ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಸಿನಿಮಾಕ್ಷೇತ್ರದಲ್ಲಿ ನಟ ದೇವರಾಜ್‌ ಅವರಿಗೆ ಈ ಗೌರವ ಸಂದಿದೆ. ಹವ್ಯಾಸಿ ರಂಗಭೂಮಿ ಹಿನ್ನೆಲೆಯ ದೇವರಾಜ್‌ ಮೂರೂವರೆ ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ ದೇವರಾಜ್ ಅವರಿಗೆ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ನಟ ಪುನೀತ್ ರಾಜಕುಮಾರ್ ಅವರ ನಿಧನದಿಂದಾಗಿ ರಾಜ್ಯೋತ್ಸವ ಪ್ರಶಸ್ತಿಗಳ ಘೋಷಣೆ ವಿಳಂಬವಾಗಿತ್ತು. ಇಂದು ರಾಜ್ಯ ಸರ್ಕಾರ ವಿವಿಧ ಕ್ಷೇತ್ರಗಳ 66 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಚಲನಚಿತ್ರ ಕ್ಷೇತ್ರಕ್ಕೆ ಒಂದು ಪ್ರಶಸ್ತಿ ನೀಡಲಾಗಿದ್ದು, ಈ ಗೌರವ ದೇವರಾಜ್ ಅವರಿಗೆ ಸಂದಿದೆ. “ಸುಮಾರು ಮೂರೂವರೆ ದಶಕಗಳಿಂದ ಸಿನಿಮಾರಂಗದಲ್ಲಿದ್ದೇನೆ. ಖಂಡಿತ ನನಗೆ ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಇದು ಅಚ್ಚರಿ, ಸಂತೋಷ ತಂದಿದೆ. ನನ್ನ ಸೇವೆ ಪರಿಗಣಿಸಿರುವ ಸರ್ಕಾರಕ್ಕೆ ಮತ್ತು ಈ ಗೌರವಕ್ಕೆ ಕಾರಣರಾಗಿರುವ ಸಿನಿಪ್ರೇಮಿಗಳಿಗೆ ಧನ್ಯವಾದಗಳು” ಎಂದರು ದೇವರಾಜ್‌.

ಬೆಂಗಳೂರಿನವರಾದ ದೇವರಾಜ್‌ ಹವ್ಯಾಸಿ ರಂಗಭೂಮಿ ಮೂಲಕ ನಟನೆಗೆ ಪರಿಚಯವಾದವರು. ಬಿ.ಜಯಶ್ರೀ ಅವರ ‘ಸ್ಪಂದನ’ ಮತ್ತು ನಟ ಶಂಕರ್‌ನಾಗ್ ಅವರ ‘ಸಂಕೇತ್‌’ ರಂಗತಂಡಗಳಲ್ಲಿ ಸಕ್ರಿಯರಾಗಿದ್ದರು. ಅವರು ಬೆಳ್ಳಿತೆರೆಗೆ ಪರಿಚಯವಾಗಿದ್ದು ‘ತ್ರಿಶೂಲ’ ಚಿತ್ರದೊಂದಿಗೆ. ಕಾರಣಾಂತರಗಳಿಂದ ಈ ಸಿನಿಮಾ ತೆರೆಕಾಣಲಿಲ್ಲ. ‘27 ಮಾವಳ್ಳಿ ಸರ್ಕಲ್‌’ (1986) ಅವರ ಮೊದಲ ಚಿತ್ರವಾಯ್ತು. ಅಲ್ಲಿಂದ ಮುಂದೆ ಖಳ, ನಾಯಕನಟ, ಪೋಷಕ ಕಲಾವಿದನಾಗಿ ದೇವರಾಜ್‌ ನಟಿಸುತ್ತಾ ಬಂದಿದ್ದಾರೆ. ದೇವರಾಜ್‌ ಅವರಿಗೆ ಅತ್ಯುತ್ತಮ ಪೋಷಕ ನಟ (ಆಗುಂತಕ), ಅತ್ಯುತ್ತಮ ನಟ (ವೀರಪ್ಪನ್‌) ರಾಜ್ಯಪ್ರಶಸ್ತಿ ಸಂದಿವೆ. ಹಲವಾರು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here