ಚಲನಚಿತ್ರ ಸಂಭಾಷಣೆಕಾರ ಪ್ರಸನ್ನ ವಿ.ಎಂ. ಬರೆದು ನಿರ್ದೇಶಿಸಿರುವ ‘ಇಕ್ಷಣ’ ಕಿರುಚಿತ್ರ ಬಿಡುಗಡೆಯಾಗಿದೆ. ಸಂಪ್ರದಾಯವಾದಿ ತಂದೆ, ಸ್ವತಂತ್ರ್ಯ ವ್ಯಕ್ತಿತ್ವದ ಮಗಳ ಮಧ್ಯೆಯ ಮನಸಿನ ತಾಕಲಾಟ ಚಿತ್ರದ ವಸ್ತು. ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ, ಹಿರಿಯ ಕಲಾವಿದರಾ ಕೆ.ಎಸ್ ಶ್ರೀಧರ್ ಮತ್ತು ಡಾ. ಸೀತಾ ಕೋಟೆ ಮುಖ್ಯಪಾತ್ರಗಳಲ್ಲಿದ್ದಾರೆ.
ಸಂದೇಶಗಳುಳ್ಳ ಕಿರುಚಿತ್ರಗಳು ಸುದ್ದಿ ಮಾಡುತ್ತಿರುವ ಈ ದಿನಗಳಲ್ಲಿ ಪ್ರಸನ್ನ ವಿ.ಎಂ.ನಿರ್ದೇಶನದ ‘ಇಕ್ಷಣ’ ಹೊಸ ಸೇರ್ಪಡೆ. ‘ಫ್ಲಿಕರಿಂಗ್ ಸ್ಟುಡಿಯೋಸ್’ನ ಸುಸ್ಮಿತಾ ಸಮೀರ್ ನಿರ್ಮಾಣದ ಕಿರುಚಿತ್ರವನ್ನು ನಟ ಗಣೇಶ್ ಬಿಡುಗಡೆಗೊಳಿಸಿದ್ದಾರೆ. ಈ ಕಥೆಯು ಒಂದು ಮನೆಯ ಏಕೈಕ ಪ್ರಾಬಲ್ಯ ಸ್ತಂಭವಾಗಿರುವ ಸಂಪ್ರದಾಯವಾದಿ ತಂದೆ ಮತ್ತು ಸ್ವತಂತ್ರವಾಗಿ ಕೆಲಸ ಮಾಡುತ್ತಿರುವ ಮಗಳು ತನ್ನ ಸ್ಥಾನವನ್ನು ಹುಡುಕಲು ಪ್ರಯತ್ನಿಸುತ್ತಿರುವ ಚರ್ಚೆಯ ಸುತ್ತ ಹೆಣೆಯಲಾಗಿದೆ. ಸಮಾಜ ನಿರ್ಮಿತ ನಿಯಮ, ಕಟ್ಟುಪಾಡುಗಳನ್ನು ಚರ್ಚಿಸುವ ಉದ್ದೇಶ ಕಿರುಚಿತ್ರದ್ದು. ಮನೆಯಲ್ಲಿ ಒಂದು ಕಪ್ ಕಾಫಿಗಾಗಿ ನಡೆವ ಸಣ್ಣ ವಾದವು ಕೆಲವು ಸೂಕ್ಷ್ಮ ಆಲೋಚನೆಗಳಿಗೆ ಇಲ್ಲಿ ಎಡೆಮಾಡಿಕೊಡುತ್ತದೆ.
ಕಿರುಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ, ಹಿರಿಯ ಕಲಾವಿದರಾದ ಕೆ.ಎಸ್ ಶ್ರೀಧರ್ ಮತ್ತು ಡಾ. ಸೀತಾ ಕೋಟೆ ನಟಿಸಿದ್ದಾರೆ. ಈ ಕಿರುಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕ ಮಹೇಂದರ್ ಸಿಂಹ, ಸಂಕಲನಕಾರ ಶ್ರೀಕಾಂತ್ ಎಸ್.ಎಚ್. ಮತ್ತು ಸಂಗೀತಕ್ಕಾಗಿ ಜುಬಿನ್ ಪೌಲ್ ಅವರಂತಹ ತಂತ್ರಜ್ಞರು ಕೆಲಸ ಮಾಡಿರುವುದು ವಿಶೇಷ. ಜಯಂತಿ ಕಾಫಿ ಕಿರುಚಿತ್ರಕ್ಕೆ ಪ್ರಾಯೋಜಕತ್ವ ನೀಡಿದೆ. “ಕಿರುಚಿತ್ರಗಳು ಸಣ್ಣ ಸಣ್ಣ ವಿಚಾರಗಳನ್ನು ತುಂಬಾ ಪ್ರಭಾವಶಾಲಿಯಾಗಿ ಕನ್ವೇ ಮಾಡುತ್ತವೆ. ದಿನನಿತ್ಯ ನಮ್ಮ ಕುಟುಂಬಗಳಲ್ಲಿ ನಡೆಯುವ ವಿದ್ಯಾಮಾನಗಳ ಸೂಕ್ಷ್ಮ ವಿಚಾರವನ್ನು ‘ಇಕ್ಷಣ’ ಹೇಳಿದೆ. ನಿರ್ದೇಶಕ ಪ್ರಸನ್ನ ಅವರಿಂದ ಮುಂದೆ ಇನ್ನಷ್ಟು ಕತೆಗಳು ನಿರೂಪಣೆಗೊಳ್ಳಲಿ” ಎಂದು ನಟ ಗಣೇಶ್ ಶುಭಹಾರೈಸಿದ್ದಾರೆ.