ತಾರಾ ಜೋಡಿ ದಿಗಂತ್ – ಐಂದ್ರಿತಾ ರೇ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಟ್ರೈಲರ್‌ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ ಮೂಲಕ ಬಿಡುಗಡೆಯಾಗಿದೆ. ಮಲೆನಾಡಿನಲ್ಲಿ ಚಿತ್ರಿಸಿರುವ ಸಿನಿಮಾ ಅಡಿಕೆ ಬೆಳೆಗಾರರ ಕಷ್ಟ-ಸುಖಗಳನ್ನು ಹೇಳಲಿದೆ.

ವಿನಾಯಕ ಕೋಡ್ಸರ ನಿರ್ದೇಶನದ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾ ಇತ್ತೀಚೆಗೆ ವಿನೂತನ ಪ್ರಚಾರದಿಂದಾಗಿ ಸುದ್ದಿಯಾಗಿತ್ತು. ಶಿರಸಿಯಲ್ಲಿ ಚಿತ್ರತಂಡ ಅಡಿಕೆ ಸುಲಿಯುವ ಸ್ಪರ್ಧೆ ಏರ್ಪಡಿಸಿತ್ತು. ಇಂದು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಮಲೆನಾಡಿನ ಪರಿಸರ ಹಾಗೂ ಅಲ್ಲಿನ ಸಾಮಾಜಿಕ ಬದುಕಿನ ಕುರಿತ ಕತೆ ಹೇಳುತ್ತಿದೆ. ಟ್ರೈಲರ್‌ನಲ್ಲಿ ಪರಿಚಯವಾಗುವ ಎಂಟ್ಹತ್ತು ಪಾತ್ರಗಳು ಗಮನ ಸೆಳೆಯುತ್ತವೆ. ದಿಗಂತ್‌, ಐಂದ್ರಿತಾ ರೇ ಮತ್ತು ರಂಜಿನಿ ರಾಘವನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿಲ್ಕ್ ಮಂಜು ನಿರ್ಮಾಣದ ಚಿತ್ರಕ್ಕೆ ರವೀಂದ್ರ ಜೋಶಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ನಿರ್ದೇಶನ, ನಂದಕಿಶೋರ್ ಛಾಯಾಗ್ರಹಣ ಚಿತ್ರಕ್ಕಿದೆ.

“ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿದ್ದು, ಅಡಿಕೆ ಜೊತೆ ಪಾತ್ರದ ನಂಟಿದೆ. ಹೀಗಾಗಿ‌ ಮಲೆನಾಡಿನ ಜೀವನಾಡಿಯಾದ ಅಡಿಕೆ ಸುಲಿಯುವ ಸ್ಪರ್ಧೆ ಆಯೋಜಿಸುವ ಮೂಲಕ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದೆವು. ಚಿತ್ರದಲ್ಲಿ ಪ್ರೇಮಕತೆಯ ಜೊತೆಗೆ ಅಡಿಕೆ ಬೆಳೆಗಾರರ ಕಷ್ಟ-ಸುಖಗಳ ಬಗ್ಗೆ ಗಮನ ಸೆಳೆಯುವ ಸನ್ನಿವೇಶಗಳಿವೆ. ಸಿನಿಮಾ ಮೂಲಕ ಸ್ಥಳೀಯ ರೈತರ ಬದುಕನ್ನು ಹೇಳುವ ಪ್ರಯತ್ನವೂ ಇಲ್ಲಿದೆ” ಎನ್ನುತ್ತಾರೆ ನಿರ್ದೇಶಕ ವಿನಾಯಕ ಕೋಡ್ಸರ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಅವರು ಆಲೋಚಿಸುತ್ತಿದ್ದು, ಬಿಡುಗಡೆ ದಿನಾಂಕ ಸದ್ಯದಲ್ಲೇ ಹೊರಬೀಳಲಿದೆ.

LEAVE A REPLY

Connect with

Please enter your comment!
Please enter your name here