿಗ್‌ ಬುಲ್‌’ ಫಸ್ಟ್‌ಲುಕ್‌ | ‘ಡಬಲ್‌ ಇಸ್ಮಾರ್ಟ್‌’ ತೆಲುಗು ಸಿನಿಮಾದಲ್ಲಿ ಸಂಜಯ್‌ ದತ್‌
Next article‘ತಾಲಿ’ ಟ್ರೈಲರ್‌ | ಸುಶ್ಮಿತಾ ಸೇನ್‌ ಬಯೋಪಿಕ್‌ ಸರಣಿ ಆಗಸ್ಟ್‌ 15ರಿಂದ JioCinemaದಲ್ಲಿ

LEAVE A REPLY

Connect with

Please enter your comment!
Please enter your name here