ಮೊನ್ನೆ ಅಗಲಿದ ಪುನೀತ್ ರಾಜಕುಮಾರ್ ಅಂತ್ಯಸಂಸ್ಕಾರ ಇಂದು ಬೆಳಗ್ಗೆ ನೆರವೇರಿತು. ಸಕಲ ಸರ್ಕಾರಿ ಗೌರವಗಳು, ವಿಧಿ – ವಿಧಾನಗಳೊಂದಿಗೆ ದುಃಖತಪ್ತ ಕುಟುಂಬಸ್ಥರು, ಅಭಿಮಾನಿಗಳು ‘ಅಪ್ಪು’ನನ್ನು ಕಳುಹಿಸಿಕೊಟ್ಟರು.

ಕಂಠೀರವ ಸ್ಟುಡಿಯೋದಲ್ಲಿ ಇಂದು ಬೆಳಗ್ಗೆ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಗಳ ಪಕ್ಕ ಪುನೀತ್‌ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರವಗಳು, ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ದುಃಖತಪ್ತ ಮನಸ್ಸುಗಳ ಮಧ್ಯೆ ಎಲ್ಲರ ಪ್ರೀತಿಯ ಅಪ್ಪು ಅವರನ್ನು ಕಳುಹಿಸಿಕೊಡಲಾಯ್ತು. ಕಂಠೀರವ ಸ್ಟೇಡಿಯಂನಿಂದ ಅಂತಿಮ ಯಾತ್ರೆ ಮೂಲಕ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತರಲಾಯ್ತು. ಹಾದಿಯುದ್ದಕ್ಕೂ ಜನರು ಅಗಲಿದ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ವಿದಾಯದ ಸೂಚಕವಾಗಿ ಪೊಲೀಸರು ಮೂರು ಸುತ್ತು ತೋಪು ಹಾರಿಸಿ ಸರ್ಕಾರದ ಗೌರವ ಸಲ್ಲಿಸಿದರು. ಪುನೀತ್‌ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್‌ ಪತ್ನಿ ಅಶ್ವಿನಿ ಅವರಿಗೆ ಹಸ್ತಾಂತರಿಸಿದರು. ನಂತರ ಕುಟುಂಬದವರಿಗೆ ವಿಧಿ – ವಿಧಾನಗಳನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಯ್ತು. ಚಿನ್ನೇಗೌಡರು ಮತ್ತು ನಟ ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ರಾಜಕುಮಾರ್‌ ಅಂತಿಮ ವಿಧಿ – ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಸ್ಟುಡಿಯೋ ಹೊರಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ‘ಅಪ್ಪು ಅಮರ’ ಎಂದು ಘೋಷಣೆ ಕೂಗುತ್ತಿದ್ದರು. ಭಾರವಾದ ಹೃದಯಗಳ ಮಧ್ಯೆ ಕನ್ನಡಿಗರ ಪ್ರೀತಿಯ ಅಪ್ಪು ಬಾರದೂರಿಗೆ ಪಯಣ ಬೆಳೆಸಿದರು.

LEAVE A REPLY

Connect with

Please enter your comment!
Please enter your name here