‘ಇನ್ಸೈಡ್ ಎಡ್ಜ್ 3’ ಡಿಸೆಂಬರ್ 3ರಿಂದ ಅಮೇಜಾನ್ ಪ್ರೈಮ್‍ನಲ್ಲಿ ಸ್ಟ್ರೀಮ್ ಆಗಲಿದೆ. ಕಾನಿಷ್ಕ್ ವರ್ಮಾ ಈ ಸರಣಿ ನಿರ್ದೇಶಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಓಬಿರಾಯ್ ಮುಖ್ಯ ಪಾತ್ರದಲ್ಲಿದ್ದು, ಕ್ರಿಕೆಟ್ ರಂಗದ ಹಗರಣಗಳು ಸರಣಿಯಲ್ಲಿ ಅನಾವರಣಗೊಳ್ಳಲಿವೆ.
‘ಇನ್ಸೈಡ್ ಎಡ್ಜ್ 3’ ಅಮೇಜಾನ್ ಪ್ರೈಮ್‍ನ ಭಾರತದ ಒರಿಜಿನಲ್ ಸೀರೀಸ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಸ್ಟ್ರೀಮ್ ಆಗಲಿದೆ. ಕ್ರಿಕೆಟ್ ಹಿನ್ನೆಲೆ ಇರುವ ಮೂರನೇ ಸೀರೀಸ್‍ನಲ್ಲಿ ಆಟದ ಹಿಂದಿನ ಕರಾಳ ಮುಖವನ್ನು ಹಿಡಿದಿಡಲಾಗಿದೆ. ಕ್ರಿಕೆಟ್‍ನ ಮತ್ತೊಂದು ಮುಖವಾದ ಹಣದಾಹ, ಪವರ್, ಖ್ಯಾತಿ ಮತ್ತು ಮೈಂಡ್‍ಗೇಮ್ ಕುರಿತಾದ ಚಿತ್ರಣ ಇಲ್ಲಿದೆ. ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ನಿರ್ಮಾಣದ ಹೊಣೆ ಹೊತ್ತಿದ್ದು, ಕರಣ್ ಅಂಶುಮಾನ್ ಚಿತ್ರಕಥೆ ಹೆಣೆದಿದ್ದಾರೆ. ‘ಇನ್ಸೈಡ್ ಎಡ್ಜ್ 3’ ‘ಕ್ರಿಕೆಟ್ ಆಟದ ಹಿಂದಿನ ಆಟ’ವನ್ನು ತೋರಿಸುತ್ತದೆ.
2017ರಲ್ಲಿ ಮೊದಲ ಸೀರೀಸ್ ಮೂಡಿಬಂದಿತ್ತು. ಕ್ರೀಡಾ ಕ್ಷೇತ್ರದಲ್ಲಾಗುವ ಫಿಕ್ಸಿಂಗ್, ಬೆಟ್ಟಿಂಗ್, ಡೋಪಿಂಗ್‍ಗಳ ಬಗ್ಗೆ ಹೇಳಿತ್ತು. ‘ಇನ್ಸೈಡ್ ಎಡ್ಜ್ 3’ ಕ್ರಿಕೆಟ್ ಆಟದಲ್ಲಿನ ಹಗರಣಗಳನ್ನು ಬಿಚ್ಚಿಡಲಿದೆ. ಚಿತ್ರತಂಡ ಹೇಳುವ ಪ್ರಕಾರ ಮೂರನೇ ಸೀರೀಸ್‍ನಲ್ಲಿ ಕುತೂಹಲಗಳ ಜೊತೆ ಟ್ವಿಸ್ಟ್ ಕೂಡ ಇದೆ. ಸೀರೀಸ್‍ನ ಎಪಿಸೋಡ್‍ಗಳು ನೋಡುಗರನ್ನು ಕೊನೆಯವರೆಗೂ ಹಿಡಿದಿಡುತ್ತವಂತೆ. ಈ ಮೊದಲ ಸರಣಿಯನ್ನು ಸ್ವೀಕರಿಸಿದಂತೆ ಮೂರನೇ ಸರಣಿಯನ್ನು ಕೂಡ ಜನ ಅಷ್ಟೇ ಕುತೂಹಲದಿಂದ ಸ್ವೀಕರಿಸುತ್ತಾರೆ ಎಂದು ನಿರ್ಮಾಪಕರು ಆಶಿಸಿದ್ದಾರೆ. ‘ಇನ್ಸೈಡ್ ಎಡ್ಜ್ 3’ರಲ್ಲಿ ವಿವೇಕ್ ಓಬಿರಾಯ್ ಜೊತೆ ನಟಿ ರಿಚಾ ಛಡ್ಡಾ ಮುಖ್ಯ ಪಾತ್ರದಲ್ಲಿದ್ದು, ತನುಜ್ ವಿರ್ವಾನಿ, ಸಪ್ನಾ ಪಬ್ಬಾ, ಅಕ್ಷಯ್ ಓಬಿರಾಯ್, ಸಿದ್ಧಾಂತ್ ಗುಪ್ತಾ, ಅಮಿತ್ ಸೈಲ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ‘ಇನ್ಸೈಡ್ ಎಡ್ಜ್ 3’ ಸೀರೀಸ್‍ನಲ್ಲಿ ಒಟ್ಟು 10 ಎಪಿಸೋಡ್‍ಗಳಿದ್ದು, ಡಿಸೆಂಬರ್ 3ರಂದು ಅಮೇಜಾನ್ ಪ್ರೈಮ್ ಸ್ಟ್ರೀಮ್ ಆಗಲಿದೆ.