ಪುನೀತ್ ರಾಜಕುಮಾರ್ ಅವರಿಗೆ ಮಂಸೋರೆ ‘ಮಿಷನ್ ಕೊಲಂಬಸ್’ ಸಿನಿಮಾ ನಿರ್ದೇಶಿಸಬೇಕೆಂದಿದ್ದರು. ಟಿ.ಕೆ.ದಯಾನಂದ್ ಅವರ ಸ್ಪೈ ಥ್ರಿಲ್ಲರ್ ಕತೆಯಿದು. ತಮ್ಮ ಸಿನಿಮಾ ಕನಸಾಗೇ ಉಳಿಯಿತು ಎಂದು ಮಂಸೋರೆ ನೊಂದುಕೊಳ್ಳುತ್ತಾರೆ.
‘ಮಿಷನ್ ಕೊಲಂಬಸ್’ – ಪುನೀತ್ ರಾಜಕುಮಾರ್ ಅವರನ್ನು ಗಮನದಲ್ಲಿಟ್ಟುಕೊಂಡು ಟಿ.ಕೆ.ದಯಾನಂದ್ ಹೆಣೆದಿದ್ದ ಕತೆ. ಈ ಕತೆಗೆ ಮಂಸೋರೆ, ವೀರು ಮಲ್ಲಣ್ಣ ಮತ್ತು ಕತೆ ಬರೆದ ದಯಾನಂದ್ ಮೂವರೂ ಸೇರಿ ಚಿತ್ರಕಥೆಯನ್ನೂ ಸಿದ್ಧಪಡಿಸಿದ್ದರು. ತುಂಬಾ ಪ್ರೀತಿಯಿಂದ ಸರವಣ ಕುಮಾರ್ ಅವರಿಂದ ಪೋಸ್ಟರ್ ಕೂಡ ಡಿಸೈನ್ ಮಾಡಿಸಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿ, ಪುನೀತ್ ಅವರ ಕಾಲ್‌ಶೀಟ್ ಸಿಕ್ಕಿದ್ದಿದ್ದರೆ ಈ ಸಿನಿಮಾ ಮೂರು ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ತಮ್ಮ ಸಿನಿಮಾದ ಹೀರೋ ಅಗಲಿಕೆಯ ಸಂಕಟದಲ್ಲಿರುವ ಮಂಸೋರೆ ಈ ಬಗ್ಗೆ ತುಂಬಾ ನೊಂದು ಮಾತನಾಡುತ್ತಾರೆ.
“ಇದು ಪುನೀತ್ ಅವರಿಗೆಂದೇ ಮಾಡಿಕೊಂಡಿದ್ದ ಸ್ಕ್ರಿಪ್ಟ್. ಸ್ಪೈ ಥ್ರಿಲ್ಲರ್ ಜಾನರ್. 2016ರಲ್ಲೇ ಚಿತ್ರಕಥೆ ಸಿದ್ಧಪಡಿಸಿದ್ದೆವು. ಒಮ್ಮೆ ಪುನೀತ್ ಸರ್ ತಮ್ಮ ಪಿಆರ್‌ಕೆ ಬ್ಯಾನರ್‌ಗೆ ಆಂಥಾಲಜಿ ಸಿನಿಮಾ ಮಾಡುವ ಬಗ್ಗೆ ಮಾತನಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದರು. ಆಗ ನಮ್ಮ ಮಹತ್ವಾಕಾಂಕ್ಷೆಯ ಸಿನಿಮಾ ಬಗ್ಗೆ ಚರ್ಚಿಸಿದ್ದೆವು. ‘ಮಾಡೋಣ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು’ ಎಂದಿದ್ದರು. ಈಗ ಅವರೇ ನಮ್ಮನ್ನು ಬಿಟ್ಟು ಹೊರಟರು” ಎಂದು ದುಃಖಿಸುತ್ತಾರೆ ಮಂಸೋರೆ. ಕಳೆದ ವರ್ಷ ನವೆಂಬರ್ 2ರಂದು ಮಂಸೋರೆ ನಿರ್ದೇಶನದ ‘ಆಕ್ಟ್ 1978’ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ಪುನೀತ್ ರಾಜಕುಮಾರ್ ಟ್ರೈಲರ್ ರಿಲೀಸ್ ಮಾಡಿ, ಬೆನ್ನು ತಟ್ಟಿ ಪ್ರೊಮೋಷನ್‌ಗೆ ನೆರವಾಗಿದ್ದರು. ಇದಾಗಿ ನಾಡಿದ್ದಿಗೆ ಒಂದು ವರ್ಷ. “ಆಕ್ಟ್ 1978 ಸಿನಿಮಾ ಯಶಸ್ಸಿನ ಜೊತೆಗೆ ಸಾಕಷ್ಟು ದುಃಖವನ್ನೂ ಬಿಟ್ಟುಹೋಗಿದೆ. ಕೆಲವು ತಿಂಗಳುಗಳ ಅಂತರಗಳಲ್ಲಿ ನನ್ನ ಸಿನಿಮಾದ ಆಪರೇಟೀವ್ ಕ್ಯಾಮರಾಮನ್ ರಾಜು ಶಿರಾಳಕೊಪ್ಪ, ಆನಂತರ ಆತ್ಮೀಯ ಗೆಳೆಯ – ನಟ ವಿಜಯ್, ನಟ – ಚಿತ್ರಕಲಾವಿದ ಚನ್ನಕೇಶವ ಸರ್ ತೀರಿಕೊಂಡರು. ಈಗ ನಮ್ಮ ಸಿನಿಮಾ ಮೆಚ್ಚಿಕೊಂಡು ಬೆನ್ನು ತಟ್ಟಿದ್ದ, ಮುಂದೆ ನಮ್ಮ ಮಹತ್ವಾಕಾಂಕ್ಷೆಯ ಸಿನಿಮಾದಲ್ಲಿ ನಟಿಸಬೇಕಿದ್ದ ಪುನೀತ್ ಸರ್ ಅಗಲಿದ್ದಾರೆ” ಎಂದು ಮಂಸೋರೆ ನೊಂದುಕೊಳ್ಳುತ್ತಾರೆ.