ಇಂದು ಕನ್ನಡ ಚಿತ್ರರಂಗ ಕಂಡ ಮೇರು ನಟ ನರಸಿಂಹರಾಜು ಅವರ ಜನ್ಮಶತಮಾನೋತ್ಸವ (ಜನನ 24, ಜುಲೈ 1923). ತಮ್ಮ ಹೆಸರಿನಲ್ಲಿರುವ ರಾಜನಿಗೆ ತಕ್ಕಂತೆ ಬಾಳಿದ ನರಸಿಂಹ ರಾಜು ಕನ್ನಡದಲ್ಲಿ ಶತಚಿತ್ರ ಪೂರೈಸಿದ ಮೊದಲ ನಟ. ಅವರಂತಹ ಕಲಾವಿದ ಸಿಕ್ಕಿದ್ದು ಕನ್ನಡ ಚಿತ್ರರಂಗದ ಅದೃಷ್ಟ, ಹಾಗೆ ಅವರನ್ನು ಬೇಗ ಕಳೆದುಕೊಂಡಿದ್ದು ನಮ್ಮ ದುರಾದೃಷ್ಟ.

ಇವತ್ತು ಕನ್ನಡ ಚಿತ್ರರಂಗ ಕಂಡ ಅಪರೂಪದ ಕಲಾವಿದ ನರಸಿಂಹ ರಾಜು ಅವರ ಜನ್ಮ ಶತಮಾನೋತ್ಸವ (ಜನನ 24 ಜುಲೈ 1923). ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ ಬಿ ಮಲ್ಲಪ್ಪನವರ ಶ್ರೀಚಂದ್ರಮೌಳೀಶ್ವರ ನಾಟಕ ಸಭಾದಲ್ಲಿ ಬಾಲಕಲಾವಿದನಾಗಿ ಸೇರಿಕೊಂಡ ನರಸಿಂಹ ರಾಜು ಅವರಿಗೆ ಅಲ್ಲಿಯೇ ಬದುಕಿನ ಶಿಕ್ಷಣವೂ ಆರಂಭವಾಯಿತು. ನರಸಿಂಹರಾಜು ಅವರು ಪೌರಾಣಿಕ ಪಾತ್ರಗಳನ್ನು – ವಿಶ್ವಾಮಿತ್ರ, ರಾಮ, ಕೆಲವೊಮ್ಮೆ ರಾವಣ, ಭರತ, ಇನ್ನು ಕೆಲವು ಸಲ ಲಕ್ಷ್ಮಿಯ ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಆಗಲೇ ಜನಪ್ರಿಯತೆ ಪಡೆದಿದ್ದ ‘ಬೇಡರ ಕಣ್ಣಪ್ಪ’ ನಾಟಕದಲ್ಲಿ ಅರ್ಚಕನ ಪುತ್ರ ಕಾಶಿಯ ಪಾತ್ರದಲ್ಲಿ ನರಸಿಂಹರಾಜು ತುಂಬಾ ಜನಪ್ರಿಯತೆ ಪಡೆದರು.

‘ಶ್ರೀ ಚಂದ್ರಮೌಳೀಶ್ವರ ನಾಟಕ ಸಭಾ’, ‘ಎಡತೊರೆಯ ಕಂಪೆನಿ’, ‘ಹಿರಣ್ಣಯ್ಯನವರ ಮಿತ್ರಮಂಡಲಿ’, ‘ಭಾರತ ಲಲಿತ ಕಲಾ ಸಂಘ’, ಬೇಲೂರಿನ ‘ಗುಂಡಾ ಜೋಯಿಸರ ಕಂಪೆನಿ’, ಗುಬ್ಬಿಯ ‘ಚೆನ್ನಬಸವೇಶ್ವರ ನಾಟಕ ಕಂಪನಿ’ಯ ನಾಟಕಗಳಲ್ಲಿ ತಮ್ಮ ಬಣ್ಣದ ಬದುಕಿನ ಆರಂಭದ 27 ವರ್ಷಗಳನ್ನು ನರಸಿಂಹರಾಜು ಕಳೆದಿದ್ದರು. ಚಿತ್ರರಂಗಕ್ಕೆ ನರಸಿಂಹರಾಜು ಅವರು ಬಂದಾಗ ಇನ್ನೂ ಕತೆ ಹೇಳುವಲ್ಲಿ ಟ್ರ್ಯಾಕ್ ಸಿಸ್ಟಮ್ ಇತ್ತು. ಹಾಸ್ಯಕ್ಕೆ ಪ್ರತ್ಯೇಕ ಟ್ರ್ಯಾಕ್ ಇರುತ್ತಿತ್ತು. ಇದು ಒಂದು ರೀತಿಯಲ್ಲಿ ನರಸಿಂಹ ರಾಜು ಅವರ ಅಭಿನಯದ ಸಾಧ್ಯತೆಯನ್ನು ಸೀಮಿತಗೊಳಿಸಿತು. ಅವರಿಗೆ ದೊರಕಿದ ಅಪಾರ ಜನಪ್ರಿಯತೆ ಬಾಲಕೃಷ್ಣ ಅಥವಾ ದಿನೇಶ್ ಅವರಂತಹ ಹಾಸ್ಯಲೇಪಿತ ಖಳಪಾತ್ರಗಳು ದೊರಕದಂತೆ ಮಾಡಿತು. ಆದರೆ ನರಸಿಂಹ ರಾಜು ತಮಗೆ ದೊರಕಿದ ಸೀಮಿತ ಅವಕಾಶಗಳಲ್ಲಿಯೇ ತಮ್ಮ ರೇಂಜ್ ತೋರಿಸಿದ್ದರು.

ಅವರ ನೂರನೆಯ ಚಿತ್ರ ‘ನಕ್ಕರದೇ ಸ್ವರ್ಗ’ ಬ್ಲಾಕ್ ಕಾಮಿಡಿಗೆ ಉತ್ತಮ ಮಾದರಿಯಾಗಿತ್ತು. ತಾವೇ ಚಿತ್ರ ನಿರ್ಮಿಸಿದಾಗ ನರಸಿಂಹ ರಾಜು ‘ಪ್ರೊಫೆಸರ್ ಹುಚ್ಚೂರಾಯ’ದಲ್ಲಿ ಇದೇ ಮಾದರಿ ಬಳಸಿದರು. ‘ಸತ್ಯ ಹರಿಶ್ಚಂದ್ರ’ದಲ್ಲಿ ನಕ್ಷತ್ರಿಕನಾಗಿ ‘ಶ್ರೀಕೃಷ್ಣದೇವರಾಯ’ದಲ್ಲಿ ತೆನಾಲಿ ರಾಮಕೃಷ್ಣನಾಗಿ ಜನಜನಿತವಾಗಿದ್ದ ಈ ಪಾತ್ರಗಳ ಸಾಧ್ಯತೆಯನ್ನೇ ವಿಸ್ತರಿಸಿದ್ದರು. ಅವರಿಗೆ ವಿಭಿನ್ನ ಪಾತ್ರಗಳು ದೊರಕಿದ ‘ಅಳಿಯ ಗೆಳೆಯ’, ‘ಸಾಕ್ಷಾತ್ಕಾರ’, ‘ಜಾತಕ ರತ್ನ ಗುಂಡಾಜೊಯಿಸ’ದಂತಹ ಚಿತ್ರಗಳು ಗೆಲ್ಲದೇ ಹೋಗಿದ್ದು ಇನ್ನೊಂದು ದುರಂತ. ಗೆದ್ದಿದ್ದರೆ ಬಹುಶಃ ಇನ್ನಷ್ಟು ಅಂತಹ ಪಾತ್ರಗಳು ಅವರಿಗೆ ದೊರಕುತ್ತಿದ್ದವು. ನರಸಿಂಹ ರಾಜು ಅವರ ಹಾಡುಗಳಿಗೇ ವಿಶಿಷ್ಟ ಪರಂಪರೆ ಇದೆ. ‘ಬಾಳೊಂದು ಭಾವಗೀತೆ’, ‘ಭಾಮೆಯ ನೋಡಲು ತಾ ಬಂದ’ದಂತಹ ಸುಂದರ ಗೀತೆಗಳೂ ಕೂಡ ಈ ಸಾಲಿನಲ್ಲಿವೆ. ‘ಯಾರು ಯಾರು ನೀ ಯಾರು’ದಂತಹ ತುಂಟತನದ ಗೀತೆಗಳೂ ಇವೆ, ‘ಬೇಡ ನಂಬ ಬೇಡ’ದಂತಹ ಸೆಟೈರ್ ಗೀತೆಗಳೂ ಕೂಡ ಇವೆ. ನಾಯಕರಿಗೆ ಸಮನಾಗಿ ಹಾಡುಗಳನ್ನು ಪಡೆದ ಹಾಸ್ಯ ಕಲಾವಿದ ನರಸಿಂಹ ರಾಜು ಒಬ್ಬರೇ ಇರಬೇಕು.

ತಮ್ಮ ಹೆಸರಿನಲ್ಲಿರುವ ರಾಜನಿಗೆ ತಕ್ಕಂತೆ ಬಾಳಿದ ನರಸಿಂಹ ರಾಜು ಕನ್ನಡದಲ್ಲಿ ಶತಚಿತ್ರ ಪೂರೈಸಿದ ಮೊದಲ ನಟರು, ಕಾರು ಕೊಂಡುಕೊಂಡ, ಪೋನ್ ಹಾಕಿಸಿಕೊಂಡ, ಸ್ವಂತ ಮನೆ ಕಟ್ಟಿಸಿದ, ಆದಾಯ ತೆರಿಗೆ ಕಟ್ಟಿದ ಅಷ್ಟೇ ಏಕೆ ಅವರೇ ಒಂದು ಕಡೆ ಹೇಳಿ ಕೊಂಡಂತೆ ‘ಅದ್ಧೂರಿಯಾಗಿ ಮಗಳ ಮದುವೆ’ ಮಾಡಿದ ಮೊದಲ ಕನ್ನಡ ಕಲಾವಿದ. ‘ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ ನಗಲಾರೆ ಅಳುವೇ ಎಂದರೆ ಅದೇ ನಿನ್ನ ಕರ್ಮ’ ಎಂದು ತೆರೆಯ ಮೇಲೆ ಹಾಡಿದ ನರಸಿಂಹ ರಾಜು ವಾಸ್ತವದಲ್ಲಿ ದು:ಖದ ಸಾಗರವನ್ನೇ ಎದೆಯಲ್ಲಿ ಹೊಂದಿದ್ದರು. ಎದೆಯೆತ್ತರ ಬಂದಿದ್ದ ಆತ್ಮೀಯ ಮಗ ಶ್ರೀಕಾಂತನ ಸಾವು ಅವರನ್ನು ಕಾಡುತ್ತಿತ್ತು. ಆದರೆ ಅದನ್ನು ಅವರು ಎಂದಿಗೂ ಹೊರ ಜಗತ್ತಿಗೆ ತೋರಗೊಡಲಿಲ್ಲ.

ಒಂದು ರೀತಿಯಲ್ಲಿ ಇಚ್ಚಾಮರಣಿಯಂತೆ ಜಗತ್ತಿಗೆ ವಿದಾಯ ಹೇಳಿದ ನರಸಿಂಹರಾಜು ತಮ್ಮ ಕೊನೆಯ ಚಿತ್ರ ‘ಪ್ರೀತಿ ಮಾಡು ತಮಾಷೆ ನೋಡು’ ಡಬ್ಬಿಂಗ್ ಚಾಮುಂಡೇಶ್ವರಿಯಲ್ಲಿ ನಡೆದಾಗ ನಿರ್ಮಾಪಕ ದ್ವಾರಕೀಶ್ ಅವರಿಗೆ ಎರಡೆರಡು ಸಲ ‘ಇನ್ನೇನಾದರೂ ಕೆಲಸ ಬಾಕಿ ಉಳಿದಿದ್ದರೆ ನೋಡು, ನಾನು ಮತ್ತೆ ಸಿಕ್ಕುವುದಲ್ಲಿ’ ಎಂದು ಎರಡೆರಡು ಸಲ ಒತ್ತಿ ಒತ್ತಿ ಹೇಳಿದ್ದರು. ಆಗ ಸ್ಕೈಲಾಬ್ ಉಪಗ್ರಹ ಬೀಳುತ್ತದೆ ಎನ್ನುವ ಸುದ್ದಿ ಹಬ್ಬಿದ್ದ ಕಾಲ. ‘ಇವತ್ತು ಎನ್ನುವುದು ಮಾತ್ರ ನಿಜ ನಾಳೆ ಏನಾಗುವದೋ ಗೊತ್ತಿಲ್ಲ’ ಎಂದು ಮಕ್ಕಳು, ಮೊಮ್ಮಕ್ಕಳು ಹೀಗೆ ತಮ್ಮ ಕುಟುಂಬದರನ್ನೆಲ್ಲಾ 1979ರ ಜುಲೈ 10ರಂದು ಕರೆದು ಸಂತೋಷದಿಂದ ದಿನ ಕಳೆದಿದ್ದರು. ಮಲಗಿದವರು ಬೆಳಿಗ್ಗೆ ಏಳಲಿಲ್ಲ. ಆಗ ಅವರ ವಯಸ್ಸು ಕೇವಲ 56. ನರಸಿಂಹ ರಾಜು ಅವರಂತಹ ಕಲಾವಿದ ಸಿಕ್ಕಿದ್ದು ಕನ್ನಡ ಚಿತ್ರರಂಗದ ಅದೃಷ್ಟ, ಹಾಗೆ ಅವರನ್ನು ಬೇಗ ಕಳೆದುಕೊಂಡಿದ್ದು ನಮ್ಮ ದುರಾದೃಷ್ಟ.

ಜನ್ಮಶತಮಾನೋತ್ಸವ | ಕಳೆದ ವರ್ಷ ಇದೇ ಹೊತ್ತಿನ ಸುಮಾರಿಗೆ ನರಸಿಂಹ ರಾಜು ಅವರ ಕುಟುಂಬದ ಜೊತೆಗೆ ಜನ್ಮಶತಮಾನೋತ್ಸವವನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಚರ್ಚೆ ನಡೆಸಿದ್ದೆ. ಆಗ ಮತ್ತು ಇಡೀ ವರ್ಷ ಮುಂದೆ ನಡೆದ ಚರ್ಚೆಗಳಲ್ಲಿ ಕುಟುಂಬದ ಎಲ್ಲರೂ ಅದರಲ್ಲಿಯೂ ದೂರದರ್ಶನದಲ್ಲಿ ‘ಹಾಸ್ಯ ಚಕ್ರವರ್ತಿ’ ಕಾರ್ಯಕ್ರಮದ ಮೂಲಕ ದಾಖಲೆ ಮಾಡಿದ ಸುಧಾ ನರಸಿಂಹರಾಜು ತೋರಿಸಿದ ಉತ್ಸಾಹ ಮಹತ್ವದ್ದು. ಒಂದು ವರ್ಷದಲ್ಲಿ ನಾವು ಯೋಜಿಸಿದ ಕೆಲವು ಕೆಲಸಗಳು ಆಗಿವೆ. ನಾಡಿನೆಲ್ಲೆಡೆ ನರಸಿಂಹ ರಾಜು ಸ್ಮರಣೆ ಕಾರ್ಯಕ್ರಮಗಳು ನಡೆದಿವೆ. ಸುಧಾ ನರಸಿಂಹ ರಾಜು ಸಂದರ್ಶನ ಮತ್ತು ನಾನು ಪ್ರತ್ಯೇಕವಾಗಿ ರೂಪಿಸಿದ ಮಾಲಿಕೆ ಮೂಲಕ ಹನ್ನೆರಡು ಕಂತುಗಳನ್ನು ನರಸಿಂಹ ರಾಜು ಅವರ ಜೀವನ ಸಾಧನೆಗಳು ದಾಖಲಾಗಿವೆ. ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನರಸಿಂಹ ರಾಜು ಅವರ ಸ್ಮರಣೆ ನಡೆದಿದೆ. ತಿಪಟೂರಿನಲ್ಲಿ ನರಸಿಂಹ ರಾಜು ಅವರ ಹೆಸರಿನ ರಂಗಮಂದಿರ ವಿಶಿಷ್ಟವಾಗಿ ರೂಪುಗೊಂಡಿದೆ. ಇನ್ನು ಆಗದ ಕೆಲಸಗಳು ಕೆಲವಿದೆ. ನಾವು ಉದ್ದೇಶಿಸಿದಂತೆ ನರಸಿಂಹ ರಾಜು ಚಿತ್ರೋತ್ಸವ ನಡೆದಿಲ್ಲ. ಅವರ ಕುರಿತ ಸಾಕ್ಷ್ಯಚಿತ್ರ ಸಿದ್ದವಾಗಿಲ್ಲ. ಅವರ ಜೀವನ ಸಾಧನೆ ಬಿಂಬಿಸುವ ಪೂರ್ಣಪ್ರಮಾಣದ ಪುಸ್ತಕ ಇನ್ನೂ ರೂಪುಗೊಂಡಿಲ್ಲ. ಆದರೆ ಇವೆಲ್ಲದರ ಸಿದ್ದತೆ ನಡೆಯುತ್ತಿದೆ ಎನ್ನುವುದು ತೃಪ್ತಿ ನೀಡಿದ ಸಂಗತಿ.

LEAVE A REPLY

Connect with

Please enter your comment!
Please enter your name here