ಶಂಕರ್ ಕೋನಮಾನಹಳ್ಳಿ ನಿರ್ದೇಶನದ ‘ಶಂಭೋ ಶಿವ ಶಂಕರ’ ಚಿತ್ರದ ಹಾಡನ್ನು ಭಾರತ-ಚೀನಾ ಗಡಿಯ ಲಾಹೌಲ್ ಸ್ಪಿಟಿಯಲ್ಲಿ ಚಿತ್ರಿಸಲಾಗಿದೆ. ಶೂಟಿಂಗ್ ಮುಗಿದಿದ್ದು 2022ರ ಫೆಬ್ರವರಿಗೆ ಸಿನಿಮಾ ಬಿಡುಗಡೆ ಮಾಡುವುದು ನಿರ್ಮಾಪಕರ ಯೋಜನೆ.
ಅದು ಭಾರತ – ಚೀನಾ ಗಡಿಯಲ್ಲಿನ ಲಾಹೌಲ್ ಸ್ವಿಟಿ. ಮೈನಸ್ ಹತ್ತಕ್ಕೂ ಕಡಿಮೆ ಸೆಂಟಿಗ್ರೇಡ್ ಇರುವ ಶೀತಲ ಪ್ರದೇಶದಲ್ಲಿ ‘ಶಂಭೋ ಶಿವ ಶಂಕರ’ ಸಿನಿಮಾದ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಗೌಸ್ ಪೀರ್ ರಚಿಸಿರುವ ಹಾಡಿಗೆ ಹಿತನ್ ಹಾಸನ್ ಸಂಗೀತ ಸಂಯೋಜಿಸಿದ್ದು, ನಾಲ್ಕು ದಿನಗಳ ಕಾಲ ಹಾಡು ಚಿತ್ರಿಸಿದೆ ಚಿತ್ರತಂಡ. ಕಲೈ ಮಾಸ್ಟರ್ ನೃತ್ಯ ನಿರ್ದೇಶನದ ಹಾಡಿಗೆ ಹೀರೊ ಅಭಯ್ ಪುನೀತ, ನಾಯಕಿ ಸೋನಾಲ್ ಮಾಂಟೆರೊ ಹೆಜ್ಜೆ ಹಾಕಿದ್ದಾರೆ. “ಮೂವತ್ತು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಚಿತ್ರಿಸಿರುವ ಈ ಹಾಡಿನೊಂದಿಗೆ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಫೆಬ್ರವರಿ ವೇಳೆಗೆ ಚಿತ್ರವನ್ನು ತೆರೆಗೆ ತರಲಿದ್ದೇವೆ” ಎನ್ನುತ್ತಾರೆ ನಿರ್ದೇಶಕರು.
ಈಗಾಗಲೇ ಚಿತ್ರದ ಆಡಿಯೋ ಹಕ್ಕು ಆನಂದ್ ಆಡಿಯೋ ಸಂಸ್ಥೆಗೆ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರೇ ಕತೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ವರ್ತೂರು ಮಂಜು ನಿರ್ಮಿಸುತ್ತಿದ್ದಾರೆ. ಹಿತನ್ ಹಾಸನ್ ಸಂಗೀತ, ಧರ್ಮ ವಿಶ್ ಹಿನ್ನೆಲೆ ಸಂಗೀತ, ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದೆ. ‘ಶಂಭೋ ಶಿವ ಶಂಕರ’ ಮೂರು ನಾಯಕ ಪಾತ್ರಗಳ ಹೆಸರುಗಳು. ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಶಶಿಕುಮಾರ್, ಸೋನಾಲ್ ಮಾಂಟೆರೊ, ಜೋಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್’, ಡಿ.ಸಿ.ತಮ್ಮಣ್ಣ ಮತ್ತಿತರರು ತಾರಾಬಳಗದಲ್ಲಿದ್ದಾರೆ.