ಜಾಹ್ನವಿ ಕಪೂರ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ‘ಮಿಲಿ’ ಹಿಂದಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಮಲಯಾಳಂ ಥ್ರಿಲ್ಲರ್ ಸಿನಿಮಾ ‘ಹೆಲೆನ್‌’ ಹಿಂದಿ ಅವತರಣಿಕೆಯಿದು. ಪುತ್ರಿ ಜಾಹ್ನವಿಗಾಗಿ ಬೋನಿ ಕಪೂರ್‌ ನಿರ್ಮಿಸಿರುವ ಮೊದಲ ಚಿತ್ರವಿದು.

ಮುತ್ತುಕುಟ್ಟಿ ಕ್ಝೇವಿಯರ್‌ ನಿರ್ದೇಶನದಲ್ಲಿ ಜಾಹ್ನವಿ ಕಪೂರ್ ನಟಿಸಿರುವ ಸರ್ವೈವಲ್ ಥ್ರಿಲ್ಲರ್‌ ‘ಮಿಲಿ’ ಹಿಂದಿ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಇದೇ ನಿರ್ದೇಶಕರ ಯಶಸ್ವೀ ಮಲಯಾಳಂ ಸಿನಿಮಾ ‘ಹೆಲೆನ್‌’ ರೀಮೇಕಿದು. ಜಾಹ್ನವಿ ಜೊತೆ ಮನೋಜ್ ಪಹ್ವಾ, ಸನ್ನಿ ಕೌಶಾಲ್ ಇತರೆ ಪ್ರಮುಖ ತಾರಾಬಳಗದಲ್ಲಿದ್ದಾರೆ. ಶೂಟಿಂಗ್ ಸಂದರ್ಭದ ಕೆಲವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ಜಾಹ್ನವಿ ತಮಗಾಗಿ ಸಿನಿಮಾ ನಿರ್ಮಿಸಿದ ತಂದೆ ಬೋನಿ ಕಪೂರ್‌ರನ್ನು ಸ್ಮರಿಸಿದ್ದಾರೆ. “ಇದು ಅಪ್ಪ ನನಗಾಗಿ ನಿರ್ಮಿಸಿರುವ ಮೊದಲ ಸಿನಿಮಾ. ಇಲ್ಲಿಯವರೆಗೆ ಇತರರಿಗಾಗಿ ಅವರು ನಿರ್ಮಾಪಕರಾಗಿದ್ದು ನೋಡಿದ್ದೆ. ಈಗ ನನ್ನ ಸಿನಿಮಾದಲ್ಲಿ ನಿರ್ಮಾಪಕರನ್ನಾಗಿ ಹತ್ತಿರದಿಂದ ಅವರನ್ನು ನೋಡಲು ಸಾಧ್ಯವಾಯ್ತು. ಸಿನಿಮಾವನ್ನೇ ಜೀವಿಸುವ ಅವರ ಬದ್ಧತೆ ನನಗೆ ಮಾದರಿ” ಎಂದಿದ್ದಾರೆ ಜಾಹ್ನವಿ.

ಇದೇ ವರ್ಷ ಆಗಸ್ಟ್‌’ನಲ್ಲಿ ‘ಮಿಲಿ’ ಚಿತ್ರೀಕರಣ ಶುರುವಾಗಿತ್ತು. ಈ ವಿಶಿಷ್ಟ ಪಾತ್ರಕ್ಕಾಗಿ ತಾವು ಸಾಕಷ್ಟು ಹೋಮ್‌ವರ್ಕ್ ಮಾಡಬೇಕಾಯ್ತು ಎಂದು ಅವರು ಹೇಳಿಕೊಳ್ಳುತ್ತಾರೆ. “ಈ ಪಾತ್ರದಲ್ಲಿ ನಟಿಸುವಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ನನಗೆ ತುಂಬಾ ಶ್ರಮವಾಯ್ತು. ನಾನು ಕಠಿಣ ಪರಿಶ್ರಮಿ ಮತ್ತು ಶ್ರದ್ಧೆಯಿಂದ ಕೆಲಸ ಮಾಡುವ ನಟಿ ಎಂದು ಭಾವಿಸಿದ್ದೇನೆ. ಹಾಗೆ ಅಲ್ಲದಿದ್ದರೂ ಪಾತ್ರದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವುದಂತೂ ನಿಜ. ಜನರು ಈ ಸಿನಿಮಾ ಒಪ್ಪಿಕೊಂಡರೆ ನನ್ನ ಶ್ರಮವೆಲ್ಲಾ ಸಾರ್ಥಕ” ಎನ್ನುತ್ತಾರೆ ಜಾಹ್ನವಿ. ಇನ್ನು ಅವರ ನಟನೆಯ ‘ರೂಹಿ’ ತಿಂಗಳುಗಳ ಹಿಂದೆ ತೆರೆಕಂಡಿತ್ತು. ಅವರ ‘ಗುಡ್ ಲಕ್ ಜೆರ್ರಿ’, ‘ದೋಸ್ತಾನಾ 2’, ‘ತಕ್ತ್‌’ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ‘ಮಿಲಿ’ ಮುಂದಿನ ವರ್ಷದ ಮಧ್ಯದಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here