ವಿಜಯಕುಮಾರ್‌ ಕೊಂಡ ನಿರ್ದೇಶನದಲ್ಲಿ ನಿಖಿಲ್‌ ಕುಮಾರಸ್ವಾಮಿ ನಟಿಸಿರುವ ‘ರೈಡರ್‌’ ಸಿನಿಮಾದ ಟ್ರೈಲರ್‌ ಹೊರಬಿದ್ದಿದೆ. ಮೂರು ನಿಮಿಷಗಳ ಟ್ರೈಲರ್‌ನಲ್ಲಿ ಲವ್‌, ಆಕ್ಷನ್‌, ಕಾಮಿಡಿ, ಡ್ರಾಮಾ… ಎಲ್ಲವೂ ಇದ್ದು ಇದನ್ನೊಂದು ಫ್ಯಾಮಿಲಿ ಪ್ಯಾಕೇಜ್‌ ಆಗಿ ಸಿದ್ಧಪಡಿಸಿರುವ ಸೂಚನೆ ನೀಡಿದ್ದಾರೆ ನಿರ್ದೇಶಕರು.

ನಿಖಿಲ್‌ ಕುಮಾರಸ್ವಾಮಿ ಅಭಿನಯದ ‘ರೈಡರ್‌’ ಟ್ರೈಲರ್‌ ಬಿಡುಗಡೆಯಾಗಿದ್ದು, ಸಿನಿಮಾ ಮತ್ತೆ ಸುದ್ದಿಯಾಗಿದೆ. ಇತ್ತೀಚೆಗೆ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದವು. ಸುಂದರ ಲೊಕೇಲ್‌ಗಳಲ್ಲಿ ಚಿತ್ರಣಗೊಂಡ ಹಾಡುಗಳಿಗೆ ಉತ್ತಮ ಸಂಗೀತ ಸಂಯೋಜನೆಯೂ ಇತ್ತು. ಈಗ ಟ್ರೈಲರ್‌ ರಿಲೀಸ್‌ ಆಗಿದ್ದು, ಮುಂದಿನ ವಾರ ಸಿನಿಮಾ ತೆರೆಗೆ ಬರುತ್ತಿದೆ. ನಿರ್ದೇಶಕ ವಿಜಯಕುಮಾರ್‌ ಕೊಂಡ ಟ್ರೈಲರ್‌ನಲ್ಲಿ ಲವ್‌, ಆಕ್ಷನ್‌, ಕಾಮಿಡಿ ಜೊತೆಗೆ ಫ್ಯಾಮಿಲಿ ಡ್ರಾಮಾವನ್ನೂ ಹದವಾಗಿ ಬರೆಸಿದ್ದಾರೆ. ಮೊದಲ ನೋಟಕ್ಕೆ ಇದೊಂದು ಫ್ಯಾಮಿಲಿ ಪ್ಯಾಕೇಜ್‌ ಎನಿಸುತ್ತಿದ್ದು, ಹೀರೋ ನಿಖಿಲ್‌ ಪ್ರತೀ ಸೀನ್‌ಗಳಲ್ಲಿ ಗಮನ ಸೆಳೆಯುತ್ತಾರೆ. ವಿಶೇಷವಾಗಿ ಆಕ್ಷನ್‌ ಸನ್ನಿವೇಶಗಳಲ್ಲಿ ಅವರ ಎನರ್ಜಿ ಹೆಚ್ಚೇ ಇದೆ. ‘ಕೆಜಿಎಫ್‌’ ಖ್ಯಾತಿಯ ಗರುಡ ರಾಮ್‌ ಅವರ ಖಳನ ಪಾತ್ರ ರಿವೀಲ್‌ ಆಗಿದೆ. ಮುದ್ದುಮುಖದ ನಾಯಕಿ ಕಶ್ಮೀರಾ ಪರದೇಸಿ, ಹಾಸ್ಯ ಪಾತ್ರಗಳಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌.ಪೇಟೆ ಅವರ ಸನ್ನಿವೇಶಗಳಿವೆ.

“ನಾವೇನೋ ಸಿನಿಮಾ ಮಾಡಿರುತ್ತೇವೆ. ಆದರೆ, ಪ್ರೇಕ್ಷಕರ ಮುಂದಿಡುವ ಸಮಯ ಬಂದಾಗ, ನಾವು ಅವರಿಗೆ ಬೇಕಾದ ಹಾಗೆ ಸಿನಿಮಾ ಮಾಡಿದ್ದೀವಾ? ಎಂಬ ಪ್ರಶ್ನೆ ಕಾಡುತ್ತದೆ. ಕಾಡಲೂಬೇಕು. ಆದರೂ ನಮ್ಮ ತಂಡಕ್ಕೆ ಒಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ವಿಶ್ವಾಸವಿದೆ. ನಮ್ಮನ್ನು ಗುರುತಿಸಬೇಕಾದರೆ ನಾವು ಹೆಚ್ಚಿನ ಶ್ರಮ ಪಡಬೇಕು. ಆಗ ಖಂಡಿತಾ ಜನ ಒಪ್ಪಿಕೊಳ್ಳುತ್ತಾರೆ” ಎಂದು ಇತ್ತೀಚಿನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು ನಿಖಿಲ್‌. ‘ಸೀತಾರಾಮ ಕಲ್ಯಾಣ’ ಚಿತ್ರದ ನಂತರ ಪೂರ್ಣ ಪ್ರಮಾಣದಲ್ಲಿ ಅವರು ಹೀರೋ ಆಗಿ ನಟಿಸುತ್ತಿರುವ ಮೂರನೇ ಚಿತ್ರವಿದು. ದರ್ಶನ್‌ರ ‘ಕುರುಕ್ಷೇತ್ರ’ ಚಿತ್ರದಲ್ಲಿ ಅವರು ಅಭಿಮನ್ಯು ಪಾತ್ರದಲ್ಲಿದ್ದರು. ಸುನೀಲ್ ಮತ್ತು ಲಹರಿ ಚಂದ್ರು ಚಿತ್ರದ ನಿರ್ಮಾಪಕರು. ಅಚ್ಯುತ್‌ ಕುಮಾರ್‌, ಮಂಜು ಪಾವಗಡ, ನರಸಿಂಹ ಜಾಲಹಳ್ಳಿ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಭೂಷಣ್‌ ನೃತ್ಯ ನಿರ್ದೇಶನ, ಅರ್ಜುನ್‌ ಸಾಹಸ ಸಂಯೋಜನೆ, ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here