ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ‘100’ ಚಿತ್ರವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೈಬರ್ ಕ್ರೈಂ ಸುತ್ತ ಹೆಣೆದಿರುವ ಕಥಾನಕದ ಸಿನಿಮಾ ಈ ವಾರ ತೆರೆಕಾಣುತ್ತಿದೆ.

ರಮೇಶ್ ಅರವಿಂದ್ ನಟಿಸಿ, ನಿರ್ದೇಶಿಸಿರುವ ಸೈಬರ್ ಕ್ರೈಂ ಕುರಿತ ವಿಶಿಷ್ಟ ಕತೆಯ ಸಿನಿಮಾ ‘100’ ಈ ವಾರ ತೆರೆಕಾಣುತ್ತಿದೆ. ಗೃಹಮಂತ್ರಿ ಅರಗ ಜ್ಞಾನೇಂದ್ರ ಅವರು ನಿನ್ನೆ ಈ ಸಿನಿಮಾ ವೀಕ್ಷಿಸಿ ಮೆಚ್ಚಿದ್ದಾರೆ. ಅವರೊಂದಿಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಸಿಓಡಿ ಡಿಜಿ ಅಧಿಕಾರಿಗಳು ಕೂಡ ಸಿನಿಮಾ ವೀಕ್ಷಿಸಿದರು. ‘100’ ಕುರಿತು ಮಾತನಾಡಿದ ಗೃಹಸಚಿವರು, “ಇಂದು ಯುವ ಪೀಳಿಗೆ ದಿನದ ಹೆಚ್ಚಿನ ಪಾಲು ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರುತ್ತದೆ. ಇದು ವರವಾಗಬೇಕೇ ಹೊರತು ಶಾಪವಾಗಕೂಡದು. ಮೈಮರೆತರೆ ಸೋಷಿಯಲ್ ಮೀಡಿಯಾದ ಸುಳಿಯಲ್ಲಿ ಏನೆಲ್ಲಾ ತೊಂದರೆಗಳು ಆಗುತ್ತವೆ ಎನ್ನುವುದನ್ನು ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಲಾಗಿದೆ. ಸಿನಿಮಾ ಮನರಂಜನೆಗೆ ಮಾತ್ರ ಸೀಮಿತವಲ್ಲ. ಅಪರಾಧ ಜಗತ್ತಿನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಕೂಡ ಸಹಕಾರಿ ಎನ್ನುವುದಕ್ಕೆ ಈ ಸಿನಿಮಾ ಉದಾಹರಣೆಯಾಗಿದೆ” ಎಂದಿದ್ದಾರೆ.

ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. “ಇಂದು ಮನೆಯಲ್ಲಿ ನಾಲ್ಕು ಜನರಿದ್ದರೆ ಎಲ್ಲರಲ್ಲೂ ಒಂದೊಂದು ಮೊಬೈಲ್ ಫೋನ್‌ಗಳಿರುತ್ತವೆ. ನಮ್ಮ ಮೊಬೈಲ್‌ಗಳು ಹೇಗೆಲ್ಲಾ ಸಂಕಷ್ಟ ತಂದೊಡ್ಡಬಹುದು? ಮೊಬೈಲ್‌ನಲ್ಲಿನ ನಮ್ಮ ವೈಯಕ್ತಿಕ ಡಾಟಾ ಹೇಗೆ ಸೈಬರ್‌ ಕ್ರಿಮಿನಲ್‌ಗಳ ಪಾಲಾಗುತ್ತದೆ? ಎನ್ನುವ ವಿಷಯಗಳನ್ನು ಚಿತ್ರದಲ್ಲಿ ಚರ್ಚಿಸಿದ್ದೇವೆ” ಎಂದು ನಟ, ನಿರ್ದೇಶಕ ರಮೇಶ್‌  ಚಿತ್ರದ ಬಗ್ಗೆ ವಿವರಣೆ ನೀಡುತ್ತಾರೆ. ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ಬೆಳವಾಡಿ, ಪೂರ್ಣ, ರಾಜು ತಾಳೀಕೋಟೆ, ಮಾಲತಿ ಸುಧೀರ್ ಅಭಿನಯಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಶ್ರೀನಿವಾಸ್ ಕಲಾಲ್ ಸಂಕಲನ ಚಿತ್ರಕ್ಕಿದೆ. ರಚಿತಾ ರಾಮ್ ಈ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಸಹೋದರಿಯ ಪಾತ್ರ ನಿರ್ವಹಿಸಿದ್ದಾರೆ.

LEAVE A REPLY

Connect with

Please enter your comment!
Please enter your name here