‘KGF’ ಖ್ಯಾತಿಯ ಪ್ರಶಾಂತ್ ನೀಲ್‌ ನಿರ್ದೇಶನದಲ್ಲಿ ಮಲಯಾಳಂ ನಟ ಪೃಥ್ವಿರಾಜ್‌ ನಟಿಸುವ ಬಗ್ಗೆ ವದಂತಿಗಳಿದ್ದವು. ತಮ್ಮ ಚಿತ್ರದಲ್ಲಿ ಪೃಥ್ವಿರಾಜ್‌ ನಟಿಸುತ್ತಿರುವ ಸುದ್ದಿಯನ್ನು ‘ಸಲಾರ್‌’ ಹೀರೋ ಪ್ರಭಾಸ್‌ ಖಚಿತಪಡಿಸಿದ್ದಾರೆ.

ನಟ ಪ್ರಭಾಸ್‌ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ಕನ್ನಡ – ಹಿಂದಿ ದ್ವಿಭಾಷಾ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಈ ಸಿನಿಮಾ ಪ್ರೊಮೋಷನ್‌ಗೆ ಕೇರಳಕ್ಕೆ ತೆರಳಿದ್ದ ಪ್ರಭಾಸ್‌ ತಮ್ಮ ‘ಸಲಾರ್‌’ ಸಿನಿಮಾ ಕುರಿತು ಮಾತನಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಮಲಯಾಳಂ ಜನಪ್ರಿಯ ನಟ ಪೃಥ್ವಿರಾಜ್‌ ನಟಿಸುತ್ತಾರೆ ಎನ್ನಲಾಗಿತ್ತು. ಚಿತ್ರತಂಡ ಈ ಸುದ್ದಿಯನ್ನು ಗೋಪ್ಯವಾಗಿಟ್ಟಿತ್ತು. ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಪ್ರಭಾಸ್‌ ಅವರು ಪೃಥ್ವಿರಾಜ್‌ ‘ಸಲಾರ್‌’ ತಂಡದಲ್ಲಿರುವ ವಿಷಯ ಬಹಿರಂಗಪಡಿಸಿದ್ದಾರೆ. “ಪೃಥ್ವಿರಾಜ್‌ ಚಿತ್ರದಲ್ಲಿರುವುದು ನಮ್ಮ ಅದೃಷ್ಟ. ಅವರು ನಟಿಸಲು ಒಪ್ಪಿದ್ದು ಚಿತ್ರತಂಡದ ಎಲ್ಲರಿಗೂ ಖುಷಿ ತಂದಿದೆ” ಎಂದಿದ್ದಾರೆ ಪ್ರಭಾಸ್‌.

‘KGF’ನಂತೆ ‘ಸಲಾರ್‌’ ಚಿತ್ರವೂ ಎರಡು ಪಾರ್ಟ್‌ಗಳಲ್ಲಿ ತಯಾರಾಗಲಿದೆ ಎನ್ನಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ಪ್ರಭಾಸ್‌, “ಇದು ಪ್ಯಾನ್‌ ಇಂಡಿಯಾ ಚಿತ್ರವಾಗಲಿದ್ದು, ನನ್ನ ಪಾತ್ರ ತುಂಬಾ ವಯಲೆಂಟ್‌ ಆಗಿರುತ್ತದೆ. ಇಂಥದ್ದೊಂದು ಪಾತ್ರವನ್ನು ಹಿಂದೆ ನಾನು ನಿಭಾಯಿಸಿಲ್ಲ” ಎಂದಿದ್ದಾರೆ. ಹಾಗೆ ನೋಡಿದರೆ ‘ಸಲಾರ್‌’ ಚಿತ್ರವನ್ನು 2022ರ ಏಪ್ರಿಲ್‌ 14ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಘೋಷಿಸಿದ್ದರು. ಕೋವಿಡ್‌ನಿಂದಾಗಿ ಎಲ್ಲಾ ಲೆಕ್ಕಾಚಾರಗಳೂ ತಪ್ಪಾದವು. ಈಗ ಅದೇ ದಿನಾಂಕದಂದು ಪ್ರಶಾಂತ್‌ ನೀಲ್‌ ತಮ್ಮ ‘KGF2’ ಸಿನಿಮಾ ತೆರೆಗೆ ತರುತ್ತಿದ್ದಾರೆ. ಇನ್ನು ಪ್ರಭಾಸ್‌ರ ‘ರಾಧೆ ಶ್ಯಾಮ್‌’ ಈ ವಾರ ತೆರೆಕಾಣುತ್ತಿದೆ. ರಾಧಾಕೃಷ್ಣ ಕುಮಾರ್‌ ನಿರ್ದೇಶನದ ಚಿತ್ರದಲ್ಲಿ 70ರ ದಶಕದ ಕತೆ ಇದೆ. ಸಚಿನ್‌ ಖೇಡೇಕರ್‌, ಸತ್ಯರಾಜ್‌, ಭಾಗ್ಯಶ್ರೀ, ಮುರಳಿ ಶರ್ಮಾ, ಕುನಾಲ್‌ ರಾಯ್‌ ಕಪೂರ್‌ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Previous articleವೀಡಿಯೋ ಸಾಂಗ್‌ | ‘ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ
Next articleಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

LEAVE A REPLY

Connect with

Please enter your comment!
Please enter your name here